ಅನುಭವದ ಆತ್ಮಾಭಿವ್ಯಕ್ತಿಯೇ ಕಾವ್ಯ

KannadaprabhaNewsNetwork |  
Published : Dec 27, 2023, 01:30 AM ISTUpdated : Dec 27, 2023, 01:31 AM IST
ಆಶಾ ಕಡಪಟ್ಟಿ ಅವರ ಮೂರು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು | Kannada Prabha

ಸಾರಾಂಶ

ಸಾಹಿತಿ ಆಶಾ ಕಡಪಟ್ಟಿಯ 3 ಕೃತಿಗಳ ಲೋಕಾರ್ಪಣೆಗೊಳಿಸಿ ಚಿಂತಕ ಡಾ.ಸಿ.ಕೆ. ನಾವಲಗಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ನಮಗರಿವಿಲ್ಲದೆ ನೋವು, ದುಃಖ ಅನುಭವಿಸುತ್ತೇವೆ. ಆ ಅನುಭವವೇ ಅನುಭೂತಿಯಾಗುತ್ತದೆ. ಕ್ಷಣವೊಂದರ ಅನುಭವದ ಆತ್ಮಾಭಿವ್ಯಕ್ತಿಯೇ ಕಾವ್ಯವಾಗುತ್ತದೆ. ಕಾವ್ಯಕ್ಕೆ ನೋವು, ದುಃಖ, ವಿರಹವೇ ಮುಖ್ಯ ಪರಿಣಾಮಕಾರಕ ಎಂದು ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ.ಸಿ.ಕೆ. ನಾವಲಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾದ ಸಾಹಿತ್ಯ ಸಂವಾದ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಹಿತಿ ಆಶಾ ಕಡಪಟ್ಟಿ ಅವರ ಮೂರು ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ತಾಯಿ, ಪತಿ ಕಳೆದುಕೊಂಡ ದುಃಖತಪ್ತ ಕವಯಿತ್ರಿ ತನ್ನ ವಿರಹವೇದನೆಯ ಅಳಲನ್ನು ಮಮ್ಮಲ ಮರಗುವಂತೆ ತೋಡಿಕೊಂಡಿದ್ದಾಳೆ. ಇದು ಅತ್ಮಗತ ಕಾವ್ಯವೆನಿಸಿದರೂ ಎಲ್ಲ ತಾಯಿ, ಮಗಳಿಗೂ ಅನ್ವಯಿಸುವಂಥದ್ದು, ಹಾಗಾಗಿ ಇದೊಂದು ಜನಪದ ತ್ರಿಪದಿ ಸಾಹಿತ್ಯಕ್ಕೆ ನಿಷ್ಠೆಯಿಂದ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ ಎಂದು ಹೇಳಿದರು.

ಸಾಹಿತಿ ಸರಜೂ ಕಾಟ್ಕರ್ ಮಾತನಾಡಿ, ಸಾಕಷ್ಟು ಮಹಿಳೆಯರನ್ನು ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿ ಬೆಳೆಸಿರುವ ಕೀರ್ತಿ ಆಶಾ ಕಡಪಟ್ಟಿ ಅವರಿಗೆ ಸಲ್ಲುತ್ತದೆ. ಒಂದು ಕಾಲಕ್ಕೆ ಬೆಳಗಾವಿ ಲೇಖಕಿಯರ ಸಂಘದಲ್ಲಿ ಕೇವಲ ನಾಲ್ಕು ಸದಸ್ಯರು ಇದ್ದರು. ಇವತ್ತು ಅದು ತುಂಬು ಕುಟುಂಬವಾಗಿದೆ. ಬರೆಯಲು ಪ್ರೋತ್ಸಾಹಿಸಿ ಸಾಕಷ್ಟು ಬೆಂಬಲ ನೀಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ.ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ, ಆಶಾ ಕಡಪಟ್ಟಿ ಒಬ್ಬ ಸೃಜನಶೀಲ, ಹೃದಯವಂತ ಕವಿಯತ್ರಿ. ತಾವು ಬೆಳೆದು ಜತೆಗೆ ಇರುವುವರನ್ನು ಬೆಳೆಸುವ ಮನೋಭಾವ ಹೊಂದಿದವರು. ಈ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿರುವುದು ಹೆಮ್ಮೆಯ ವಿಷಯ ಎಂದರು.

ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಸ್ವಾಗತಿಸಿದರು. ಹೀರಾ ಚೌಗಲೆ ಪ್ರಾರ್ಥಿಸಿದರು. ಸುನಂದಾ ಎಮ್ಮಿ, ಡಾ. ಅನ್ನಪೂರ್ಣ ಹಿರೇಮಠ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ