ತೆರಿಗೆ ಪಾವತಿಯಲ್ಲಿ ಕರ್ನಾಟಕದ್ದು ಎರಡನೇ ಸ್ಥಾನ

KannadaprabhaNewsNetwork |  
Published : Sep 03, 2025, 01:01 AM IST
01 | Kannada Prabha

ಸಾರಾಂಶ

ದೇವನಹಳ್ಳಿ: ಅಣ್ಣೇಶ್ವರ ಗ್ರಾಮ ಪಂಚಾಯಿತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಭಿವೃದ್ಧಿ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಗಮನಹರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ದೇವನಹಳ್ಳಿ: ಅಣ್ಣೇಶ್ವರ ಗ್ರಾಮ ಪಂಚಾಯಿತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಭಿವೃದ್ಧಿ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಗಮನಹರಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ತಾಲೂಕಿನ ಅಣ್ಣೇಶ್ವರ ಗ್ರಾಪಂ ನೂತನ ಗ್ರಾಮಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಹೆಚ್ಚು ತೆರಿಗೆ ಸಂಗ್ರಹ ಪಂಚಾಯಿತಿಗೆ ಬರುತ್ತಿದೆ. ಹಾಲಿ ಮಾಜಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ತೆರಿಗೆ ಸದ್ಬಳಸಿಕೊಳ್ಳಬೇಕು. ಗ್ಯಾರಂಟಿ ಯೋಜನೆ ಜಾರಿಗೆ ತಂದ ನಂತರ ತಲಾದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ತೆರಿಗೆ ಪಾವತಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಪೋಡಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ರೈತರ ಜಮೀನುಗಳಿಗೆ ರಸ್ತೆ, ಸ್ಮಶಾನಕ್ಕೆ ರಸ್ತೆ ಸಂಪರ್ಕ, ಬಡವರಿಗೆ ನಿವೇಶನ, ಮನೆ ನೀಡುವುದು ಮೊದಲ ಆದ್ಯತೆ. ಮೂರ್ನಾಲ್ಕು ತಿಂಗಳಲ್ಲಿ ೨೫೦೦ ನಿವೇಶನ ಎಲ್ಲಾ ವರ್ಗದ ಬಡವರಿಗೆ ನೀಡಲಾಗುವುದು. ಹಾಗೆ ಮನೆ ಇಲ್ಲದವರಿಗೆ ಮನೆ ನೀಡಲಾಗುತ್ತಿದೆ. ಸರ್ಕಾರ ಪ್ರಣಾಳಿಕೆಯಂತೆ ರೈತರ ಪರ, ಬಡವರ ಪರ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಬಳಿಕ ೫೦ ಲಕ್ಷ ವೆಚ್ಚದಲ್ಲಿ ಮಹಿಳಾ ಕೌಶಲ್ಯಾಭಿವೃದ್ಧಿ ಭವನ, ೧.೫ ಕೋಟಿ ವೆಚ್ಚದಲ್ಲಿ ಗ್ರಾಪಂ ಅರಿವು ಕೇಂದ್ರ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಇತರೆ ಸರ್ಕಾರಿ ಕಟ್ಟಡಗಳ ಸಂಕೀರ್ಣ, ೨೧ ಲಕ್ಷ ವೆಚ್ಚದಲ್ಲಿ ಚಿಕ್ಕಸಣ್ಣೆ ಗ್ರಾಮದ ಅಂಗನವಾಡಿ ಕೇಂದ್ರ, ೫೪.೫೦ ಲಕ್ಷ ವೆಚ್ಚದಲ್ಲಿ ಬೈಚಾಪುರ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ, ೨೫ ಲಕ್ಷ ವೆಚ್ಚದಲ್ಲಿ ಸ್ವಚ್ಛ ಸಂಕೀರ್ಣ ಮತ್ತು ದ್ರವತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ನೂತನ ಕಟ್ಟಡಗಳನ್ನು ಸಚಿವರು ಉದ್ಘಾಟಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸಹಕಾರಿ ಆಗಿದೆ. ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಪಿಡಿಒ ಗಂಗಾರಾಜು ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಸಚಿವರು ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ, ಎರಡು ವರ್ಷದೊಳಗೆ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು ಅದರಂತೆಯೇ ಎರಡು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಅಣ್ಣೇಶ್ವರ ಗ್ರಾಪಂ ಅಧ್ಯಕ್ಷೆ ಉಮಾ ಜಿ.ಮುನಿರಾಜು, ಉಪಾಧ್ಯಕ್ಷ ಮುನಿರಾಜಪ್ಪ, ಬಯಪ ಅಧ್ಯಕ್ಷ ಶಾಂತಕುಮಾರ್, ತಾಲೂಕು ಅಧ್ಯಕ್ಷ ಜಗನ್ನಾಥ, ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ, ತಹಸೀಲ್ದಾರ್ ಅನಿಲ್ ಕುಮಾರ್, ಇಒ ಶ್ರೀನಾಥ್ ಗೌಡ ಇತರರು ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌)

ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಪಂ ನೂತನ ಗ್ರಾಮಸೌಧ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಉದ್ಘಾಟಿಸಿದರು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಜಗನ್ನಾಥ, ಗ್ರಾಪಂ ಅಧ್ಯಕ್ಷೆ ಉಮಾ, ಉಪಾಧ್ಯಕ್ಷ ಮುನಿರಾಜಪ್ಪ, ಬಯಪ ಅಧ್ಯಕ್ಷ ಶಾಂತಕುಮಾರ್ ಇತರರಿದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ