ಮೊಳಕಾಲ್ಮುರು: ಕಮ್ಮಾರಿಕೆ ವೃತ್ತಿಯನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಕಮ್ಮಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಡಿ ಸೌಲಭ್ಯಗಳು ತಲುಪುತ್ತಿಲ್ಲ. ಪರಿಣಾಮ ಸಮಾಜದಲ್ಲಿ ಕಮ್ಮಾರ ಸಮುದಾಯ ಇಂದಿಗೂ ಅತ್ಯಂತ ಹಿಂದುಳಿಯುವಂತಾಗಿದೆ ಎಂದು ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಂಜಣ್ಣ ಕಮ್ಮಾರ್ ಹೇಳಿದರು.
ವಿಶ್ವಕರ್ಮ ಸಮುದಾಯಗಳ 41 ಉಪ ಜಾತಿಗಳಲ್ಲಿ ಕಮ್ಮಾರ ಸಮುದಾಯವು ಒಂದಾಗಿದೆ. ಬಸವಣ್ಣನವರ ಅನುಯಾಯಿಯಾದ ಶ್ರೀ ಸಿದ್ದರಾಮೇಶ್ವರರ ಆಪ್ತರಾಗಿ ಧರ್ಮಪ್ರವರ್ತಕರಾಗಿ ಶರಣ ಪರಂಪರೆ ಬೆಳೆಸಲು ಬುನಾದಿಯಾಗಿದ್ದ ಮಹಾಶರಣ ಕಮ್ಮಾರ ಕಲ್ಲಯ್ಯ ಅವರ ಜಯಂತಿಯನ್ನು ಸರ್ಕಾರ ಆಚರಣೆಗೆ ಆದೇಶಿಸಬೇಕು. ಇದಕ್ಕಾಗಿ ಸಮುದಾಯ ಸರ್ಕಾರಕ್ಕೆ ಒತ್ತಡ ತರಲು ಮುಂದಾಗಬೇಕು ಎಂದರು.
ವಿಶ್ವಕರ್ಮ ಸಮಾಜದ ನಾಮನಿರ್ದೇಶನ ಸದಸ್ಯ ಆರ್. ಗೋವಿಂದರಾಜು ಮಾತನಾಡಿ, ಕಮ್ಮಾರ ಸಮಾಜ ತುಳಿತಕ್ಕೆ ಒಳಗಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ದುರ್ಬಲ ಬದುಕನ್ನು ಸವೆಸುತ್ತಿದ್ದಾರೆ. ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕು. ಸಮುದಾಯದ ಬಾಳು ಹಸನಾಗಿಸಲು ಯುವಕರು ವಿದ್ಯಾವಂತರಾಗಲೇಬೇಕು. ಪ್ರತಿ ಮಕ್ಕಳು ಶಾಲೆಗೆ ಹೋಗುವಂತಾಗಬೇಕು ಎಂದರು.ಸಮಾಜದ ಮಹಿಳಾ ಸಂಘದ ಸದಸ್ಯರು ಕಮ್ಮಾರ ಕಲ್ಲಯ್ಯನವರ ಕುರಿತ ಕೃತಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಕಮ್ಮಾರ ಸಂಘದ ನಿರ್ದೇಶಕ ಎನ್. ಹನುಮಂತಯ್ಯ, ಗೌರವಾಧ್ಯಕ್ಷ ಹೊನ್ನೂರಪ್ಪ, ಮಾಜಿ ಸೈನಿಕ ಚಂದ್ರಶೇಖರ್, ದೇವಾಲಯದ ಕಾರ್ಯದರ್ಶಿ ಕೆ.ಪಿ.ಶಿವಣ್ಣ, ಆನಂದ್, ಕಮ್ಮಾರ ಸಂಘದ ನಿರ್ದೇಶಕರಾದ ನೀಲಮ್ಮ, ಕವಿತಾ, ರೂಪ ಇದ್ದರು.