- ಮರೇವಾಡ ಗ್ರಾಮದಲ್ಲಿ ಮತದಾನ ಜಾಗೃತಿಯಲ್ಲಿ ರೇಖಾ ಡೊಳ್ಳಿನ
ಪ್ರತಿಯೊಂದು ಚುನಾವಣೆಯಲ್ಲಿ ಮತದಾನ ಪ್ರಮಾಣ ಕ್ಷೀಣಿಸುವುದು ಆಘಾತಕಾರಿ ಸಂಗತಿ. ಆದ್ದರಿಂದ ಪ್ರಜ್ಞಾವಂತರು ತಪ್ಪದೇ, ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರೇಖಾ ಡೊಳ್ಳಿನವರ ಹೇಳಿದರು.
ಜಿಲ್ಲಾಡಳಿತ ಚುನಾವಣಾ ಸಾಕ್ಷರತಾ ಕ್ಲಬ್, ಅಂಜುಮನ್ ಮಹಾವಿದ್ಯಾಲಯದ ಜೊತೆಗೂಡಿ ತಾಲೂಕಿನ ಮರೇವಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸರ್ವರೂ ಹಕ್ಕು ಚಲಾಯಿಸಬೇಕು. ಕೆಲವರು ಮತದಾನ ಮಾಡದಿರಲು ಕಾರಣ ಇರಬಹುದು. ಅಂತಹವರಿಗೆ ಸರ್ಕಾರ ನೋಟಾ ಅವಕಾಶ ಕಲ್ಪಿಸಿದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಂ. ಮಕಾಂದಾರ ಮಾತನಾಡಿ, ಸರ್ವರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ. ದೇಶದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಅಭಿಪ್ರಾಯ ಹೊಂದಲು ಜನರು ಹಕ್ಕು ಚಲಾಯಿಸುವುದು ಮುಖ್ಯ ಎಂದರು.
ಗ್ರಾಪಂ ಉಪಾಧ್ಯಕ್ಷರಾದ ನೀಲವ್ವ ವಗ್ಗರ, ನೋಡಲ್ ಅಧಿಕಾರಿ ಡಾ. ಎನ್.ವಿ. ಗುದಗನವರ, ಪತ್ರಿಕೋದ್ಯಮದ ಮುಖ್ಯಸ್ಥ ಡಾ. ಎಸ್.ಎಸ್. ಅದೋನಿ, ಐಕ್ಯೂಎಸಿ ಡಾ. ಎನ್.ಬಿ. ನಾಲತವಾಡ, ಡಾ. ಎಫ್.ಎಚ್. ನದಾಫ್ ಇದ್ದರು.
ಕರಡಿ ಮಜಲು, ಶಾಲಾ ವಿದ್ಯಾರ್ಥಿಗಳ ಡ್ರಮ್ ಸೆಟ್, ಮುತ್ರೈದೆಯರ ಆರುತಿ ಮೇಳದ ಜೊತೆಗೆ ಎತ್ತುಗಳ ಕೊಂಬಿಗೆ ಗೊಂಡೆ, ರಿಬ್ಬನ್, ಜೂಲಾ, ಬಸವೇಶ್ವರರ ಭಾವಚಿತ್ರದ ಅಲಂಕೃತ ಚಕ್ಕಡಿ ಮತದಾನ ಜಾಗೃತಿ ಮೆರವಣಿಗೆ ನಡೆಯಿತು. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮತದಾನ ಜಾಗೃತಿ ಅಭಿಯಾನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನಃ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.