ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಅಭಿಮತ
ಕನ್ನಡಪ್ರಭ ವಾರ್ತೆ ತುಮಕೂರುಕನ್ನಡಸೇನೆ ಹೊಟ್ಟೆಪಾಡಿಗಾಗಿ ಹುಟ್ಟಿಕೊಂಡ ಸಂಸ್ಥೆಯಲ್ಲ. ಕನ್ನಡ ನಾಡು, ನುಡಿ, ನೆಲ, ಜಲ ವಿಚಾರದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳದೆ, ಜನರಿಗೆ ತೊಂದರೆ ನೀಡಿದೆ ತತ್ವ ಸಿದ್ಧಾಂತಕ್ಕೆ ಬದ್ಧವಾಗಿರುವ ಸಂಘ ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಪ್ರತಿಪಾದಿಸಿದ್ದಾರೆ.
ನಗರದ ವಿಘ್ನೇಶ್ವರ ಕಂಪಫ್ಟ್‌ನಲ್ಲಿ ಕನ್ನಡ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ 35 ವರ್ಷಗಳಿಂದಲೂ ಯಾರಿಂದಲೂ ನಯಾಪೈಸೆ ಪಡೆಯದೆ, ತಮ್ಮ ಕೈಯಿಂದ ಹಣ ಹಾಕಿ ಹೋರಾಟ ನಡೆಸುತ್ತಿರುವ ಏಕೈಕ ಸಂಸ್ಥೆ ಕನ್ನಡ ಸೇನೆ ಎಂದರು.ರಾಜ್ಯದಲ್ಲಿ ಕನ್ನಡದ ಹೆಸರಿನಲ್ಲಿ ದಿನವೊಂದಕ್ಕೆ ಹತ್ತಾರು ಸಂಘಟನೆಗಳು ಹುಟ್ಟಿಕೊಂಡ ನವೆಂಬರರ ರಾಜೋತ್ಸವಕ್ಕೆ ಮಾತ್ರ ಸಿಮೀತವಾಗಿವೆ. ಆದರೆ ಕನ್ನಡ ಸೇನೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ. ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕನ್ನಡಪರ ಸಂಘಟನೆಗಳು ಸೇರಿದಂತೆ ಯಾವುದೇ ಹೋರಾಟಗಾರರಿಗೂ ಕಾನೂನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲ. ಹೋರಾಟಗಾರರು ಕಾನೂನಿಗೆ ಅತೀತರಲ್ಲ. ಕನ್ನಡ ಸೇನೆ ಅನೇಕ ಹೋರಾಟಗಳನ್ನು ರೂಪಿಸಿದೆ. ಕಾವೇರಿ ಐ ತೀರ್ಪು ವಿರುದ್ಧ, ಬೆಳಗಾವಿ ಗಡಿವಿವಾದ ಸೇರಿದಂತೆ ಹಲವು ಹೋರಾಟಗಳಲ್ಲಿ ಕನ್ನಡಸೇನೆ ಮುಂಚೂಣಿಯಲ್ಲಿದೆ ಎಂದರು.ಸರ್ಕಾರ ಜನರಿಗಾಗಿ ವಿವಿಧ ಭಾಗ್ಯಗಳನ್ನು ನೀಡಿದೆ. ಆದರೆ ಉಚಿತ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಭಾಗ್ಯ ನೀಡಿದರೆ ಎಲ್ಲಾ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಹಾಗಾಗಿ ಸರಕಾರ ಗುಣಮಟ್ಟದ ಉಚಿತ ಶಿಕ್ಷಣ ನೀಡಬೇಕು. ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೊದಲ ಅದ್ಯತೆ ನೀಡಬೇಕು. ಎಲ್ಲರಿಗೂ ಗುಣಮಟ್ಟ ಆರೋಗ್ಯ ಸೇವೆ ಒದಗುವಂತೆ ಮಾಡಬೇಕೆಂಬುದು ಕನ್ನಡ ಸೇನೆಯ ಒತ್ತಾಯವಾಗಿದೆ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮ ಕುರಿತು, ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್, ಕನ್ನಡಸೇನೆಯ ರಾಜ್ಯ ಉಪಾಧ್ಯಕ್ಷ ಮಲ್ಲಸಂದ್ರ ಶಿವಣ್ಣ, ನಯಾಜ್ ಅಹಮದ್, ಕನ್ನಡ ಸೇನೆ ಆಟೋ ಘಟಕದ ಅಧ್ಯಕ್ಷ ನಟರಾಜೇಗೌಡ, ಸಮಾಜ ಸೇವಕ ನಟರಾಜಶೆಟ್ಟಿ ಮಾತನಾಡಿದರು.ಈ ವೇಳೆ ಕನ್ನಡಸೇನೆಯ ಮುಖಂಡರಾದ ವೆಂಕಟಾಚಲ, ಶ್ರೀನಿವಾಸಮೂರ್ತಿ, ಸಂತೋಷ, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸುಕನ್ಯಾ.ಜಿ.ಕೆ, ಉಪಾಧ್ಯಕ್ಷೆ ಚೇತನಾ.ಎಸ್.ವಿ, ನಗರ ಅಧ್ಯಕ್ಷೆ ಪರಿಮಳಾ ಸತೀಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಬಾಕ್ಸ್.....ಅಭಿನಂದನೆ ಸಲ್ಲಿಕೆ
ಕರೋನ ಸಂದರ್ಭದಲ್ಲಿ ತನ್ನ ಅಂಬ್ಯುಲೆನ್ಸ್ ಮೂಲಕ ಸಾವಿರಾರು ಮೃತದೇಹಗಳನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ಸಾಗಿಸಿ, ಅಂತ್ಯಸಂಸ್ಕಾರ ನಡೆಸಿದ ಅಬ್ಯುಲೆನ್ಸ್ ಚಾಲಕ ಸೋಹೆಲ್ ಪಾಷ ಮತ್ತು ಕರೋನದಿಂದ ಮೃತರಾದ ರಕ್ತ ಸಂಬಂಧಿಗಳನ್ನೇ ಮುಟ್ಟಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸಾವಿರಾರು ಕರೋನ ರೋಗದಿಂದ ಮೃತರಾದವರನ್ನು ಅಂತ್ಯಸಂಸ್ಕಾರ ನಡೆಸಿದ ರುದ್ರಭೂಮಿಯಲ್ಲಿ ಕೆಲಸ ಮಾಡುವ ಯಶೋಧಮ್ಮ ಅವರನ್ನು ಕನ್ನಡಸೇನೆ ವತಿಯಿಂದ ಅಭಿನಂದಿಸಲಾಯಿತು.ಫೋಟೊ.......
ನಗರದ ವಿಘ್ನೇಶ್ವರ ಕಂಪಫ್ಟ್‌ನಲ್ಲಿ ಕನ್ನಡ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಉದ್ಘಾಟಿಸಿದರು. ಜತೆಗೆ ಮತ್ತಿತರರು ಇದ್ದರು.