ಬೀದರ್: ಸರ್ಕಾರೇತರ ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಮುಖ್ಯವಾದ ದೇವಸ್ಥಾನಗಳ ಜಾತ್ರೆಗಳಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕೆಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ.ರಾಜಶೇಖರ ಶಿವಾಚಾರ್ಯರರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕಮಠಾಣಾ ಗ್ರಾಮದಲ್ಲಿರುವ ಶರಭಾವತಾರ ವೀರಭದ್ರೇಶ್ವರರ 15ನೇ ಜಾತ್ರೆಯ ನಿಮಿತ್ತ ನಡೆದ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಅಧೀನದಲ್ಲಿರುವ ಮುಜುರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ ಜಾತ್ರಾ ಮುಂತಾದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಿರುವುದು ಸರಿಯಷ್ಟೇ. ಇದರಿಂದ ಅಂತಹ ದೇವಸ್ಥಾನಗಳು ನಿರೀಕ್ಷೆಗೆ ಮೀರಿ ಅಭಿವೃದ್ಧಿ ಹೊಂದುತ್ತಿವೆ.ಆದರೇ ಸರ್ಕಾರೇತರ ದೇವಸ್ಥಾನಗಳು ಭಕ್ತರ ಭಕ್ತಿ, ಭಾವ, ಶ್ರದ್ಧಾ ಕೇಂದ್ರಗಳಾಗಿ ಹೆಸರುವಾಸಿಯಾಗಿದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಕ್ಷೇತ್ರದ ಬೆಳವಣಿಗೆ ಆಗದಿರುವುದು ಯಾರದರೂ ನೋಡಬಹುದು. ಇದಕ್ಕೆ ಕಾರಣವೆಂದರೇ ಹಣಕಾಸಿನ ಕೊರತೆ ಎಂದು ಹೇಳಬಹುದು. ಸರ್ಕಾರ ಒಂದು ವೇಳೆ ಇಂತಹ ದೇವಸ್ಥಾನಗಳಿಗೆ ಆರ್ಥಿಕ ನೆರವು ನೀಡಿದರೇ ದೇಸ್ಥಾನಗಳು ಸಹ ಬೆಳೆದು ಸಮಾಜದ, ಗ್ರಾಮದ, ನಾಡಿನ ಏಳಿಗೆಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ತಿದ್ದುಪಡಿಯನ್ನು ಮಾಡಿ ಸರ್ಕಾರೇತರ ದೇವಸ್ಥಾನದ ಜಾತ್ರೆಗಳಿಗೆ ಅನುದಾನ ಬಿಡುಗಡೆಗೊಳಿಸುವ ನಿಯಮವನ್ನು ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.ಮಹಾರಥೋತ್ಸವದ ನಂತರ ನಡೆದ ಸಾಂಸ್ಕೃತಿಕ ಧರ್ಮ ಸಮಾರಂಭವನ್ನು ಹಾರಕೂಡ ಹಿರೇಮಠ ಸಂಸ್ಥಾನದ ಅಧಿಪತಿಗಳಾದ ಡಾ.ಚನ್ನವೀರ ಶಿವಾಚಾರ್ಯರು ಲಿಂಗ ಹಸ್ತದಿಂದ ಜ್ಯೋತಿಯನ್ನು ಬೆಳಗಿಸಿ ಉದ್ಘಾಟಿಸಿದರು.
ಮಾತೋಶ್ರೀ ಅಮೃತಾನಂದಮಯಿ ಬೆಳ್ಳೂರು, ದುಮ್ಸಾಪೂರ ಮಾತಾ ನೇತೃತ್ವವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವರಾಜ ಪಾಟೀಲ್, ಕಾಶೀನಾಥ ಬೆಲ್ದಾಳೆ, ದೇವಸ್ಥಾನದ ಸಮಿತಿಯ ಅಧ್ಯಕ್ಷ ಕುಶಾಲರಾವ ಯಾಬಾ, ಕಲ್ಯಾಣರಾವ ಬಿರಾದಾರ, ಶಾಂತಯ್ಯಾ ಸ್ವಾಮಿ, ಪ್ರಭುಶೆಟ್ಟಿ ಯಾಬಾ, ಸತೀಶ ಯಾಬಾ, ಸಿದ್ದಯ್ಯಾ ಸ್ವಾಮಿ, ಓಂಕಾರ ಸ್ವಾಮಿ, ರಾಜು ಯಾಬಾ, ಮಾಣಿಕ ಯಾಬಾ ಮುಂತಾದ ಗಣ್ಯರು ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.