ಸಮೀಕ್ಷೆಯಾಗುತ್ತಿದ್ದಂತೆ ಒಳಮೀಸಲಾತಿ ಜಾರಿಯಾಗಲಿ

KannadaprabhaNewsNetwork | Published : May 20, 2025 1:27 AM
ಮಾದಿಗರಿಗೆ ಮೀಸಲಾತಿ ಸಿಗದೆ ಸಂಕಷ್ಟದಲ್ಲಿದ್ದಾರೆ. ಈಗ ಅವರಿಗೆ ನ್ಯಾಯ ಸಿಗುವ ಕಾಲಬಂದಿದೆ. ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಜಾರಿ ಮಾಡಿಯೇ ಮಾಡುತ್ತದೆ.
Follow Us

ಕೊಪ್ಪಳ:35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಈಗ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆದಿದ್ದು, ಸಮೀಕ್ಷೆ ಮುಗಿಯುತ್ತಿದ್ದಂತೆ ಒಳಮೀಸಲಾತಿ ಜಾರಿ ಮಾಡಲಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗರಿಗೆ ಮೀಸಲಾತಿ ಸಿಗದೆ ಸಂಕಷ್ಟದಲ್ಲಿದ್ದಾರೆ. ಈಗ ಅವರಿಗೆ ನ್ಯಾಯ ಸಿಗುವ ಕಾಲಬಂದಿದೆ. ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಜಾರಿ ಮಾಡಿಯೇ ಮಾಡುತ್ತದೆ. ಹಾಗೊಂದು ವೇಳೆ ಮಾಡದಿದ್ದರೆ ನೋಡೋಣ ಎಂದರು.

ಅತ್ಯಂತ ಶೋಷಣೆಗೆ ಒಳಗಾಗಿ, ಒಳಮೀಸಲಾತಿ ಜಾರಿಗಾಗಿ ಹೋರಾಟ ಮಾಡಿದ್ದೇ ಮಾದಿಗ ಸಮುದಾಯ. 101 ಜಾತಿಗಳಲ್ಲಿ ಒಳಮೀಸಲಾತಿ ಮುಂದಿಟ್ಟುಕೊಂಡು ನಿರಂತವಾಗಿ ಹೋರಾಟ ಮಾಡಲಾಗಿದೆ. ರಾಜ್ಯದಲ್ಲಿಯೂ ಜಾರಿ ಮಾಡಲು ಸಮೀಕ್ಷೆ ನಡೆಯುತ್ತಿದೆ. ಹೀಗಾಗಿ, ಮಾದಿಗ ಸಮುದಾಯವದವರು ಜಾಗೃತಿಯಿಂದ ಜಾತಿ ನಮೂದಿಸಬೇಕು ಮತ್ತು ಯಾರೂ ಸಹ ಸಮೀಕ್ಷೆಯಿಂದ ಹೊರಗೆ ಉಳಿಯಬಾರದು ಎಂದರು.ಒಳ ಮೀಸಲಾತಿ ಇಲ್ಲದೇ ಮಾದಿಗ ಸಮುದಾಯ ವೆಂಟಿಲೇಟರ್‌ನಲ್ಲಿದೆ. ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಹೇಳಿದ್ದು, ನಮಗೆ ಶಕ್ತಿ ತಂದಿದೆ. ಈಗ ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದು, ಕೆಲವು ಸಮಸ್ಯೆಗಳು ಬಗೆಹರಿದಿವೆ. ಜನಗಣತಿ ಹಾಗೂ ಹಿಂದಿನ ವರದಿಗಳ ಅನುಸಾರ ನಿಖರ ದತ್ತಾಂಶ ಸಂಗ್ರಹಕ್ಕೆ ಆದೇಶ ಮಾಡಿದೆ ಎಂದರು.

ಮೈಸೂರು ಭಾಗದ ೧೬ ಜಿಲ್ಲೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಎನ್ನುವ ಗೊಂದಲ ಉಂಟಾಗಿವೆ. ಈಗ ಸರ್ವೆ ನಡೆಯುತ್ತಿದೆ. ಈ ಸಮೀಕ್ಷೆಗಾಗಿ ಜನರಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ನಿಮ್ಮ ಮೂಲ ಜಾತಿ ಬರೆಸಿ ಎಂದಿರುವೆ. ಸಮೀಕ್ಷೆ ನಡೆಯುವ ವೇಳೆ ನಮ್ಮವರು ಊರು, ಹಳ್ಳಿಯಲ್ಲೇ ಇದ್ದು ಸರಿಯಾಗಿ ಸಮೀಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆದಿ ದ್ರಾವಿಡ, ಆದಿ ಕರ್ನಾಟಕ ಎನ್ನುವ ಜಾತಿಗಳನ್ನು ಮುಂದೆ ಜಾತಿ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಅಲ್ಲಿ ಮಾದಿಗರಿಗೂ ಆದಿ ದ್ರಾವಿಡ ಎನ್ನುತ್ತಾರೆ. ಛಲವಾದಿಗಳೂ ಆದಿ ದ್ರಾವಿಡ ಎನ್ನುತ್ತಾರೆ. ಹಾಗಾಗಿ ನಮ್ಮ ಮೂಲ ಜಾತಿ ಹೆಸರು ಬರೆಸಿದರೆ ಈ ಸಮಸ್ಯೆ ಬರುವುದಿಲ್ಲ ಎಂದರು.ಮಾದಿಗ ಸಮುದಾಯದ ಸರ್ಕಾರಿ ನೌಕರರು ತಾವು ರಜೆ ಹಾಕಿಯಾದರೂ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಬೇಡ ಜಂಗಮ ಎನ್ನುವ ಚರ್ಚೆ ಬಂದಿದೆ. ಬೇಡ ಜಂಗಮರು ಎಂದರೆ ಒಲೆ ಮಾದಿಗರ ಮನೆಯಲ್ಲಿ ಬೇಡಿ ತಿನ್ನುವವರು. ಪ್ರಾಣಿಗಳ ಬೇಟೆಯಾಡಿ ಮಾಂಸ ತಿನ್ನುವವರು. ಸತ್ತ ದನಗಳ ಚರ್ಮ ಮಾಡಿ ಕೊಡುವವರು, ಅವರನ್ನು ಬೇಡ ಜಂಗಮ ಎನ್ನುತ್ತೇವೆ. ಆದರೆ ಪ್ರಸ್ತುತ ಲಿಂಗಾಯತರ ಗುರುಗಳು ಮಾದಿಗರ ಅನ್ನ ಕದಿಯುವ ಕೆಲಸ ಮಾಡದಿರಲಿ ಎಂದರು. ಬೇಡಜಂಗಮ ಎನ್ನುವುದನ್ನೇ ತೆಗೆದು ಹಾಕಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ನಡೆಸುತ್ತಿದ್ದು, ಅವರೇ ಒಳಮೀಸಲಾತಿ ಜಾರಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಮಾದಿಗ ಸಮುದಾಯದ ಮುಖಂಡರಾದ ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ, ಹನುಮೇಶ ಕಡೆಮನಿ, ಮಹಾಲಕ್ಷ್ಮಿ ಕಂದಾರಿ, ಮಲ್ಲು ಪೂಜಾರ, ಯಲ್ಲಪ್ಪ ಹಳೇಮನಿ ಇತರರು ಇದ್ದರು.ಸಿದ್ದರಾಮಯ್ಯ ೨ನೇ ಅಂಬೇಡ್ಕರ್ಶೋಷಿತ ಸಮುದಾಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಧ್ವನಿಯಾಗಿದ್ದಾರೆ. ಈಗ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಅಂಬೇಡ್ಕರ್ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿ-ಎಸ್‌ಟಿ ಸಮುದಾಯದ ಜನಾಂಗದ ಬಗ್ಗೆ ಅಪಾರ ಕಾಳಜಿ ಇರುವುದು ಅಷ್ಟೇ ಅಲ್ಲ, ಅವರ ಶ್ರೇಯೋಭಿವೃದ್ಧಿಗಾಗಿ ಕಾಯ್ದೆಯನ್ನೇ ಮಾಡಿದ್ದಾರೆ. ಗುತ್ತಿಗೆಯಲ್ಲಿ ಮೀಸಲು ನೀಡಿದ್ದಾರೆ. ಬಜೆಟ್‌ನಲ್ಲಿ ಶೇ. ೨೪.೧ರಷ್ಟು ಅನುದಾನ ಮೀಸಲಿಟ್ಟರು. ಹೀಗಾಗಿ, ದಲಿತರ ಪಾಲಿಗೆ ಸಿದ್ದರಾಮಯ್ಯ ಅವರು ಎರಡನೇ ಅಂಬೇಡ್ಕರ್ ಎಂದರು.