ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗ ಸರ್ಕಾರ ರಕ್ಷಿಸಲಿ

KannadaprabhaNewsNetwork | Published : Dec 26, 2023 1:31 AM

ಸಾರಾಂಶ

ಶಿವಮೊಗ್ಗ ಜಿಲ್ಲೆ ಜನರಲ್ಲಿ ನೆನಪೇ ಇಲ್ಲದೇಹೋಗಿದ್ದ ತುಂಗಭದ್ರಾ ಸಕ್ಕರೆ ಕಾರ್ಖಾನೆ ಹೆಸರು ಮತ್ತೆ ಚಾಲ್ತಿಗೆ ಬರುತ್ತಿದೆ. ಅದೂ ಮುಚ್ಚಿಹೋಗಿರುವ ಕಾರ್ಖಾನೆಯಿಂದಾಗಿ ಉದ್ಭವಿಸಿರುವ ಸಮಸ್ಯೆಯಿಂದಾಗಿ. ನ್ಯಾಯಾಲಯ ಆದೇಶದಂತೆ ತುಂಗಭದ್ರಾ ಸಕ್ಕರೆ ಕಾರ್ಖಾನೆ ಒಡೆತನದ ಪಾಲಾಗಿರುವ ಜಾಗದಲ್ಲಿ ಒಂದು ಗುಂಟೆಯಾದರೂ ನನ್ನ ಪಾಲಿದೆ ಎಂದು ಸಾಬೀತುಪಡಿಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಸವಾಲು ಎಸೆದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನ್ಯಾಯಾಲಯ ಆದೇಶದಂತೆ ತುಂಗಭದ್ರಾ ಸಕ್ಕರೆ ಕಾರ್ಖಾನೆ ಒಡೆತನದ ಪಾಲಾಗಿರುವ ಜಾಗದಲ್ಲಿ ಒಂದು ಗುಂಟೆಯಾದರೂ ನನ್ನ ಪಾಲಿದೆ ಎಂದು ಸಾಬೀತುಪಡಿಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಸವಾಲು ಎಸೆದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತುಂಗಭದ್ರಾ ಸಕ್ಕರೆ ಕಾರ್ಖಾನೆಗೆ ಸೇರಿದ ಭೂಮಿಯಲ್ಲಿ ನನ್ನ ಪಾಲುದಾರಿಕೆ ಇದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ರೈತರ ಜಮೀನಿನಲ್ಲಿ ಪಾಲು ಹೊಂದುವ ಸಂಸ್ಕೃತಿ ನಮ್ಮ ಪಕ್ಷ ನನಗೆ ಕಲಿಸಿಕೊಟ್ಟಿಲ್ಲ. ಒಂದುವೇಳೆ ನನ್ನ ಪಾಲಿದ್ದರೆ ದೇವರೇ ನನ್ನ ನೋಡಿಕೊಳ್ಳುತ್ತಾನೆ. ನನಗೆ 1 ಗುಂಟೆಯ ಪಾಲಿದೆ ಎಂದು ಸಾಬೀತುಪಡಿಸಬೇಕು. ಇಲ್ಲವೆಂದರೆ ನನ್ನ ಮೇಲೆ ಆರೋಪ ಮಾಡಿದ ಕಾಂಗ್ರೆಸ್ ನಾಯಕನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.

1950ರಲ್ಲಿ ಪ್ರಾರಂಭವಾದ ತುಂಗಭದ್ರಾ ಸಕ್ಕರೆ ಕಾರ್ಖಾನೆ 1984ರವರೆಗೆ ಉತ್ತಮವಾಗಿ ನಡೆಯುತ್ತಿತ್ತು. 1994 ರಲ್ಲಿ ಚೆನ್ನೈನ ದೇವಿ ಶುಗರ್ ವರ್ಕ್ಸ್ ಕಂಪನಿಯವರಿಗೆ ವಹಿಸಿದ್ದರು. ಅನಂತರ ಸಾಲ ತೀರಿಸಲು ಸಾಧ್ಯವಾಗದೇ ಚೆನ್ನೈ ಹೈಕೋರ್ಟ್ ಲಿಕ್ವಿಡೇಷನ್ ಮಾಡಿ ಆದೇಶ ಹೊರಡಿಸಿತ್ತು. ಅನಂತರ ಕೋರ್ಟ್‌ನಲ್ಲಿ ತೀರ್ಮಾನವಾಗಿ ತೀರ್ಪು ಕಂಪನಿಯ ಪರ ಬಂದಿತ್ತು. 12 ವಾರಗಳಲ್ಲಿ ತುಂಗಭದ್ರಾ ಶುಗರ್ ಕಂಪನಿಗೆ ಸರ್ಕಾರಿ ಕಂದಾಯ ಪಾವತಿ ಮಾಡಿಸಿಕೊಂಡು ಜಮೀನನ್ನು ವಾಪಸ್‌ ಮಾಡಲು ಆದೇಶ ಆಗಿದೆ. ಮಲವಗೊಪ್ಪ, ಹರಿಗೆ, ತೋಪಿನಘಟ್ಟ, ಯರಗನಾಳ್, ತರಗನಹಳ್ಳಿ, ನಿದಿಗೆ, ಸದಾಶಿವಪುರ ಮೊದಲಾದ ಗ್ರಾಮಗಳಲ್ಲಿ ಇರುವ ಜಮೀನು ಕಂಪನಿಗೆ ಹಿಂದಿರುಗಿಸಬೇಕಾಗಿದೆ. ಇದರಿಂದಾಗಿ ಜಮೀನು ಉಳುಮೆ ಮಾಡುತ್ತಿರುವ ರೈತರು ಹಾಗೂ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಸಂಕಷ್ಟ ಎದುರಾಗಿದೆ ಎಂದು ದೂರಿದರು.

ಒಕ್ಕಲೆಬ್ಬಿಸಲು ಅವಕಾಶ ಬೇಡ:

ಕಾರ್ಖಾನೆ ಇರುವ ಪ್ರದೇಶ ಹೊರತುಪಡಿಸಿ ಉಳಿದ ಕಡೆಯ ಜಾಗಗಳಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳು ಇವೆ. ಈ ಜಾಗದಲ್ಲಿ ಕೆಲವರು ಲೇಔಟ್‌ ಮಾಡುವ ಉದ್ದೇಶದಿಂದ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು, ರಾಜ್ಯ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯಾಲಯಕ್ಕೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ರೈತರು ಮತ್ತು ನಿವಾಸಿಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.ಸಕ್ರಮಕ್ಕಾಗಿ ರೈತರು ಅರ್ಜಿಯನ್ನು ಹಾಕಿಕೊಂಡಿದ್ದು ಸರ್ಕಾರ ಕೂಡಲೇ ಸಾಗುವಳಿ ಚೀಟಿ ಕೊಡಬೇಕು. ಸಕ್ಕರೆ ಕಾರ್ಖಾನೆ ಜಾಗದಲ್ಲಿ ಲೇಔಟ್ ಅಪ್ರೂವಲ್ ಮಾಡಿಕೊಂಡು ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಈ ಪ್ರದೇಶಗಳಲ್ಲಿ ವಾಸದ ಮನೆ ಮತ್ತು ಜಮೀನನ್ನು ರೈತರು ಉಳುಮೆ ಮಾಡುತ್ತಿರುವ ವಿಚಾರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸಬಾರದು, ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ರೈತರ ಪರ ಅಪೀಲು ಸಲ್ಲಿಸಬೇಕು. ಸಕ್ಕರೆ ಕಾರ್ಖಾನೆ ಎಂದು ಹೇಳಲಾಗುತ್ತಿರುವ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ನಿರ್ಮಾಣ ಕೆಲಸ ವೇಗವಾಗಿ ನಡೆಯುತ್ತಿದೆ. ಇದರ ಹಿಂದೆ ಸರ್ಕಾರದ ದೊಡ್ಡ ನಾಯಕರ ಕೈವಾಡವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಶಿವರಾಜು, ಮಾಜಿ ಶಾಸಕ ಕೆ.ಬಿ ಅಶೋಕ ನಾಯ್ಕ, ಗಿರೀಶ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

- - - (-ಫೋಟೋ: ಬಿ.ವೈ.ರಾಘವೇಂದ್ರ)

Share this article