ದಸರಾ ಉದ್ಘಾಟನೆ ಸಂಪ್ರದಾಯದಂತೆ ಆಗಲಿ: ಕರವೇ

KannadaprabhaNewsNetwork |  
Published : Sep 03, 2025, 01:01 AM IST

ಸಾರಾಂಶ

ಏಳು ಕೋಟಿ ಕನ್ನಡಿಗರು ಭುವನೇಶ್ವರಿಯನ್ನು ನಾಡದೇವತೆ ಎಂದು ಒಪ್ಪಿಕೊಂಡಿದ್ದಾರೆ. ಯಾರೋ ಒಬ್ಬರು ಒಪ್ಪಿಕೊಳ್ಳದಿದ್ದರೆ ಅದನ್ನು ನಾನು ಪರಿಗಣನೆ ಮಾಡುವುದಿಲ್ಲ. ಇಂದು ಭುವನೇಶ್ವರಿಯನ್ನು ಒಪ್ಪದವರು, ನಾಳೆ ಚಾಮುಂಡೇಶ್ವರಿಯನ್ನೂ ಒಪ್ಪದಿರುವ ಆತಂಕವಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಏಳು ಕೋಟಿ ಕನ್ನಡಿಗರು ಭುವನೇಶ್ವರಿಯನ್ನು ನಾಡದೇವತೆ ಎಂದು ಒಪ್ಪಿಕೊಂಡಿದ್ದಾರೆ. ಯಾರೋ ಒಬ್ಬರು ಒಪ್ಪಿಕೊಳ್ಳದಿದ್ದರೆ ಅದನ್ನು ನಾನು ಪರಿಗಣನೆ ಮಾಡುವುದಿಲ್ಲ. ಇಂದು ಭುವನೇಶ್ವರಿಯನ್ನು ಒಪ್ಪದವರು, ನಾಳೆ ಚಾಮುಂಡೇಶ್ವರಿಯನ್ನೂ ಒಪ್ಪದಿರುವ ಆತಂಕವಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರವೇ ಜಿಲ್ಲಾ ಕಾರ್ಯಕಾರಿಣಿ ಸಭೆಗೂ ಮೊದಲು ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಹೆಸರನ್ನು ರಾಜ್ಯ ಸರ್ಕಾರ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿ, ಭುವನೇಶ್ವರಿಯನ್ನು ದೇವಿಯಾಗಿ ಪೂಜಿಸುವ ಪದ್ಧತಿ ಇಂದಿನದಲ್ಲ. ಬನವಾಸಿ ರಾಜಮನೆತನದ ಕಾಲದಿಂದಲೇ ಭುವನೇಶ್ವರಿಯು ಕನ್ನಡಿಗರ ನಂಬಿಕೆಯ ಕೇಂದ್ರವಾಗಿದ್ದಾಳೆ. ಇಂದು ಭುವನೇಶ್ವರಿಯನ್ನು ಒಪ್ಪದವರು ನಾಳೆ ಚಾಮುಂಡೇಶ್ವರಿ ಬಗ್ಗೆಯೂ ಇದೇ ರೀತಿಯಲ್ಲಿ ಮಾತನಾಡಬಹುದು ಬಾನು ಮುಷ್ತಾಕ್‌ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಕೆಲವರು ಲಘುವಾಗಿ ಮಾತನಾಡುವುದು ಬೇಸರದ ಸಂಗತಿ. ಮೈಸೂರು ದಸರಾ, ಮಹಾರಾಜರ ಪರಂಪರೆಯ ಹಬ್ಬ. ಚಾಮುಂಡೇಶ್ವರಿ ಆ ಹಬ್ಬದ ಆರಾಧ್ಯ ದೇವತೆ. ಭುವನೇಶ್ವರಿ ಅಥವಾ ಚಾಮುಂಡೇಶ್ವರಿ ಕುರಿತಂತೆ ತೀರಾ ಅಸಮರ್ಪಕವಾಗಿ ಮಾತನಾಡಿದರೆ ಅದು ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಕೆ ನೀಡಿದರು.

‘ನೀವು ದಸರಾ ಉದ್ಘಾಟನೆ ಮಾಡುವುದಕ್ಕೆ ನಮಗೆ ಭಿನ್ನಾಭಿಪ್ರಾಯವಿಲ್ಲ. ಆದರೆ, ನಿಮ್ಮ ಕೆಲ ಹೇಳಿಕೆಗಳು ಕನ್ನಡಿಗರಿಗೆ ಅವಮಾನ ತರುವಂತಿವೆ. ಏಳು ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆ ತರುವುದು ಸೂಕ್ತವಲ್ಲ. ಅಂತಹ ಹೇಳಿಕೆಗಳಿಂದ ದೂರ ಉಳಿದು, ದಸರಾ ಉದ್ಘಾಟನೆ ಮಾಡಿದರೆ ತಪ್ಪಿಲ್ಲ. ಹೀಗಾಗಿ, ಸಂಪ್ರದಾಯ ಮತ್ತು ಕನ್ನಡ ತಾಯಿಯ ಬಗ್ಗೆ ಗೌರವ ಕಾಪಾಡಿ’ ಎಂದು ಮುಷ್ತಾಕ್‌ಗೆ ನಾರಾಯಣಗೌಡ ಮನವಿ ಮಾಡಿದರು.ದಸರಾ ಉದ್ಘಾಟನೆಗೆ ಯಾರಾದರೂ ಹೋಗಲಿ, ನಾನು ಅವರಿಗೆ ಕುಂಕುಮ, ಬಳೆ ಹಾಕಿಕೊಂಡೇ ಹೋಗಬೇಕು ಎಂದು ಹೇಳುವುದಿಲ್ಲ. ಯಾವ ಧರ್ಮದವರೇ ಆಗಲಿ, ಮತ್ತೊಂದು ಧರ್ಮದವರ ಸಂಪ್ರದಾಯವನ್ನು ಗೌರವಿಸಿ ಅರ್ಥ ಮಾಡಿಕೊಂಡಾಗ ಅವರಿಗೆ ಗೌರವ ಹೆಚ್ಚುತ್ತದೆ. ದಸರಾ ಆಚರಣೆ ಈ ಹಿಂದಿನಿಂದ ಯಾವ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆಯೋ ಅದೇ ರೀತಿ ಉದ್ಘಾಟನೆ ಮಾಡುವುದರಲ್ಲಿ ನಮಗೆ ಅಭ್ಯಂತರವಿಲ್ಲ. ಇಷ್ಟು ವರ್ಷಗಳಿಂದ ಬಂದಿರುವ ಪದ್ಧತಿಯನ್ನು ಪಾಲಿಸಲೇಬೇಕು. ರಾಜಕೀಯ ಲಾಭಕ್ಕಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

ದಸರಾ, ಹಿಂದೂಗಳ ಆರಾಧನೆಯ ಹಬ್ಬ. ಇಂದಿನವರೆಗೂ ಈ ಹಬ್ಬವನ್ನು ಹಿಂದೂ ಸಂಪ್ರದಾಯದ ಪ್ರಕಾರವೇ ಆಚರಿಸಲಾಗಿದೆ. ಮುಂದೆಯೂ ಅದೇ ಸಂಪ್ರದಾಯ ಇರಬೇಕು. ರಾಜಕೀಯ ಲಾಭಕ್ಕಾಗಿ ಅಥವಾ ಸ್ವಂತ ಆಲೋಚನೆಗಾಗಿ, ‘ನಾನು ಹೀಗೆ ದಸರಾ ಉದ್ಘಾಟನೆ ಮಾಡುತ್ತೇನೆ’ ಎಂದು ಹೇಳುವುದು ಸರಿಯಲ್ಲ ಎಂದರು.

ರಾಜಕಾರಣಿಗಳ ನಿಲುವು ದೇಶದ ನಿಲುವಲ್ಲ, ಭಾಷೆಯ ನಿಲುವಲ್ಲ, ಧರ್ಮದ ನಿಲುವೂ ಅಲ್ಲ. ಅದು ಕೇವಲ ರಾಜಕೀಯ ತೆವಲು ಮಾತ್ರ. ಚಾಮುಂಡೇಶ್ವರಿ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿ.ಕೆ.ಶಿವಕುಮಾರ್‌ ಅವರು ಬಸವ, ಶರಣರ ತತ್ವ ಸಿದ್ಧಾಂತ ಪಾಲಿಸುತ್ತಿದ್ದರೆ ಇನ್ನು ಮುಂದೆ ದೇವಸ್ಥಾನಗಳಿಗೆ ಹೋಗಬಾರದು. ತಮ್ಮ ಧಾರ್ಮಿಕ ಚಿಂತನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು.

- ನಾರಾಯಣ ಗೌಡ, ಕರವೇ ಅಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ