ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಶಹಾಪುರ ನಗರ ಹಾಗೂ ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ತಡೆಯುವ ಬದಲು ಸಾಥ್ ನೀಡುತ್ತಿದ್ದಾರೆ. ಕೂಡಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಅಕ್ರಮ ಮದ್ಯ ಮಾರಾಟಕ್ಕೆ ತೆರೆಮರೆಯಲ್ಲಿ ಸಹಕರಿಸುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ನಗರದ ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಹೊಸಮನಿ ಮಾತನಾಡಿ, ಶಹಾಪುರ ನಗರ ಹಾಗೂ ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ತಡೆಯುವ ಬದಲು ಸಾಥ್ ನೀಡುತ್ತಿದ್ದಾರೆ. ಕೂಡಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಆಗ್ರಹಿಸಿದರು.

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ಮಧ್ಯೆ ತಾಲೂಕಿನ ಎಲ್ಲ ಬಾರ್‌ಗಳಲ್ಲಿ ಎಂಆರ್‌ಪಿ ದರಕ್ಕಿಂತ ಬಹಳಷ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಬಿಲ್ ಬದಲಿಗೆ ಬಿಳಿ ಚೀಟಿ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ತೆರಿಗೆ ರೂಪದಲ್ಲಿ ನಷ್ಟವಾಗುತ್ತಿದೆ. ಆದಾಗ್ಯೂ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಶುಚಿತ್ವಕ್ಕೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ದೂರಿದರು.

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಗ್ರಾಮೀಣ ಭಾಗದ, ಚಿಲ್ಲರೆ, ಚಹಾದ ಅಂಗಡಿ, ಸೇರಿ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಕ್ರಮಕ್ಕೆ ಇಲಾಖೆಯು ಸಾಥ್ ನೀಡುತ್ತಿರುವುದು ದುರದೃಷ್ಟಕರ ಸಂಗತಿ. ಇಲಾಖೆ ಸುಲಿಗೆಗೆ ಬಿದ್ದಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸೇವೆಯಿಂದ ಕೂಡಲೇ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಸೇನೆ ರಾಜ್ಯ ಉಪಾಧ್ಯಕ್ಷ ರಂಗನಾಥ್ ಗುಂಡಗುರ್ತಿ, ಶಹಾಪುರ ತಾಲೂಕಾಧ್ಯಕ್ಷ ಅಮರೇಶ ಬೂದನೂರು, ಸುರಪುರ ತಾಲೂಕು ಅಧ್ಯಕ್ಷ ಮರ್ಲಿಂಗ ಗುಡಿಮನಿ, ಹುಣಸಗಿ ತಾಲೂಕು ಅಧ್ಯಕ್ಷ ವೀರೇಶ್ ಗುಳಬಾಳ, ಉಪಾಧ್ಯಕ್ಷ ಮಾಹಾದೇವ ಛಲವಾದಿ, ಪರಶುರಾಮ್ ಬೋನಾಳ, ಬಸವರಾಜ ಮಾಳಳ್ಳಿಕರ್, ಭೀಮರಾಯ ಮುಸ್ಟಳ್ಳಿ, ಹುಸೇನಪ್ಪ ಗ್ಯಾಂಗ್, ಮೌನೇಶ್, ನಾಗೇಶ್, ತಮ್ಮಣ್ಣ, ಮುತ್ತಣ್ಣ, ಹನುಮಂತ ಸೇರಿ ಇತರರಿದ್ದರು.

Share this article