ಮೈಸೂರು ಅರಮನೇಲಿ ದೋಸೆ ಸವಿದ ಮುರ್ಮು

KannadaprabhaNewsNetwork |  
Published : Sep 03, 2025, 01:01 AM IST
ಮೈಸೂರು ಅರಮನೆಗೆ ರಾಷ್ಟ್ರಪತಿ ಭೇಟಿ. | Kannada Prabha

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ಮೈಸೂರು ಅರಮನೆಗೆ ಭೇಟಿ ನೀಡಿ, ಬೆಳಗಿನ ಉಪಹಾರ ಸೇವಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ಮೈಸೂರು ಅರಮನೆಗೆ ಭೇಟಿ ನೀಡಿ, ಬೆಳಗಿನ ಉಪಹಾರ ಸೇವಿಸಿದರು.ನಗರದ ರ್‍ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಮುರ್ಮು ಅವರು ನಿಗದಿತ ಕಾರ್ಯಕ್ರಮದ ಭಾಗವಾಗಿ ಬೆಳಗ್ಗೆ ಅರಮನೆಗೆ ಭೇಟಿ ನೀಡಿ, ಅರಮನೆಯ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದರು.

ಅರಮನೆಯಲ್ಲಿ ರಾಷ್ಟ್ರಪತಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ಬೆಳಗಿನ ಉಪಹಾರಕ್ಕೆ ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣುಗಳು, ಸಾಂಪ್ರದಾಯಿಕ ಮೈಸೂರು ಭಕ್ಷ್ಯಗಳಾದ ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಶ್ಯಾವಿಗೆ ಉಪ್ಪಿಟ್ಟು, ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾ, ಜೊತೆಗೆ ರಾಗಿ ಮತ್ತು ಗೋಧಿ ಬಿಸ್ಕೆಟ್, ಚಹ ಮತ್ತು ಕಾಫಿಯನ್ನು ತಯಾರಿಸಲಾಗಿತ್ತು.

ಭೇಟಿ ಕುರಿತು ಸಂತಸ ವ್ಯಕ್ತಪಡಿಸಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌, ನಮ್ಮ ಆಹ್ವಾನದ ಮೇರೆಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಆಗಮಿಸಿದ್ದು, ಅಪಾರ ಸಂತಸ ತಂದಿದೆ. ನಮ್ಮ ನಿವಾಸಕ್ಕೆ ಅವರನ್ನು ಸ್ವಾಗತಿಸಲು ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ನನ್ನ ಆಹ್ವಾನವನ್ನು ಸ್ವೀಕರಿಸಿ, ಗೌರವಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಹೆಮ್ಮೆ ಮತ್ತು ಗೌರವದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ರಾಷ್ಟ್ರಪತಿಯವರು ಉಪಾಹಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಹಾಗೂ ಅರಮನೆಯ ಕೆಲವು ಮುಖ್ಯ ಭಾಗಗಳನ್ನು ವೀಕ್ಷಿಸಿ ಆನಂದಿಸಿದರು. ಭಾರತದ ಗೌರವಾನ್ವಿತ ರಾಷ್ಟ್ರಪತಿಗೆ ಆತಿಥ್ಯ ನೀಡಿದ್ದು, ನಮಗೆ ಅಪಾರ ಗೌರವ ಮತ್ತು ಸಂತೋಷದ ಕ್ಷಣವಾಗಿತ್ತು ಎಂದು ಹೇಳಿದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ