ಹಿಂದು ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಸರ್ಕಾರ ಮುಂದಾಗಲಿ

KannadaprabhaNewsNetwork |  
Published : Nov 06, 2024, 12:33 AM IST
5ಕೆಡಿವಿಜಿ1-ದಾವಣಗೆರೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಿಗೆ ಆಶೀರ್ವದಿಸುತ್ತಿರುವುದು. ..............5ಕೆಡಿವಿಜಿ2-ದಾವಣಗೆರೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಿಗೆ ಆಶೀರ್ವದಿಸುತ್ತಿರುವುದು.

ವಿಸ್ತರಿಸಲು ಪೇಜಾವರ ಶ್ರೀ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ/ಉಡುಪಿ

ಧಾರ್ಮಿಕ, ದತ್ತಿ ಇಲಾಖೆ ಅಧೀನದ ಹಿಂದು ದೇವಾಲಯಗಳು, ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಅಲ್ಲದೇ, ಹಾಸನ ಜಿಲ್ಲಾ ಮಾದರಿಯಲ್ಲಿ ದೇವರ ಹೆಸರಿನಲ್ಲಿ ಅಂತಹ ಆಸ್ತಿಗಳನ್ನು ನೋಂದಣಿ ಮಾಡಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿ ಪ್ರಯಾಣದ ವೇಳೆ ನಗರದ ಎಂಸಿಸಿ ಎ ಬ್ಲಾಕ್‌ನ ಶ್ರೀ ಸುಕೃತೀಂದ್ರ ಕಲಾ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಧಾರ್ಮಿಕ ದತ್ತಿ ಇಲಾಖೆ ಇದ್ದು, ಇಲಾಖೆಯಡಿ ಇರುವ ದೇವಾಲಯಗಳು, ದೇವಾಲಯಗಳ ಆಸ್ತಿಗಳ ರಕ್ಷಣೆಗೆ ಸರ್ಕಾರ ಮೊದಲು ಮುಂದಾಗಬೇಕು ಎಂದು ಹೇಳಿದರು.

ದೇವರ ಹೆಸರಿನಲ್ಲಿಯೇ ದೇವಸ್ಥಾನ, ಅವುಗಳ ಆಸ್ತಿಗಳ ನೋಂದಣಿ ಮೊದಲು ಆಗಬೇಕು. ಇದು ನಮ್ಮ ದೇಶ, ಭಾರತ ನಮ್ಮದೇ ದೇಶ ಅಂದುಕೊಂಡು, ಇದುವರೆಗೆ ದೇವಾಲಯಗಳ ಆಸ್ತಿಗಳು ದೇವರ ಹೆಸರಿನ ಆಸ್ತಿಯಾಗದೆ ಹಾಗೆಯೇ ಉಳಿದಿವೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದ್ದು, ದೇವರ ಹೆಸರಿನಲ್ಲೇ ದೇವಸ್ಥಾನ, ದೇ‍ವಳದ ಆಸ್ತಿ ನೋಂದಣಿ ಮಾಡುವ ಕೆಲಸ ಮೊದಲು ಶುರುವಾಗಲಿ ಎಂದು ಆಗ್ರಹಿಸಿದರು.

ಹಾಸನಕ್ಕೆ ಭೇಟಿ ನೀಡಿದ ವೇಳೆ, ಅಲ್ಲಿನ ಅಧಿಕಾರಿಗಳು ದೇವಸ್ಥಾನಗಳ ಆಸ್ತಿಯನ್ನು ದೇವರ ಹೆಸರಿಗೆ ನೋಂದಣಿ ಮಾಡುವ ಕೆಲಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹದ್ದೊಂದು ಮೇಲ್ಪಂಕ್ತಿಯನ್ನು ಹಾಸನ ಜಿಲ್ಲೆಯ ಅಧಿಕಾರಿಗಳು ಹಾಕಿಕೊಟ್ಟಿದ್ದು, ಅದೇ ಮಾದರಿ ಕೆಲಸ ಎಲ್ಲಾ ಕಡೆ ಆಗಬೇಕು ಎಂದು ತಿಳಿಸಿದರು.

ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಮಾಡಿದ್ದು ಇದರ ಹಿಂದೆ ಯಾರು ಕೆಲಸ ಮಾಡಿದ್ದಾರೆಂಬ ಬಗ್ಗೆ ತೀರ್ಮಾನ ಆಗಬೇಕು. ಯಾರ ಆಸ್ತಿ ಯಾರದ್ದೋ ಅಂತಹವರಿಗೆ ಅದು ಸೇರಬೇ ಎಂದು ಹೇಳಿದರು.

ಕ್ಷೇತ್ರೀಯವಾಗಿ ತಲಾ ತಲಾಂತರದಿಂದ ಬಂದ ಆಸ್ತಿಗಳು ಏಕಾಏಕಿ ಪರಭಾರೆಯಾಗಿ, ವಕ್ಫ್ ಆಸ್ತಿ ಅಂತಾ ನೋಂದಣಿಯಾಗುವುದಾದರೂ ಹೇಗೆ ಸಾಧ್ಯ? ಅದನ್ನೆಲ್ಲಾ ಯಾರು ಮಾಡಿದರು? ಅದನ್ನೆಲ್ಲಾ ಮೊದಲು ತೀರ್ಮಾನಿಸಿ, ಅನ್ಯಾಯ ಮಾಡಿದ್ದರೆ ಅಂತವರಿಗೆ ಶಿಕ್ಷೆ ಕೊಡುವ ಕೆಲಸ ಮಾಡಲಿ. ಇಲ್ಲವೆಂದರೆ ಯಾರೂ ಏನೂ ಮಾಡಲಿಕ್ಕಾಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಶ್ರೀಗಳು ಪ್ರತಿಕ್ರಿಯಿಸಿದರು.

ರೈತರಲ್ಲಿ ಭಯ ಹುಟ್ಟು ಹಾಕುವ ಕೆಲಸ ಯಾವುದೇ ಸರ್ಕಾರಗಳೂ ಮಾಡಬಾರದು. ಪ್ರಸ್ತುತ ತಲೆದೋರಿರುವ ಭಯ ನಿವಾರಣೆ ಮಾಡಬೇಕು. ಆ ನೆಲೆಯಲ್ಲಿ ಸರ್ಕಾರದ ತೀರ್ಮಾನ ಆಗಬೇಕು. ವಕ್ಫ್ ಮಂಡಳಿ ರದ್ಧುಪಡಿಸುವ ಕುರಿತು ಎಲ್ಲರು ತೀರ್ಮಾನಿಸಬೇಕು. ಅದು ನಾವು ಮಾಡುವ ಕೆಲಸವಲ್ಲವಲ್ಲ ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಇಲ್ಲವೆಂದರೆ ಏನರ್ಥ? ಧಾರ್ಮಿಕ, ದತ್ತಿ ಇಲಾಖೆಯು ದೇವಸ್ಥಾನಗಳು, ದೇವಸ್ಥಾನಗಳ ಆಸ್ತಿಗಳನ್ನು ಆಯಾ ದೇವರ ಹೆಸರಿಗೆ ನೋಂದಣಿ ಮಾಡಿಸಿ, ದೇವಸ್ಥಾನದ ಆಸ್ತಿ, ಸಂಪತ್ತನ್ನು ಕಾಯುವ ಕೆಲಸ ಮಾಡಲಿ. ಹಾಸನ ಜಿಲ್ಲೆಯ ಅಧಿಕಾರಿಗಳ ಮಾದರಿಯನ್ನು ರಾಜ್ಯದಲ್ಲಿ ವಿಸ್ತರಿಸಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.

ಈ ವೇಳೆ ಶ್ರೀಕೃಷ್ಣ ಮಿತ್ರ ವೃಂದದ ಅನಂತಯ್ಯ, ಕಂಪ್ಲಿ ಗುರುರಾಜ್ ಆಚಾರ್‌, ಎಸ್.ಜಿ.ಕುಲಕರ್ಣಿ, ಎಂ.ಜಿ.ಶ್ರೀಕಾಂತ, ವೆಂಕಟೇಶ, ಸಾಮಾಜಿಕ ಕಾರ್ಯಕರ್ತ ಡಾ.ನಸೀರ್ ಅಹಮ್ಮದ್ ಇತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ