ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡದವರು ಒಂದಾಗಿ ಇವನಮ್ಮವ ಎಂದು ಬಾಳಬೇಕು, ಚನ್ನಬಸವಾನಂದ ಸ್ವಾಮೀಜಿ ಹಾಗೂ ಗಂಗಾಮಾತಾಜಿ ಒಂದಾಗಿ ಪರ್ವ ನಡೆಸಿದರೆ ಐಕ್ಯತೆ ಸಾರಿದಂತಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡದವರು ಒಂದಾಗಿ ಇವನಮ್ಮವ ಎಂದು ಬಾಳಬೇಕು, ಚನ್ನಬಸವಾನಂದ ಸ್ವಾಮೀಜಿ ಹಾಗೂ ಗಂಗಾಮಾತಾಜಿ ಒಂದಾಗಿ ಪರ್ವ ನಡೆಸಿದರೆ ಐಕ್ಯತೆ ಸಾರಿದಂತಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಕರೆ ನೀಡಿದರು.
ಅವರು ನಗರದ ಸಸ್ತಾಪುರ ಬಂಗ್ಲಾ ಸಮೀಪದ ಎಂಎಂ ಬೇಗ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಸ್ವಾಭಿಮಾನಿ ತತ್ವನಿಷ್ಠ ಶರಣರ ವತಿಯಿಂದ ನಡೆಯುತ್ತಿರುವ ಕಲ್ಯಾಣ ಪರ್ವ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ನೀಡಿದ ಬಸವಣ್ಣನವರು ಮನುಕುಲದ ಸೂರ್ಯ ಆಗಿದ್ದಾರೆ ಎಂದ ಅವರು,
ಬಸವಕಲ್ಯಾಣದ ಅನುಭವ ಮಂಟಪಕ್ಕೆ ಸರ್ಕಾರದ ವತಿಯಿಂದ ಅನುದಾನ ತಂದು ನಿರ್ಮಾಣ ಮಾಡಲಾಗುತ್ತಿದೆ. ಅನುಭವ ಮಂಟಪದ 770 ಕಂಬಗಳ ಮೇಲೆ 770 ಶರಣರ ವಚನಗಳನ್ನು ಬರೆಸಿ ಮಾದರಿಯಾಗಿ ಮಾಡಲಾಗುತ್ತಿದೆ, ವರ್ಷದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.
ಸ್ವಾಭಿಮಾನಿ ಕಲ್ಯಾಣ ಪರ್ವ ರಜತ ಮಹೋತ್ಸವದ ಅಧ್ಯಕ್ಷರಾದ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಪಟ್ಟಣದ ಪರುಷ ಕಟ್ಟೆ ಇಂದಿಗೂ ಅಭಿವೃದ್ಧಿ ಕಾಣದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾಗತಿಕ ಮಟ್ಟದಲ್ಲಿ ಗುರುಬಸವ ಸಂದೇಶವಾದ ಇವನಮ್ಮವ ಎನ್ನದಿದ್ದರೆ ಬಸವ ತತ್ವಕ್ಕೆ ಉಳಿಗಾಲವಿಲ್ಲ. ವೈಯಕ್ತಿಕ ಸ್ವಾರ್ಥ ಮತ್ತು ಹಿತಾಸಕ್ತಿ ತೊರೆದು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡದಿದ್ದರೆ ಮಾತಾಜಿಯವರ ಶ್ರಮ ವ್ಯರ್ಥವಾಗುತ್ತದೆ. ಇದಕ್ಕೆ ಅವರ ನಿಜಾನುಯಾಯಿಗಳಾದ ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ ಮಾತನಾಡಿ, ಮಾತೆ ಮಹಾದೇವಿ ಅವರಂಥ ಧರ್ಮಪ್ರಚಾರಕರು ಮತ್ತೊಬ್ಬರಿಲ್ಲ. ಬಸವ ವಚನಗಳನ್ನು ಮನೆಮನಕ್ಕೆ ತಲುಪಿಸಿದ ಕ್ರಾಂತಿಯ ಕುಡಿ ಅವರಾಗಿದ್ದರು. ಅವರು ಕಟ್ಟಿದ ಸಂಸ್ಥೆಯಲ್ಲಿ ಇಂದು ಸ್ವಾರ್ಥಿಗಳು ತುಂಬಿಕೊಂಡು ಹಾಳುಗೆಡವುತ್ತಿರುವುದು ಶೋಚನೀಯ ಎಂದರು.
ಸಾಮೂಹಿಕ ಪ್ರಾರ್ಥನೆ ಕೃತಿಯನ್ನು ಬಸವಕಲ್ಯಾಣ ಬಸವ ಮಹಾಮನೆಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ದಿವ್ಯ ಸಾನ್ನಿಧ್ಯ ವಹಿಸಿ ಬಿಡುಗಡೆಗೊಳಿಸಿದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತಾಜಿಯವರು ಆರಂಭಿಸಿದ ಸ್ವತಂತ್ರ ಧರ್ಮದ ಹೋರಾಟ ಮುಂದುವರೆಯಲಿ. ಯಾವ ಮಠಾಧೀಶರೂ ಮಾಡದ ಕಾರ್ಯ ಇಂದು ಕ್ರಿಯಾಮೂರ್ತಿಗಳು ಮಾಡುತ್ತಿದ್ದಾರೆ. ಅಂತಹ ಕ್ರಿಯಾಮೂರ್ತಿಗಳನ್ನು ಮಾತಾಜಿಯವರು ತಯಾರಿಸಿ ಹೋಗಿದ್ದಾರೆ. ಮಾತಾಜಿಯವರು ಸಂಪಾದಿಸಿದ ಭೌತಿಕ ಆಸ್ತಿ ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಸಿಗದೇ ಇರಬಹುದು, ಆದರೆ ಅವರ ಆಶೀರ್ವಾದವೆಂಬ ಸಂಪತ್ತು ಸದಾ ಅವರ ಜೊತೆಗಿದೆ ಎಂದರು.
ಧಾರವಾಡದ ಅಬ್ದುಲ್ ರಜಾಕ್ ಖಾದ್ರಿ ಸತ್ತೂರು ಇವರು ವಚನ ಚಿಂತನೆ ದಿನಪತ್ರಿಕೆ ಬಿಡುಗಡೆಗೊಳಿಸಿದರು. ಚಿತ್ರದುರ್ಗದ ತರಂಗಿಣಿ ನೃತ್ಯ ಸಭೀಕರ ಗಮನ ಸೆಳೆಯಿತು. ಡಾ. ಜಯಬಸವಾನಂದ ಸ್ವಾಮೀಜಿ, ಆಂಧ್ರಪ್ರದೇಶದ ಬಸವೇಶ್ವರ ಸ್ವಾಮೀಜಿ, ಗುರುಸ್ವಾಮಿಗಳು, ಸತ್ಯಾದೇವಿ ಮಾತಾಜಿ, ಶಾಂತಾದೇವಿ ಮಾತಾಜಿ, ವಚನಶ್ರೀ ಮಾತಾಜಿ, ಬಸವರಾಜ ಪಾಟೀಲ ಶಿವಪುರ, ಭೀಮರಾವ್ ಬಿರಾದಾರ, ಮಧು ಇಟಕ್ಯಾಳ, ಡಾ. ಮಹೇಶ ಬಿರಾದಾರ, ಬೆಳಗಾವಿ ಅಶೋಕ ಬೆಂಡಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.