ಕನ್ನಡಪ್ರಭವಾರ್ತೆ ಪುತ್ತೂರುಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ಅಸ್ಮಿತೆ, ಚೌಕಟ್ಟುಗಳಿದ್ದು, ಅದನ್ನು ಮುರಿಯಬಾರದು. ಈ ನಿಟ್ಟಿನಲ್ಲಿ ಒಕ್ಕಲಿಗ ಗೌಡರು ಸಂಘಟನಾತ್ಮಕ ಬದುಕಿನೊಂದಿಗೆ ತಮ್ಮ ಅಸ್ಮಿತೆ ಮತ್ತು ಚೌಕಟ್ಟುಗಳನ್ನು ಬಲಪಡಿಸಿಕೊಳ್ಳಬೇಕು ಹಾಗೂ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಗೌಡ ಯುವ ಸಂಘ, ಗೌಡ ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ-ಸಹಾಯ ಸಹಯೋಗದೊಂದಿಗೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.ಆದಿಚುಂಚನಗಿರಿ ಮಂಗಳೂರು ಶಾಖಾ ಮಠವು ಆರಂಭಗೊಂಡು ೨೫ ನೇ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಒಕ್ಕಲಿಗ ಗೌಡ ಸಮುದಾಯದ ಮೂಲ, ಆಚಾರ, ವಿಚಾರ, ಬದುಕಿನ ಕುರಿತ ಮಾರ್ಗಸೂಚಿ ಪುಸ್ತಕವನ್ನು ಬರೆಯಲು ಯೋಚನೆ ಮಾಡಿದ್ದು, ಅಮೂಲ್ಯ ವಿಚಾರಗಳಿದ್ದರೆ ಗೌಡ ಸಂಘಗಳ ಮೂಲಕ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಬಲವಾದ ಹಾಗೂ ದೃಢವಾದ ಪುಸ್ತಕವನ್ನು ಮುಂದಿನ ಸೆಪ್ಟೆಂಬರ್ ತಿಂಗಳ ಅವಧಿಗೆ ಹೊರತರುವುದಾಗಿ ಹೇಳಿದರು.ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಪಾತ್ರ ಒಂದೇ ರೀತಿಯದ್ದಾಗಿದೆ ಹಾಗೂ ಮಹತ್ವದ್ದೂ ಆಗಿದೆ. ದ.ಕ. ಜಿಲ್ಲೆಯಲ್ಲಿ ಸಂಘ ಸಂಸ್ಥೆಗಳ ಸೇವೆ ಬಹಳಷ್ಟಿದ್ದು, ಇನ್ನಷ್ಟು ಸೇವೆ ಲಭಿಸಬೇಕು ಎಂದು ಶುಭಹಾರೈಸಿದರು.
ಪುತ್ತೂರು ಮಾಜಿ ಶಾಸಕ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿದರು.ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆಗಳಾದ ಸಿಂಚನಾ ಎಂ.ಎಸ್., ಕೀರ್ತಿ, ಸಿಂಚನಾ ಬೈಲಾಡಿ, ವಿನುಶ್ರೀ, ಚಿಂತನಾ ಸಿ., ಸುಶಾಂತ್, ಅನಘಾ ಅವರನ್ನು ಸನ್ಮಾನಿಸಲಾಯಿತು. ಕೃಷಿಕ, ದಾನಿ ರಾಮಣ್ಣ ಗೌಡ ಕೆಯ್ಯೂರು, ಮಹಿಳಾ ವಿಭಾಗದಿಂದ ನಿವೃತ್ತ ಉಪ ಪ್ರಾಂಶುಪಾಲೆ ಲೀಲಾವತಿ ಎಂ., ಯುವ ವಿಭಾಗದಿಂದ ರಾಷ್ಟ್ರೀಯ ಜೀವರಕ್ಷಕ ಈಜು ಸ್ಪರ್ಧೆ ಸಾಧಕ ತ್ರಿಶೂಲ್ ಅವರನ್ನು ಗೌಡ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಒಕ್ಕಲಿಗ ಗೌಡ ಯುವ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮರನಾಥ ಗೌಡರಿಗೆ ನಿಕಟಪೂರ್ವ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಗೌಡ ಸಂಘದ ನೂತನ ಅಧ್ಯಕ್ಷರಾದ ವಾರಿಜಾ ಅವರಿಗೆ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಗೌಡ, ಗೌಡ ಸಂಘದ ನೂತನ ಅಧ್ಯಕ್ಷ ರವಿ ಮುಂಗ್ಲಿಮನೆ ಅವರಿಗೆ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಒಕ್ಕಲಿಗ ಸ್ವ ಸಹಾಯ ಒಕ್ಕೂಟದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪದ ಪ್ರದಾನ ನಡೆಸಲಾಯಿತು.ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ನಿಕಪೂರ್ವ ಮಹಿಳಾ ಸಂಘದ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ನೂತನ ಅಧ್ಯಕ್ಷೆ ವಾರಿಜಾ, ಗೌಡ ಸಂಘದ ನೂತನ ಅಧ್ಯಕ್ಷ ರವಿ ಮುಂಗ್ಲಿಮನೆ, ನಿಕಟಪೂರ್ವ ಕೋಶಾಧಿಕಾರಿ ಲಿಂಗಪ್ಪ ಗೌಡ, ನೂತನ ಕಾರ್ಯದರ್ಶಿ ದಯಾನಂದ ಕೆ., ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಯುವ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗೇಶ್ ಕಡೆಂಜಿ, ನೂತನ ಅಧ್ಯಕ್ಷ ಅಮರನಾಥ ಗೌಡ ಹಾಗೂ ವಿವಿಧ ಪದಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿದರು. ವಸಂತ ವೀರಮಂಗಳ ಕಾರ್ಯಕ್ರಮ ನಿರ್ವಹಿಸಿದರು.