ಸರ್ಕಾರ ಮಂಜುನಾಥ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ; ನಾರಾಯಣಸ್ವಾಮಿ

KannadaprabhaNewsNetwork |  
Published : Jan 26, 2024, 01:45 AM IST
೨೫ಕೆಎಲ್‌ಆರ್-೧೦ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ದಲಿತನಾರಾಯಣಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಕೊತ್ತೂರು ಮಂಜುನಾಥ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಬೈರಾಗಿ ಸಮಾಜಕ್ಕೆ ಸೇರಿದವರಾಗಿದ್ದು, ರಾಜಕೀಯ ಮೀಸಲಾತಿ ಲಾಭ ಪಡೆದುಕೊಳ್ಳಲು ಬುಡ್ಗ ಜಂಗಮ ಎಂದು ಮುಳಬಾಗಿಲಿನ ತಹಸೀಲ್ದಾರ್ ಕಚೇರಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಕನ್ನಡಪ್ರಭ ವಾರ್ತೆ ಕೋಲಾರ

ಮುಳಬಾಗಿಲು ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಕಳೆದ ೨೦೧೩ರಲ್ಲಿ ಕೊತ್ತೂರು ಮಂಜುನಾಥ್ ಶಾಸಕರಾಗಿ ಆಯ್ಕೆಯಾಗಿ ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ದುರ್‍ಬಳಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು, ದಲಿತ ಸಂಘಟನೆಗಳ ಮಹಾ ಒಕ್ಕೂಟವು ಕೊತ್ತೂರು ಮಂಜುನಾಥ್ ವಿರುದ್ಧ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ, ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಕ್ರಮಕೈಗೊಳ್ಳಲು ಆದೇಶಿದೆ, ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವ ಇದ್ದಲ್ಲಿ ಮೀಸಲಾತಿ ದುರ್ಬಳಕೆ ಮಾಡಿದ್ದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕಠಿಣ ಕ್ರಮ ಜರುಗಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಲಿ ಎಂದು ದಲಿತ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊತ್ತೂರು ಮಂಜುನಾಥ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಬೈರಾಗಿ ಸಮಾಜಕ್ಕೆ ಸೇರಿದವರಾಗಿದ್ದು, ರಾಜಕೀಯ ಮೀಸಲಾತಿ ಲಾಭ ಪಡೆದುಕೊಳ್ಳಲು ಬುಡ್ಗ ಜಂಗಮ ಎಂದು ಮುಳಬಾಗಿಲಿನ ತಹಸೀಲ್ದಾರ್ ಕಚೇರಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಎಂದರು.

ಈ ಸಂಬಂಧ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇವರೊಂದಿಗೆ ದಲಿತ ಸಂಘಟನೆಗಳ ಮಹಾಒಕ್ಕೂಟವು ಸಹ ಬೆಂಬಲಿಸಿ ಹೋರಾಡಿದ ಸಂದರ್ಭದಲ್ಲಿ ಶಾಸಕ ಮಂಜುನಾಥ್ ದಲಿತ ಜನಾಂಗವನ್ನು, ‘ತಾನು ಧರಿಸುವ ಷೂ, ಲೇಕರ್ ಬೆಲೆ ೫೦ ಸಾವಿರವಾಗಿದ್ದು, ಇದನ್ನು ತೊಡುವ ಯೋಗ್ಯತೆ ಇದೆಯಾ ? ಜುಟ್ಟುಗಳ ಬಗ್ಗೆ ನಾನು ಮಾತನಾಡಲ್ಲ’ ಎಂಬುದಾಗಿ ಹೀಯ್ಯಾಳಿಸಿದ್ದರೆಂದು ನೆನಪಿಸಿದ ಅವರು, ಸುಪ್ರೀಂ ಕೋರ್ಟ್‌ ಕೊತ್ತೂರು ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಜಿಲ್ಲಾಧಿಕಾರಿಗಳಾಗಿದ್ದ ಸೆಲ್ವಮಣಿಯವರಿಗೆ ಜಿಲ್ಲಾ ಮಟ್ಟದ ಜಾತಿ ಪರಿಶೀಲನ ಸಮಿತಿ ರಚಿಸಿ, ನೈಜ ವರದಿಯನ್ನು ಸಲ್ಲಿಸುವಂತೆ ತಿಳಿಸಿ, ರಾಜ್ಯ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು ಎಂದರು.

ದಲಿತ ಮುಖಂಡ ಹೂವಳ್ಳಿ ಪ್ರಕಾಶ್ ಮಾತನಾಡಿ, ಸಮಿತಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸೆಲ್ವಮಣಿ, ಸಹಾಯಕ ವಿಭಾಗಾಧಿಕಾರಿ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಾಜಿಯವರನ್ನೂಳಗೊಂಡು ನಡೆಸಿದ ಪರಿಶೀಲನೆಯಲ್ಲಿ ಕೊತ್ತೂರು ಮಂಜುನಾಥ್ ಬೈರಾಗಿ ಸಮುದಾಯಕ್ಕೆ ಸೇರಿದವರೆಂದು ಸಾಕ್ಷಾಧಾರಗಳ ಸಮೇತ ಧೃಢಪಡಿಸಿದ ಹಿನ್ನೆಲೆ ಮಂಜುನಾಥ್ ಸಲ್ಲಿಸಿರುವ ಪ್ರಮಾಣಪತ್ರವು ನಕಲಿ ಆಗಿದೆ, ಕೊತ್ತೂರು ಮಂಜುನಾಥ್ ಬುಡ್ಗ ಜಂಗಮ ಸಮುದಾಯದವರು ಎಂಬುವುದನ್ನು ಸಾಭೀತು ಪಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿ, ಈ ಸಂಬಂಧವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ, ಇದು ದಲಿತ ಸಂಘಟನೆಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಈ ಸಂಬಂಧವಾಗಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದಲಿತ ಜನಾಂಗದ ಮೇಲೆ ಕಾಳಜಿ ಹಾಗೂ ಬದ್ದತೆ ಇದ್ದರೆ ನ್ಯಾಯಾಲಯದ ಆದೇಶದಂತೆ ಕೊತ್ತೂರು ಮಂಜುನಾಥ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಶಾಸಕ ಸ್ಥಾನದಿಂದ ಉಚ್ಛಾಟಿಸಬೇಕು, ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಹಾಗೂ ದಲಿತರಿಗೆ ವಂಚಿಸಿ ಮೀಸಲಾತಿ ಕಸಿದುಕೊಂಡ ಹಿನ್ನೆಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಪಡಿಸಿ,ಇದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳಿಂದ ವಿಧಾನಸೌಧ ಚಲೋ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳಾದ ಮುನಿರಾಜು, ಸಾಹುಕಾರ್ ಶಂಕರಪ್ಪ, ಸದಾಶಿವ, ಶ್ರೀನಾಥ್, ಹನುಮಾನ್, ರಾಜಶೇಖರ್, ಅರುಣಾಂಜಿ ಇದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು