ಮಹಾಯೋಜನೆ ಪರಿಷ್ಕರಣೆ ಟೆಂಡರ್ ವಿಚಾರ ತನಿಖೆಯಾಗಲಿ

KannadaprabhaNewsNetwork |  
Published : Oct 25, 2025, 01:00 AM IST
ಫೋಟೋ : ೨೪ಕೆಎಂಟಿ_ಒಸಿಟಿ_ಕೆಪಿ೧ : ಪುರಸಭೆಯ ಸಾಮಾನ್ಯ ಸಭೆ  | Kannada Prabha

ಸಾರಾಂಶ

ಕುಮಟಾ ಪುರಸಭೆಯ ಮಹಾಯೋಜನೆಗೆ ಪರಿಷ್ಕರಣೆಗೆ ಸಂಬಂಧಿಸಿ ನಿಯಮಬಾಹಿರವಾಗಿ ಮೆನ್ಯುವಲ್ ಟೆಂಡರ್ ಕರೆದಿರುವುದು ಹಾಗೂ ಕೆಲಸ ಮಾಡದ ಟೆಂಡರ್‌ದಾರರಿಗೆ ಲಕ್ಷಾಂತರ ಹಣ ಪಾವತಿಸಿದ ವ್ಯವಹಾರಕ್ಕೆ ಸಂಬಂಧಪಟ್ಟು ಸೂಕ್ತ ತನಿಖೆಯಾಗಬೇಕು ಎಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕುಮಟಾ: ಪುರಸಭೆಯ ಮಹಾಯೋಜನೆಗೆ ಪರಿಷ್ಕರಣೆಗೆ ಸಂಬಂಧಿಸಿ ನಿಯಮಬಾಹಿರವಾಗಿ ಮೆನ್ಯುವಲ್ ಟೆಂಡರ್ ಕರೆದಿರುವುದು ಹಾಗೂ ಕೆಲಸ ಮಾಡದ ಟೆಂಡರ್‌ದಾರರಿಗೆ ಲಕ್ಷಾಂತರ ಹಣ ಪಾವತಿಸಿದ ವ್ಯವಹಾರಕ್ಕೆ ಸಂಬಂಧಪಟ್ಟು ಸೂಕ್ತ ತನಿಖೆಯಾಗಬೇಕು ಎಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ರಥಬೀದಿಯ ರಾರಾ ಅಣ್ಣಾ ಪೈ ಸಭಾಭವನದಲ್ಲಿ ಶುಕ್ರವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಸದಸ್ಯ ಸಂತೋಷ ನಾಯ್ಕ ವಿಷಯ ಪ್ರಸ್ತಾಪಿಸಿ, ಯಾವುದೇ ₹೫ ಲಕ್ಷ ಮೇಲ್ಪಟ್ಟ ಟೆಂಡರನ್ನು ಮೆನ್ಯುವಲ್ ಆಗಿ ಕರೆಯಲು ನಿಯಮದಲ್ಲಿ ಅವಕಾಶವಿಲ್ಲ. ಆದರೆ ಮಹಾಯೋಜನೆ ಪರಿಷ್ಕರಣೆ ಸಂಬಂಧಿಸಿ ದೆಹಲಿಯ ಸೆಂಟರ್ ಫಾರ್ ಇಂಟಗ್ರೇಟೆಡ್ ಸೋಶಿಯೊ-ಇಕನಾಮಿಕ್ ಡೆವಲಪ್‌ಮೆಂಟ್ ಆ್ಯಂಡ್‌ ರಿಸರ್ಚ ಎಜೆನ್ಸಿಗೆ ₹೮,೭೧,೭೨೫ಗಳಿಗೆ ಮೆನ್ಯುವಲ್ ಟೆಂಡರ್ ಕರೆದಿದ್ದು ಹೇಗೆ? ೬-೬-೨೦೧೮ರಲ್ಲಿ ಕಾರ್ಯಾದೇಶವಾಗಿದ್ದರೂ ಈ ವರೆಗೆ ಯಾವುದೇ ಮಹಾಯೋಜನೆ ಪರಿಷ್ಕರಣೆ ಕೆಲಸ ಮಾಡಿರದ ದೆಹಲಿಯ ಸೆಂಟರ್ ಫಾರ್ ಇಂಟಗ್ರೇಟೆಡ್ ಸೋಶಿಯೊ-ಇಕನಾಮಿಕ್ ಡೆವಲಪ್‌ಮೆಂಟ್ ಆ್ಯಂಡ್‌ ರಿಸರ್ಚ್‌ ಎಜೆನ್ಸಿಗೆ ಈಗಾಗಲೇ ₹೫,೪೮,೬೦೬ ಪಾವತಿಸಿದ್ದಾರೂ ಏಕೆ ಎಂದು ಪ್ರಶ್ನಿಸಿದರು.

ಉಪಾಧ್ಯಕ್ಷ ಮಹೇಶ ನಾಯ್ಕ ದನಿಗೂಡಿಸಿ, ಜಿಲ್ಲಾಮಟ್ಟದ ಪತ್ರಿಕೆಯೊಂದರಲ್ಲಿ ಸಣ್ಣದಾಗಿ ಜಾಹೀರಾತು ಹಾಕಿದ್ದಕ್ಕೆ ದೆಹಲಿಯಿಂದ ಕಂಪನಿಯೊಂದು ಬಂದು ಟೆಂಡರ್ ಹಾಕಿದ್ದು, ಅದಕ್ಕೆ ಹಣ ಪಾವತಿಸಲಾಗಿದೆ. ಇದೆಲ್ಲಾ ಹೇಗೆ ಸಾಧ್ಯ? ಇದರ ಹಿಂದಿರುವ ಕರಾಮತ್ತು ಏನು ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಎಂಜಿನಿಯರ್ ಮಡಿವಾಳ, ಇದು ೨೦೧೮ರಲ್ಲೇ ನಡೆದಿದ್ದು ನನಗೆ ತಿಳಿದಿಲ್ಲ ಎಂದರು. ಬಳಿಕ ಸಭೆಯ ಠರಾವು ನಿರ್ಣಯದಂತೆ ಕೂಡಲೇ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸಲು ಹಾಗೂ ಪಾವತಿಸಿದ ಹಣ ಮರಳಿ ಪಡೆಯಲು ಸಭೆಯಲ್ಲಿ ಒಕ್ಕೊರಲ ನಿರ್ಣಯವನ್ನು ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಪ್ರಕಟಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಬೀದಿದೀಪ ನಿರ್ವಹಣೆಯ ಕುರಿತು ಸದಸ್ಯರಾದ ಅನಿಲ ಹರ್ಮಲಕರ, ಎಂ.ಟಿ. ನಾಯ್ಕ, ವಿನಯಾ ಜಾರ್ಜ್‌, ತುಳಸು ಗೌಡ, ಕಾಂತರಾಜ ನಾಯ್ಕ, ಸಂತೋಷ ನಾಯ್ಕ ಇನ್ನಿತರರು ದೂರಿದರು. ಸಂತೆ ಹಾಗೂ ರಥಬೀದಿಗಳಲ್ಲೇ ದೀಪ ಕೆಟ್ಟು ವಾರವಾದರೂ ದುರಸ್ತಿಯಿಲ್ಲ. ಬೀದಿದೀಪಗಳು ಸರಿಯಾಗಿ ಉರಿಯುವುದಿಲ್ಲ. ಬಹಳಷ್ಟು ಕಡೆಗಳಲ್ಲಿ ಹಗಲಿಡೀ ದೀಪ ಉರಿಯುತ್ತದೆ. ನಿರ್ವಹಣೆ ಮಾಡುವವರಿಗೆ ಫೋನಾಯಿಸಿದರೆ ಎತ್ತುವುದಿಲ್ಲ ಎಂದು ಆಕ್ಷೇಪಿಸಿದರು. ಅಧ್ಯಕ್ಷೆ ಸುಮತಿ ಭಟ್ ಪ್ರತಿಕ್ರಿಯಿಸಿ, ಬೀದಿದೀಪ ನಿರ್ವಹಣೆಯ ಬಗ್ಗೆ ಆರಂಭದಿಂದಲೂ ಸಾಕಷ್ಟು ದೂರುಗಳಿರುವುದರಿಂದ ಈಗ ನಿರ್ವಹಿಸುತ್ತಿರುವ ಸಿಸಿಎಂಎಸ್‌ನವರನ್ನು ಕೈಬಿಟ್ಟು ಪುರಸಭೆಯಿಂದಲೇ ಬೀದಿದೀಪ ನಿರ್ವಹಣೆಗೆ ನಿರ್ಣಯಿಸಬಹುದಾಗಿದೆ ಎಂದರು.

ವಾರಂಟಿ ಅವಧಿಯಲ್ಲಿ ರಸ್ತೆಗಳು ಕೆಟ್ಟರೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು. ಈ ಬಗ್ಗೆ ಎಂಜಿನಿಯರ್ ಗಮನಹರಿಸುವಂತೆ ಕೆಲವು ಸದಸ್ಯರು ಸೂಚಿಸಿದರು.

ಅಧ್ಯಕ್ಷೆ ಸುಮತಿ ಭಟ್ ಮಾತನಾಡಿ, ಸಭೆಯಲ್ಲಿ ಪುರಸಭೆಯ ಒಳಿತಿಗೆ ಮಾತ್ರ ಚರ್ಚೆಯಾಗಲಿ, ಜಗಳದ ಅಗತ್ಯವಿಲ್ಲ. ನನ್ನ ಈ ಅವಧಿಯಲ್ಲಿ ಸಾಕಷ್ಟು ಪ್ರಗತಿ ಯೋಜನೆಗಳನ್ನು ಹಾಕಿಕೊಂಡಿದ್ದರೂ ಅನಿವಾರ್ಯತೆಯಿಂದ ಎಲ್ಲವನ್ನೂ ಈ ವರೆಗೆ ಮಾಡಿ ಮುಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲಸದ ಬಗ್ಗೆ ಅಸಮಾಧಾನವಿದ್ದರೆ ಕ್ಷಮೆ ಯಾಚಿಸುತ್ತೇನೆ. ಅಧಿಕಾರಿ, ಸಿಬ್ಬಂದಿ ನಾಗರಿಕರ ಹಿತ ಗಮನದಲ್ಲಿಟ್ಟು ಕೆಲಸ ಮಾಡಲಿ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ ಹಾಗೂ ಇತರ ಸದಸ್ಯರು ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ