ಬುರುಡೆ ಕೇಸ್‌ಗೆ ಇ.ಡಿ. ಎಂಟ್ರಿ

KannadaprabhaNewsNetwork |  
Published : Sep 03, 2025, 01:01 AM IST
ಇ.ಡಿ. | Kannada Prabha

ಸಾರಾಂಶ

‘ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ನೂರಾರು ಶವ ಹೂಳಲಾಗಿದೆ’ ಎಂದು ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದ ‘ಬುರುಡೆ ಪ್ರಕರಣ’ಕ್ಕೆ ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕೃತವಾಗಿ ಪ್ರವೇಶಿಸಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ವಿದೇಶದಿಂದ ಹಣ ಸಂದಾಯವಾಗಿತ್ತು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿದೆ.

- ಎನ್‌ಜಿಒ, ಹೋರಾಟಗಾರರು, ಯೂಟ್ಯೂಬರ್ಸ್‌ ಬ್ಯಾಂಕ್‌ ಖಾತೆ ವಿವರ ಕೊಡಿ

- ಮಾಹಿತಿ ಕೋರಿ ದಕ್ಷಿಣ ಕನ್ನಡದ ಪ್ರಮುಖ ಬ್ಯಾಂಕ್‌ಗಳಿಗೆ ಇ.ಡಿ.ಯಿಂದ ಪತ್ರ

- 5 ವರ್ಷದ ವಿವರ, ವಹಿವಾಟು, ಪಾನ್‌ಕಾರ್ಡ್‌ ಮಾಹಿತಿ ಕೇಳಿದ ತನಿಖಾ ಸಂಸ್ಥೆ

--

- ‘ಅಪಪ್ರಚಾರಕ್ಕೆ ವಿದೇಶಿ ಹಣ’ ಆರೋಪದ ಪ್ರಾಥಮಿಕ ತನಿಖೆ

--

ಇ,ಡಿ. ತನಿಖೆ ಏಕೆ?

- ಧರ್ಮಸ್ಥಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಶವಗಳ ಮೂಳೆಗಳಿಗೆ ಉತ್ಖನನ ನಡೆದಿತ್ತು

- ಆ ವೇಳೆ ಯೂಟ್ಯೂಬ್‌ನಲ್ಲಿ ವ್ಯಾಪಕ ಸುದ್ದಿಗಳು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹರಿದಾಡಿದ್ದವು

- ಈ ಅಪಪ್ರಚಾರಕ್ಕೆ ವಿದೇಶಗಳಿಂದ ಫಂಡ್‌ ಹರಿದುಬಂದಿದೆ ಎಂದು ಬಿಜೆಪಿ, ಭಕ್ತರ ಆಕ್ರೋಶ

- ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿ ಕೆಲವರಿಂದ ಈ ಬಗ್ಗೆ ಕೇಂದ್ರಕ್ಕೆ ದೂರು

- ಈ ದೂರುಗಳನ್ನು ಪರಿಶೀಲನೆಗಾಗಿ ಇ.ಡಿ.ಗೆ ವರ್ಗಾಯಿಸಿದ್ದ ಕೇಂದ್ರ ಗೃಹ ಸಚಿವಾಲಯ

- ಇದನ್ನು ಆಧರಿಸಿ ಇ.ಡಿ.ಯಿಂದ ಪ್ರಾಥಮಿಕ ತನಿಖೆ (ಪ್ರಿಲಿಮಿನರಿ ಇನ್‌ಕ್ವೈರಿ) ಆರಂಭ

- ಯೂಟ್ಯೂಬರ್‌ಗಳು, ಹೋರಾಟಗಾರರ ಖಾತೆಗಳ ತಲಾಶೆ ಆರಂಭಿಸಿದ ತನಿಖಾ ಸಂಸ್ಥೆ

- ಅದಕ್ಕೆಂದೆ 5 ವರ್ಷಗಳ ಬ್ಯಾಂಕ್‌ ವಹಿವಾಟುಗಳ ವಿವರ ಕೇಳಿ ದ.ಕ. ಬ್ಯಾಂಕ್‌ಗಳಿಗೆ ಪತ್ರ

- ಪ್ರಾಥಮಿಕ ತನಿಖೆಯಲ್ಲಿ ಸತ್ವ ಕಂಡುಬಂದರೆ ಮುಂದೆ ಅಧಿಕೃತವಾಗಿ ಪ್ರಕರಣ ದಾಖಲು

---

ಕನ್ನಡಪ್ರಭ ವಾರ್ತೆ ಮಂಗಳೂರು

‘ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ನೂರಾರು ಶವ ಹೂಳಲಾಗಿದೆ’ ಎಂದು ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದ ‘ಬುರುಡೆ ಪ್ರಕರಣ’ಕ್ಕೆ ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕೃತವಾಗಿ ಪ್ರವೇಶಿಸಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ವಿದೇಶದಿಂದ ಹಣ ಸಂದಾಯವಾಗಿತ್ತು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿದೆ.

ಯುಟ್ಯೂಬರ್‌ಗಳು, ಹೋರಾಟಗಾರರು ಮತ್ತು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಹಣದ ಮೂಲ ಪತ್ತೆಗೆ ಮುಂದಾಗಿದೆ. ಈ ಕಾರ್ಯದಲ್ಲಿ ಮೊದಲ ಹಂತವಾಗಿ ಬ್ಯಾಂಕ್‌ಗಳಿಂದ ಯುಟ್ಯೂಬರ್ಸ್‌ಗಳು, ಹೋರಾಟಗಾರರು ಮತ್ತು ಎರಡು ಎನ್‌ಜಿಒಗಳ ಹಣದ ವ್ಯವಹಾರದ ವಿವರ ಬಯಸಿ ಕೆಲವು ಪ್ರಮುಖ ಬ್ಯಾಂಕ್‌ಗಳಿಗೆ ಇ.ಡಿ. ಪತ್ರ ಬರೆದಿದೆ.

ಇ.ಡಿ. ತನಿಖೆ ಏಕೆ?:

ಮುಸುಕುಧಾರಿ ಚಿನ್ನಯ್ಯನ ಮಾತಿನಂತೆ ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಮೂಳೆಗಳಿಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ಉತ್ಖನನ ನಡೆಸುವ ವೇಳೆ ಯೂಟ್ಯೂಬ್‌ರ್‌ಗಳು ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿ ತೇಜೋವಧೆ ಮಾಡಿದ್ದರು. ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಫಂಡಿಂಗ್‌ ಸಾಧ್ಯತೆ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುರೇಶ್‌ ಗೌಡ ಅವರು ಕೇಂದ್ರ ಸರ್ಕಾರಕ್ಕೆ ತನಿಖೆಗಾಗಿ ಪತ್ರ ಬರೆದಿದ್ದರು. ಈ ಪತ್ರಗಳನ್ನು ಕೇಂದ್ರವು ಇ.ಡಿ.ಗೆ ವರ್ಗಾಯಿಸಿತ್ತು. ಈ ನಡುವೆ ಬಿಜೆಪಿ, ಜೆಡಿಎಸ್‌ ಮತ್ತಿತರ ಮುಖಂಡರು ಕೂಡ ಇ.ಡಿ. ಹಾಗೂ ಎನ್ಐಎ ತನಿಖೆಗೆ ಆಗ್ರಹಿಸಿದ್ದರು. ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಪ್ರಾಥಮಿಕ ತನಿಖೆಗೆ (ಪ್ರಿಲಿಮಿನರಿ ಇನ್‌ವೆಸ್ಟಿಗೇಷನ್) ಇಳಿದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಬಗ್ಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದು ಗೊತ್ತಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಸತ್ವ ಕಂಡು ಬಂದರೆ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳುವುದು ಇ.ಡಿ.ಯ ನಿಯಮವಾಗಿದೆ.

2 ಎನ್‌ಜಿಒಗಳ ತನಿಖೆ:

ಎರಡು ಎನ್‌ಜಿಒ ಸಂಸ್ಥೆಗಳ ಬಗ್ಗೆ ಇ.ಡಿ. ತನಿಖೆ ನಡೆಸಲಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತರ ಮತ್ತು ಅಪಪ್ರಚಾರ ನಡೆಸಲು ವಿದೇಶದಿಂದ ಅಕ್ರಮವಾಗಿ ಹಣಕಾಸು ನೆರವು ಪಡೆದಿದ್ದಾರೆ ಎಂಬ ದೂರುದಾರರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಎನ್‌ಜಿಒಗಳು ಮತ್ತು ಹೋರಾಟಕ್ಕೆ ಸಂಬಂಧಿಸಿದವರ ಕಳೆದ ಐದು ವರ್ಷಗಳ ಬ್ಯಾಂಕ್‌ ಖಾತೆಗಳ ವಿವರ, ಹಣಕಾಸು ವಹಿವಾಟು, ಪಾನ್‌ ಕಾರ್ಡ್‌ ಮಾಹಿತಿ ಸೇರಿದಂತೆ ಎಲ್ಲ ವಿವರ ನೀಡುವಂತೆ ಬ್ಯಾಂಕ್‌ಗಳಿಗೆ ಇ.ಡಿ. ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಈಗಾಗಲೇ ಧರ್ಮಸ್ಥಳ ಬಗ್ಗೆ ಯೂಟ್ಯೂಬರ್‌ಗಳು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಪೊಲೀಸ್‌ ಠಾಣೆಗಳಲ್ಲೂ ಕೇಸು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್‌ ಸಮೀರ್‌ ಮೂರು ಬಾರಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದರು.

===

ಬಿಜೆಪಿ ಯಾರ ಪರ?: ಸಿದ್ದು

- ಬಿಜೆಪಿ ಸೌಜನ್ಯ ಪರವೋ, ವೀರೇಂದ್ರ ಹೆಗ್ಗಡೆ ಪರವೋ- ಸೌಜನ್ಯ ಮನೆಗೆ ಹೋಗಿದ್ದ ವಿಜಯೇಂದ್ರಗೆ ಸಿಎಂ ಟಾಂಗ್

----- ಸಿಎಂ ಹೇಳಿದ್ದೇನು?

- ಹತ್ಯೆಯಾದ ಸೌಜನ್ಯ ಪ್ರಕರಣವನ್ನು ಮತ್ತೆ ಸಿಬಿಐಗೆ ಕೊಡಬೇಕು ಎಂದು ಬಿಜೆಪಿ ಹೇಳುತ್ತಿದೆ.- ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅವರೇ ತನಿಖೆ ಮಾಡಿ ತನಿಖೆಗೆ ಇತಿಶ್ರೀ ಹಾಡಿದ್ದರು

- ಈಗ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಹೋಗಬೇಕೆಂದು ಬಿಜೆಪಿ ಹೇಳಲಾರಂಭಿಸಿದೆ- ಸೌಜನ್ಯ ಕೊಲೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಕುಟುಂಬದ ಮೇಲೆಯೇ ಆರೋಪವಿದೆ

- ಹಾಗಾದರೆ, ಬಿಜೆಪಿಯವರು ಯಾರ ಪರ ಇದ್ದಾರೆ? ಸೌಜನ್ಯ ಪರವೋ? ಡಾ। ಹೆಗ್ಗಡೆ ಪರವೋ?- ಮರು ತನಿಖೆ ಬೇಕಿದ್ದರೆ ಅವರು ನ್ಯಾಯಾಲಯಕ್ಕೆ ಹೋಗಲಿ. ಸೌಜನ್ಯ ತಾಯಿ ತೀರ್ಮಾನಿಸಲಿ

----ಕನ್ನಡಪ್ರಭ ವಾರ್ತೆ ಮೈಸೂರು

‘ಧರ್ಮಸ್ಥಳ ಚಲೋ ಎಂದು ಹೋಗಿ ಸಮಾವೇಶ ಮಾಡಿದ ಬಿಜೆಪಿಗರು, ಮೊದಲು ಧರ್ಮಾಧಿಕಾರಿ ಡಾ। ವಿರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸುತ್ತಾರೆ. ನಂತರ ಹೆಗ್ಗಡೆ ಕುಟುಂಬದ ಮೇಲೆಯೇ ಆರೋಪ ಇರುವ ಹತ್ಯೆಯಾದ ಸೌಜನ್ಯಾಳ ಮನೆಗೂ ಹೋಗುತ್ತಾರೆ. ಹಾಗಾದರೆ ಬಿಜೆಪಿಯವರು ಯಾರ ಪರ ಇದ್ದಾರೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ ಸೌಜನ್ಯ ಮನೆಗೆ ಮೊನ್ನೆ ತೆರಳಿ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಟಾಂಗ್‌ ನೀಡಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹತ್ಯೆಯಾದ ಸೌಜನ್ಯ ಪ್ರಕರಣವನ್ನು ಮತ್ತೆ ಸಿಬಿಐಗೆ ಕೊಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅವರೇ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸುಪ್ರೀಂಕೋರ್ಟ್‌ಗೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆಯೇ ಆರೋಪವಿದೆ. ಹಾಗಾದರೆ, ಬಿಜೆಪಿಯವರು ಯಾರ ಪರ ಇದ್ದಾರೆ?’ ಎಂದು ಪ್ರಶ್ನಿಸಿದರು.

ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.ಬಿಜೆಪಿಯದು ರಾಜಕೀಯ ಯಾತ್ರೆ:

ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮಯಾತ್ರೆಯಲ್ಲ, ರಾಜಕೀಯ ಯಾತ್ರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಈಗ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ, ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ? ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ, ಮೃತದೇಹಗಳು ಸಿಗದೇ ಹೋದಾಗ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ತಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕು ಎಂದಿದ್ದಾರೆ. ಎಸ್ಐಟಿ, ತನಿಖೆಯನ್ನು ಸ್ವತಂತ್ರವಾಗಿ ಮಾಡುತ್ತಿದೆ. ನಾವ್ಯಾರೂ ಅದರಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಏನೇ ಇದ್ದರೂ, ಸತ್ಯ ಹೊರಬರಲಿ’ ಎಂದು ಹೇಳಿದರು.

ಹೊರದೇಶಗಳಿಂದ ಇದಕ್ಕಾಗಿ ಹಣ ಬಂದಿದೆ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿ, ‘ಈ ಆರೋಪದಲ್ಲಿ ಸತ್ಯವಿಲ್ಲ’ ಎಂದರು. ‘ವಿರೋಧ, ಟೀಕೆಯನ್ನು ಸ್ವಾಗತಿಸುತ್ತೇವೆ. ಆದರೆ, ಎಲ್ಲಾ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು’ ಎಂದರು.ಅಶೋಕ್ ಸದನದಲ್ಲಿ ಚರ್ಚೆ ಮಾಡಿದ್ದೇ ಬೇರೆ:ಚಿನ್ನಯ್ಯ ಎಂಬ ವ್ಯಕ್ತಿಯನ್ನು ಕರೆತಂದಿರುವುದೇ ಕಾಂಗ್ರೆಸ್ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿ, ಸದನದಲ್ಲಿ ಈ ಬಗ್ಗೆ ಚರ್ಚೆಯಾದಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್ ಮಾತನಾಡಿದ್ದೇ ಬೇರೆ. ಈಗ ಅವರು ಮಾತನಾಡುತ್ತಿರುವುದೇ ಬೇರೆ. ಯಾರೇ ಆಗಲಿ, ದಿನಕ್ಕೊಂದು ಹೇಳಿಕೆ ಕೊಡಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆಯೇ ಆಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ