-ರೈತ ಸಂಘ ತಾಲೂಕು ಸಮಿತಿ ಸದಸ್ಯರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ
-----ಕನ್ನಡಪ್ರಭ ವಾರ್ತೆ ಸುರಪುರ
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಸದಸ್ಯರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಬಡ ರೈತ, ಕೃಷಿಕೂಲಿಕಾರರು ಕಳೆದ 30 ವರ್ಷಗಳಿಂದ ಸರ್ಕಾರಿ ಗೈರಾಣು ಜಮೀನು ಸಾಗುವಳಿ ಮಾಡುತ್ತಾ ಬದುಕಿಗಾಗಿ ಸಜ್ಜೆ, ಜೋಳ, ತೊಗರಿ ಇತ್ಯಾದಿ ಬೆಳೆಗಳನ್ನು ಬೆಳೆದುಕೊಂಡು ಬರುತ್ತಾ ಫಾರಂ ನಂ.50, 53, 57 ತುಂಬಿರುತ್ತಾರೆ. ಆದರೆ, ಇದುವರೆಗೂ ಪಟ್ಟಾ ನೀಡಿಲ್ಲ. ಈಗ ಮತ್ತೆ ಅರ್ಜಿ ಸಲ್ಲಿಸುತ್ತಾರೆ ಕಾರಣ ಹಕ್ಕುಪತ್ರ ಮತ್ತು ಪಹಣಿ ನೀಡಬೇಕು ಎಂದು ಆಗ್ರಹಿಸಿದರು.ಕಳೆದ ವರ್ಷ ಬೆಳೆ ನಷ್ಟದ ಪರಿಹಾರ ಅರ್ಧದಷ್ಟು ಕೊಡಲಾಗಿದೆ ಇನ್ನುಳಿದ ರೈತರಿಗೆ ಪರಿಹಾರ ನೀಡಬೇಕು. ಈ ವರ್ಷ ಹತ್ತಿ ಬೆಳೆ ರೋಗಕ್ಕೆ ತುತ್ತಾಗಿ ಮತ್ತು ಹೆಚ್ಚಿನ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ. ಕೂಡಲೇ ಸರ್ವೇ ಮಾಡಿಸಿ ಹತ್ತಿ ಬೆಳೆಗೆ ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಿ ಕೂಲಿಕಾರರಿಗೆ, ಕಾರ್ಮಿಕರಿಗೆ ಮತ್ತು ಬಯಸುವ ರೈತರಿಗೆ ಕೆಲಸ ನೀಡಿ ಇನ್ನಿತರ ಸೌಲಭ್ಯಗಳನ್ನು ಕೊಡಬೇಕು. ಕೆಲ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು. ಬಾದ್ಯಾಪುರ ಗ್ರಾಮಕ್ಕೆ ಜಾನುವಾರ ಆಸ್ಪತ್ರೆ ಮಂಜೂರು ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂಬುದು ಸೇರಿ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿದರು.
ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಎಚ್.ಎ. ಸರಕಾವಾಸ್ ಮೂಲಕ ಸಲ್ಲಿಸಲಾಯಿತು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ, ತಾಲೂಕು ಸಮಿತಿ ಅಧ್ಯಕ್ಷ ಧರ್ಮಣ್ಣ ದೊರೆ, ಉಪಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ರಾಮಯ್ಯ ಆಲ್ಹಾಳ, ಸಹ ಕಾರ್ಯದರ್ಶಿ ವೆಂಕೋಬ ಪಾಟೀಲ್, ಮುಖಂಡ ಮಲ್ಲಣ್ಣ ಚೆನ್ನೂರು, ಭೀಮರಾಯ ಚಂದ್ಲಾಪುರ, ನಿಂಗಯ್ಯ, ರಮಣಯ್ಯ ಕುಪಗಲ್, ಗುರುರಾಜ ಚಂದ್ಲಾಪುರ, ಮಲ್ಲಣ್ಣ ಬಡಿಗೇರ್ ಸೇರಿ ಅನೇಕ ಸಂಖ್ಯೆಯಲ್ಲಿ ರೈತರಿದ್ದರು.
-28ವೈಡಿಆರ್5: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಸದಸ್ಯರು ಸುರಪುರ ನಗರದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.