ಕನ್ನಡಪ್ರಭ ವಾರ್ತೆ ಹಾಸನ
ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ರೈತರು, ಬೆಳೆಗಾರರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರೊಂದಿಗೆ ಬೇಲೂರು ತಾಲೂಕಿನ ಬಿಕ್ಕೋಡಿನಿಂದ ಬೈಕ್, ಆಟೋ ರ್‍ಯಾಲಿ ಮೂಲಕ ನಗರದ ಹೇಮಾವತಿ ಪ್ರತಿಮೆ ಮುಂದೆ ಐದು ದಿನದ ಪ್ರತಿಭಟನಾ ಧರಣಿ ಜಯಕರ್ನಾಟಕ ಸಂಘಟನೆಯು ಮಂಗಳವಾರದಿಂದ ಆರಂಭಿಸಲಾಯಿತು.ಜಯಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಮಾತನಾಡಿ, ಜಿಲ್ಲೆಯ ಬೇಲೂರು, ಆಲೂರು, ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿನ ಕಾಡಾನೆಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಬೇಲೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ದಿನದಿಂದ ದಿನಕ್ಕೆ ಹೆಚ್ಚು ನಾಶವಾಗುತ್ತಿದೆ. ಬೇಲೂರು ತಾಲೂಕಿನಲ್ಲಿ ಈಗಾಗಲೇ ೬೦ ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ ಎಂದರು.ಈಗ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿರುವುದರಿಂದ ಜನರು ಸರ್ಕಾರದ ವಿರುದ್ಧ ಮಾತನಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ಮತ್ತು ಅಧಿಕಾರಿಗಳು ಜನರ ಕಣ್ಣೂರೆಸುವ ಸಲುವಾಗಿ ಆರು ದಸರಾ ಸಾಕಾನೆಗಳನ್ನು ಬೇಲೂರು ತಾಲೂಕಿಗೆ ಕರೆಸಿ ಕಾಡಾನೆಗಳಿಗೆ ಕೇವಲ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಆನೆಗಳು ಎಲ್ಲಿವೆ ಎಂಬುದನ್ನು ಮಾತ್ರ ಗುರುತು ಮಾಡಬಹುದೇ ಹೊರತು ರೈತರ ಬೆಳೆ ನಾಶ ತಪ್ಪಿಸಲು ಸಾಧ್ಯವಿಲ್ಲ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಎರಡು ದಶಕಗಳ ಹಿಂದೆಯೇ ಪ್ರಾರಂಭದಲ್ಲಿ ಕೊಡಗು ಕಾಡಿನಿಂದ ಜಿಲ್ಲೆಯ ಸಕಲೇಶಪುರ ಗಡಿ ಭಾಗಕ್ಕೆ ಬಂದಂತಹ ಸಂದರ್ಭದಲ್ಲೆ ಸರ್ಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆನೆಗಳನ್ನು ದೂರದ ಕಾಡಿಗೆ ಓಡಿಸಿದ್ದಿದ್ದರೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ. ಜಿಲ್ಲೆಯಲ್ಲಿ ಆನೆಗಳ ದಾಳಿಗೆ ಈಗಾಗಲೇ ಸಾಕಷ್ಟು ಅಮಾಯಕ ಜೀವಗಳೂ ಬಲಿಯಾಗುತ್ತಿರಲಿಲ್ಲ. ಜೊತೆಗೆ ಗಾಯ ಗೊಳ್ಳುತ್ತಿರಲಿಲ್ಲ ಎಂದರು.
ಅಂದಿನ ಅಧಿಕಾರಿಗಳ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ಬೇಲೂರು-ಆಲೂರು-ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಕಾಡಾನೆಗಳು ಬೀಡು ಬಿಟ್ಟು ರೈತರ, ಬೆಳೆಗಾರರ ತೋಟ, ಜಮೀನುಗಳಿಗೆ ನುಗ್ಗಿ ರೈತರು ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಬೆಳೆಗಳನ್ನು ಕ್ಷಣಾರ್ಧದಲ್ಲಿ ನಾಶ ಪಡಿಸುತ್ತಿವೆ ಎಂದರು.ಜನ ವಸತಿ ಪ್ರದೇಶಗಳ ಆಸುಪಾಸಿನಲ್ಲೆ ಹಗಲು ರಾತ್ರಿ ಎನ್ನದೆ ಬೀಡು ಬಿಡುವುದಲ್ಲದೆ ಗ್ರಾಮದ ಮನೆ ಮುಂದಿನ ರಸ್ತೆಯಲ್ಲೆ ಓಡಾಡುತ್ತಿರುವುದರಿಂದ ಎಲ್ಲಿ ಯಾವಾಗ ದೊಡ್ಡ ಅವಘಡ ಸಂಭವಿಸುತ್ತದೆ ಎಂಬ ಆತಂಕ ಮತ್ತು ಜೀವ ಭಯದಲ್ಲೆ ಜನರು ದಿನ ದೂಡುವಂತ್ತಾಗಿದ್ದು, ಹಬ್ಬ ಹರಿದಿನಗಳನ್ನು ಸಂತೋಷದಿಂದ ಆಚರಿಸಲಾಗದೆ ಜಿಗುಪ್ಪೆ ಪಡುವಂತ್ತಾಗಿದೆ. ಹಾಗೂ ಆಹಾರ ಅರಸಿ ಕಾಡಾನೆಗಳು ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು, ಅರೇಹಳ್ಳಿ, ಬಿಕ್ಕೋಡು ಪಟ್ಟಣಕ್ಕೂ ಹಾಗಿಂದಾಗ್ಗೆ ಬಂದು ಹೋಗುತ್ತಿರುವ ಘಟನೆಗಳು ನಡೆಯುತ್ತಿದೆ ಎಂದು ಹೇಳಿದರು. ಜಯಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೆಶ್, ರಾಜ್ಯ ಕಾರ್ಯಧ್ಯಕ್ಷ ರಾಮಚಂದ್ರಯ್ಯ, ಉಪಾಧ್ಯಕ್ಷ ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಗಗನ್ ರಾಜು, ಮಹಿಳ ಸಂಘಟನ ಕಾರ್ಯದರ್ಶಿ ದಿವ್ಯ ಸೋಮಶೇಖರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬೇಲೂರು ತಾಲೂಕು ಅಧ್ಯಕ್ಷ ರಾಜು, ಆಲೂರು ಸಂದೇಶ್, ರಾಜ್ಯ ಸಂ ಕಾರ್ಯದರ್ಶಿ ವಾಸು, ಸಂಗಮ್ ಜಿಲ್ಲಾ ಕಾರ್ಯಾಧ್ಯಕ್ಷ, ಕಾಪಿ ಬೆಳೆಗಾರರ ಅಧ್ಯಕ್ಷ ಅದ್ಧೂರಿ ಕುಮಾರ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯ ಮಲ್ಲೇಶ್ ಅಂಬೂಗ ಇದ್ದರು.