ಕನ್ನಡಪ್ರಭ ವಾರ್ತೆ ಔರಾದ್
ಪಕ್ಷದ ಲಾಭಾರ್ಥಿ ಸಂಪರ್ಕ ಅಭಿಯಾನದ ನಿಮಿತ್ತ ಮಾಜಿ ಸಚಿವರು ಹಾಗೂ ಔರಾದ್ (ಬಿ) ಶಾಸಕರಾದ ಪ್ರಭು ಚವ್ಹಾಣ್ ಬೋಂತಿ ತಾಂಡಾ ಬೂತ್ ಸಂಖ್ಯೆ 31ರಲ್ಲಿನ ಕೇಂದ್ರ ಸರ್ಕಾರದ ಫಲಾನುಭವಿಗಳ ಮನೆಗೆ ಭೇಟಿ ನೀಡಿ, ದರು. ಬಳಿಕ ಪಕ್ಷದ ಮುಖಂಡರು ಹಾಗೂ ಬೂತ್ ಕಾರ್ಯಕರ್ತರ ಜೊತೆಗೂಡಿ ಲಾಭಾರ್ಥಿಗಳ ಮನೆಗೆ ತೆರಳಿದ ಶಾಸಕರು, ಕರಪತ್ರಗಳನ್ನು ವಿತರಿಸಿ, ಗೋಡೆಗಳಿಗೆ ಸ್ವತಃ ಭಿತ್ತಿಪತ್ರಗಳನ್ನು ಅಂಟಿಸಿದರು. ಕೇಂದ್ರ ಸರ್ಕಾರದ ಸೌಲಭ್ಯ ಪಡೆದಿರುವ ಬಗ್ಗೆ ವಿವರಣೆ ಪಡೆದರು.
ಈ ವೇಳೆ ಮಾತನಾಡಿದ ಶಾಸಕರು, ಲಾಭಾರ್ಥಿ ಸಂಪರ್ಕ ಅಭಿಯಾನ ನಡೆಸಿ, ಫಲಾನುಭವಿಗಳ ಮನೆಗೆ ಭೇಟಿ ನೀಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಭಿಪ್ರಾಯಗಳನ್ನು ಪಡೆಯುವುದು, ಮಾಹಿತಿ ಇಲ್ಲದವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕು. ಈ ದಿಸೆಯಲ್ಲಿ ಕಾರ್ಯಕರ್ತರು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದರು.ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹೆಚ್ಚಾಗಿದೆ. ಬಡವರು, ರೈತರು, ಮಹಿಳೆಯರು, ಯುವಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ದೇಶದ ಪ್ರತಿ ನಾಗರಿಕರು ಒಂದಿಲ್ಲೊಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಲಾಭಾರ್ಥಿಗಳಾಗಿದ್ದಾರೆ. ಹಾಗಾಗಿ ದೇಶಾದ್ಯಂತ ಪ್ರತಿ ವರ್ಷ ಪ್ರಧಾನ ಮಂತ್ರಿಯವರ ಅಲೆ ಹೆಚ್ಚುತ್ತಿದೆ. ಮುಂಬರುವ ಚುನಾವಣೆಯಲ್ಲಿಯೂ ಪುನಃ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ಯೋಜನೆ, ಉಜ್ವಲಾ, ಪ್ರಧಾನ ಮಂತ್ರಿ ಆವಾಸ ಯೋಜನೆ, ಜಲ ಜೀವನ್ ಮಿಷನ್, ಆಯುಷ್ಮಾನ ಭಾರತ, ಸುಕನ್ಯಾ ಸಮೃದ್ಧಿ ಯೋಜನೆ, ಗರಿಬ್ ಕಲ್ಯಾಣ ಯೋಜನೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಸೇರಿದಂತೆ ವಿವಿಧ ಯೋಜನೆಗಳಿಂದ ತಾವು ಲಾಭ ಪಡೆದುಕೊಂಡಿರುವುದಾಗಿ ಫಲಾನುಭವಿಗಳು ಸಂತೋಷ ಹಂಚಿಕೊಂಡರು.