ಜನಪದ ಸಾಹಿತ್ಯ ಕೇವಲ ಮನೋರಂಜನೆ ಅಲ್ಲ. ಅದು ಹಿರಿಯರ ಅನುಭವದ ಜೀವಂತ ವಿಶ್ವಕೋಶವಾಗಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಉಳಿಸಿ ಬೆಳೆಸುವುದು ಇಂದಿನ ಯುವಪೀಳಿಗೆಯ ಮೇಲಿದೆ ಎಂದು ನಿವೃತ್ತ ಪ್ರಾಚಾರ್ಯ ಬಾತಿ ಬಸವರಾಜ್ ಹೇಳಿದ್ದಾರೆ.
- ಶಿವಲಿಂಗೇಶ್ವರ ಸರ್ಕಾರಿ ಕಾಲೇಜಿನಲ್ಲಿ ವಿವಿಧ ಘಟಕಗಳ ಉದ್ಘಾಟನೆ
- - -
ಕನ್ನಡಪ್ರಭ ವಾರ್ತೆ ಚನ್ನಗಿರಿ
ಜನಪದ ಸಾಹಿತ್ಯ ಕೇವಲ ಮನೋರಂಜನೆ ಅಲ್ಲ. ಅದು ಹಿರಿಯರ ಅನುಭವದ ಜೀವಂತ ವಿಶ್ವಕೋಶವಾಗಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಉಳಿಸಿ ಬೆಳೆಸುವುದು ಇಂದಿನ ಯುವಪೀಳಿಗೆಯ ಮೇಲಿದೆ ಎಂದು ನಿವೃತ್ತ ಪ್ರಾಚಾರ್ಯ ಬಾತಿ ಬಸವರಾಜ್ ಹೇಳಿದರು.
ಶನಿವಾರ ಇಲ್ಲಿನ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ್ದ 2026-27ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್ ಕ್ರಾಸ್, ರೋವರ್ಸ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿರುಗಾಳಿಯ ಆರ್ಭಟದಿಂದ ಸಾಧಿಸಲಾಗದ್ದನ್ನು ಜ್ಞಾನದ ಸಣ್ಣ ದೀಪದ ಬೆಳಕಿನಿಂದ ಸಾಧಿಸಬಹುದು. ಇಂದು ನಮ್ಮ ಬದುಕು ಮೊಬೈಲ್, ಅಂತರ್ಜಾಲ ಮತ್ತು ಆತುರದ ನಡುವೆ ದಿಕ್ಕುತಪ್ಪಿ ಕತ್ತಲಲ್ಲಿ ನಿಂತಿದೆ. ಈ ಕತ್ತಲನ್ನು ಹೋಗಲಾಡಿಸಿ ನಮ್ಮನ್ನು ಸರಿಯಾದ ದಾರಿಗೆ ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಎನ್ನುವುದು ಅಂಕಗಳನ್ನು ಗಳಿಸಲು ಮಾತ್ರ ಸೀಮಿತವಾಗಿದೆ. ಈ ಮನೋಭಾವದಿಂದ ವಿದ್ಯಾರ್ಥಿಗಳು, ಪೋಷಕರು ಹೊರಬರಬೇಕು. ಶಿಕ್ಷಣ ನಮ್ಮ ಬದುಕಿಗೆ ದಾರಿದೀಪ ಆಗಬೇಕು ಎಂದರು.
ಕಲಿಯುವುದು ಶಿಕ್ಷೆ ಆಗಬಾರದು. ಅದು ಮನೋರಂಜನೆಯ ಸಂಭ್ರಮವಾಗಬೇಕು. ಕಲಿಯುವ ವಯಸ್ಸಿನಲ್ಲಿ ಶಿಕ್ಷಣವನ್ನು ತಪ್ಪಸ್ಸಿನಂತೆ ಕಲಿತವನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾನೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾದಷ್ಟು ಕಲಿತು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ದಿನದ 24 ಗಂಟೆಗಳ ಸಮಯವನ್ನು ವೈಜ್ಞಾನಿಕವಾಗಿ ವಿಂಗಡಿಸಿಕೊಂಡು ಅಭ್ಯಾಸ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಅಮೃತೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಚನ್ನಗಿರಿ ಸರ್ಕಾರಿ ಡಿಗ್ರಿ ಕಾಲೇಜು ದಾವಣಗೆರೆ ವಿ.ವಿ.ಯಲ್ಲಿಯೇ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಹೊಂದಿರುವ ಕಾಲೇಜಾಗಿದೆ. ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಪ್ರತಿವರ್ಷ ರ್ಯಾಂಕ್ ಪಡೆದು ಕಾಲೇಜಿಗೆ ಉತ್ತಮ ಹೆಸರು ಬರುವಂತೆ ಮಾಡಿದ್ದು, ನಮ್ಮ ಕಾಲೇಜು ನ್ಯಾಕ್ ಎ ಗ್ರೇಡ್ ಮಾನ್ಯತೆ ಪಡೆದಿದೆ. ಕ್ಷೇತ್ರದ ಶಾಸಕರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಕಾಲೇಜು ಅಭಿವೃದ್ಧಿಗೊಳ್ಳುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜ್ಯೋತಿಪ್ರಸಾದ್, ಎಂ.ಆರ್.ಶಿವರಾಜ್, ಜ್ಯೋತಿ ಕೋರಿ, ಜಿ.ಆರ್. ಬೈರೇಶ್, ಗಾಯಕ ಶಶಿಕಿರಣ, ಉಪನ್ಯಾಸಕರಾದ ಕಲ್ಲೇಶಪ್ಪ, ಶ್ರೀಕಾಂತ್, ಪ್ರಸನ್ನ, ರಮೇಶ್, ಲಕ್ಷ್ಮಣ್ ನಾಯ್ಕ್, ಸುರೇಶ್, ಅಮೂಲ್ಯ, ನಾಗರಾಜ್ ಸೇರಿದಂತೆ ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.