ಲಿಂಗರಾಜು ಕೋರಾ ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ಮೂರು ವಿಶ್ವವಿದ್ಯಾಲಯಗಳು ಸೇರಿ ರಾಜ್ಯದ ಆರು ಸಾರ್ವಜನಿಕ ವಿವಿಗಳಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲದಿಂದ ಕಾಯಂ ಕುಲಪತಿಗಳೇ ಇಲ್ಲ!ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ, ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಯ, ಮಂಡ್ಯ ವಿಶ್ವವಿದ್ಯಾಲಯ, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯಗಳು ಕಾಯಂ ಕುಲಪತಿಗಳಿಲ್ಲದೆ ಪ್ರಭಾರ ಅಥವಾ ಹಂಗಾಮಿ ಕುಲಪತಿಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಮಂಡ್ಯ, ಮಹಾರಾಣಿ ಮತ್ತು ನೃಪತುಂಗ ವಿವಿಗಳಲ್ಲಿ 2024ರ ನವೆಂಬರ್‌ನಲ್ಲೇ ಕುಲಪತಿ ಹುದ್ದೆಗಳು ಖಾಲಿಯಾಗಿದ್ದು, ಇನ್ನೂ ಹೊಸ ಕುಲಪತಿ ಆಯ್ಕೆಗೆ ಶೋಧನಾ ಸಮಿತಿಯೇ ರಚನೆಯಾಗಿಲ್ಲ. ಗುಲ್ಬರ್ಗಾ ವಿವಿಯಲ್ಲಿ 2025ರ ಜನವರಿ, ಗಂಗೂಬಾಯಿ ಸಂಗೀತ ವಿವಿಯಲ್ಲಿ ಫೆಬ್ರವರಿಯಲ್ಲಿ, ಬೆಂಗಳೂರು ನಗರ ವಿವಿಯಲ್ಲಿ ಕಳೆದ ಏಪ್ರಿಲ್‌ನಿಂದ ಕುಲಪತಿ ಹುದ್ದೆಗಳು ಖಾಲಿಯಾಗಿವೆ. ಇವುಗಳಿಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸರ್ಕಾರ ಇತ್ತೀಚಿನ ಮಳೆಗಾಲದ ಅಧಿವೇಶನದ ವೇಳೆ ಸದನದಲ್ಲಿ ಉತ್ತರ ನೀಡಿದೆ.
ಹಂಗಾಮಿ ಕುಲಪತಿಗಳು ದಿನನಿತ್ಯದ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಕಾನೂನುಬದ್ಧ ಅಧಿಕಾರ ಹೊಂದಿದ್ದರೂ, ಅವರು ಹೆಚ್ಚಾಗಿ ದೀರ್ಘಾವಧಿಯ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ವಿಶ್ರಾಂತ ಕುಲಪತಿಗಳು.ವಿಳಂಬಕ್ಕೆ ಸರ್ಕಾರದ ವಿಭಿನ್ನ ಕಾರಣ
ಆರೂ ವಿವಿಗಳ ಕುಲಪತಿ ನೇಮಕಾತಿ ವಿಳಂಬಕ್ಕೆ ಉನ್ನತ ಶಿಕ್ಷಣ ಇಲಾಖೆ ವಿಭಿನ್ನ ಕಾರಣಗಳನ್ನು ನೀಡುತ್ತಿದೆ. ಬೆಂಗಳೂರು ನಗರ ವಿವಿ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳಿಗೆ ಹೊಸ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿಗಳು ತಮ್ಮ ಶಿಫಾರಸು ಸಲ್ಲಿಸಿವೆ. ಕಡತ ಮುಖ್ಯಮಂತ್ರಿಯವರ ಮುಂದಿದ್ದು, ಶೀಘ್ರ ಅಂತಿಮ ಅನುಮೋದನೆಗಾಗಿ ರಾಜ್ಯಪಾಲರ ಮುಂದೆ ಇಡಲಾಗುವುದು ಎಂದು ಎನ್ನುತ್ತಾರೆ ಅಧಿಕಾರಿಗಳು.ಇನ್ನು, ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಎರಡ್ಮೂರು ಬಾರಿ ಅಧಿಸೂಚನೆ ಹೊರಡಿಸಿದ್ದರೂ ಅರ್ಹತೆ ಇರುವ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಉಳಿದಂತೆ ಬಿಜೆಪಿ ಅವಧಿಯಲ್ಲಿ ರಚನೆಯಾದ 11 ಹೊಸ ವಿವಿಗಳ ಅಳಿವು, ಉಳಿವಿನ ವಿಚಾರ ಸಚಿವ ಸಂಪುಟ ಉಪ ಸಮಿತಿ ಮುಂದಿದೆ. ಆ ವಿವಿಗಳ ಪಟ್ಟಿಯಲ್ಲೇ ಮಹಾರಾಣಿ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳು ಇರುವುದರಿಂದ ಉಪಸಮಿತಿಯ ಶಿಫಾರಸಿನ ಆಧಾರದಲ್ಲಿ ಅವುಗಳಿಗೆ ಹೊಸ ಕುಲಪತಿ ನೇಮಕ ಮಾಡಬೇಕಾ, ಬೇಡವಾ ಎನ್ನುವುದು ನಿರ್ಧಾರವಾಗಬೇಕಿದೆ ಎನ್ನಲಾಗಿದೆ.