ಹಿರೇಕೆರೂರು: ಕನ್ನಡ ನೆಲ, ಜಲ ಭಾಷೆಗೆ ತೊಂದರೆ ಆದಾಗ ಎಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದೇವೆ. ಪ್ರತಿಯೊಬ್ಬ ಕನ್ನಡಿಗರು ಕನ್ನಡ ನಾಡು ನುಡಿಯನ್ನು ಅಭಿಮಾನದಿಂದ ರಕ್ಷಣೆ ಮಾಡಬೇಕು. ಕನ್ನಡದ ಪ್ರಾಶಸ್ತ್ಯವನ್ನು ಹೆಚ್ಚಿಸುವುದರ ಜತೆಗೆ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಹಾವೇರಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಸಮ್ಮೇಳಗಳು ಕನ್ನಡ ನಾಡು ನುಡಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿವೆ. ಉದಾಹರಣೆ ಎಂಬಂತೆ ಬೆಳಗಾವಿಯಲ್ಲಿ ಭಾಷೆ ಮತ್ತು ಗಡಿಯ ವಿಚಾರವಾಗಿ ತೊಂದರೆ ಬಂದಾಗ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಘಟನೆಯ ಎಲ್ಲ ಬಳಗಗಳ ಕಳಿಕಳಿಯಿಂದ ಇಂದು ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾಗಿ ಚಳಿಗಾಲದ ಅಧಿವೇಶನ ಕೂಡ ನಡೆಸಲಾಗುತ್ತಿದೆ ಎಂದರು.ಕರ್ನಾಟಕದಲ್ಲಿ ಎಲ್ಲರೂ ಕನ್ನಡ ಕಲಿಯಬೇಕು. ಹೊರ ರಾಜ್ಯದಿಂದ ಬಂದವರೂ ಕನ್ನಡದಲ್ಲಿ ಪರಿಣತಿ ಹೊಂದಬೇಕು ಎಂಬ ಸಂದೇಶ ನೀಡುತ್ತಿದ್ದೇವೆ. ಆಂಗ್ಲ ಭಾಷೆಯೊಂದಿಗೆ ಮಾತೃ ಭಾಷೆಗೆ ಹೆಚ್ಚು ಒತ್ತ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಸಾಹಿತ್ಯದ ಮೂಲಕವೇ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ಈ ಕ್ಷೇತ್ರದ ವರಕವಿ ಸರ್ವಜ್ಞ ತ್ರಿಪದಿಗಳ ಮೂಲಕ ನಮಗೆ ಬದುಕಿನ ದಾರಿ ತೋರಿಸಿದ್ದರೆ, ಶಾಂತಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಅವರ ಹೆಸರನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದೆ ಎಂದರು.ಕನ್ನಡ ಶಾಲೆಗಳು ಬಾಗಿಲು ಹಾಕದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ. ಪಟ್ಟಣದ ಸಮೀಪ ಇರುವ ಗ್ರಾಮಗಳಲ್ಲಿ ಮಕ್ಕಳ ಪ್ರವೇಶಾತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಕನ್ನಡ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅವುಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.ಪಾಲಕರು ಸಹ ಮಕ್ಕಳಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಬೇಕು. ಇತ್ತೀಚೆಗೆ ಗ್ರಂಥಾಲಯ ಸಂಸ್ಕೃತಿಯೂ ನಶಿಸುತ್ತಿದೆ. ಮೊಬೈಲ್‌ನಲ್ಲಿ ಓದಿದ್ದು ಹೆಚ್ಚು ಕಾಲ ನೆನಪಿಗೆ ಉಳಿಯುವುದಿಲ್ಲ, ಹೀಗಾಗಿ ಮೊಬೈಲ್ ಬದಿಗಿಟ್ಟು ಪುಸಕ್ತ ಹಿಡಿದು ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.ಶಿಕ್ಷಣ ತಜ್ಞ, ಸಹಕಾರಿ ಧುರೀಣ ಎಸ್.ಎಸ್. ಪಾಟೀಲ ಮಾತನಾಡಿ, ಇವತ್ತಿನ ಕನ್ನಡ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ನಾವೆಲ್ಲರೂ ಅವಲೋಕಿಸಬೇಕಿದೆ. ಎಲ್ಲರಿಗೂ ಸಿಬಿಎಸ್‌ಇ ಶಿಕ್ಷಣದ ಕಡೆ ವ್ಯಾಮೋಹ ಹೆಚ್ಚಾಗಿದೆ. ಹಳ್ಳಿಯ ಮಕ್ಕಳು ಸಹ ಇಂಗ್ಲಿಷ್ ಮಾಧ್ಯಮದತ್ತ ಮುಖಮಾಡುತ್ತಿದ್ದಾರೆ. ಕಾರಣ ಸರ್ಕಾರ ಕಾಲಕಾಲಕ್ಕೆ ಶಿಕ್ಷಕರ ನೇಮಕ, ಮೂಲಭೂತ ಸೌಲಭ್ಯ ಒದಗಿಸಿ ಸರ್ಕಾರಿ ಕನ್ನಡ ಶಾಲೆಗಳು ಹಾಗೂ ಖಾಸಗಿ ಕನ್ನಡ ಶಾಲೆಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳಬೇಕು ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಈಗ ಬೆಂಗಳೂರಿನಲ್ಲೇ ಕನ್ನಡಿಗರು ಬಹುಸಂಖ್ಯಾತರಾಗಿ ಉಳಿದಿಲ್ಲ, ಅಲ್ಲಿ ಬೇರೆ-ಬೇರೆ ರಾಜ್ಯದವರೇ ಬಂದು ತುಂಬಿದ್ದಾರೆ. ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಬಹಳ ಪ್ರಮುಖವಾಗಿದ್ದು, ಪಾಲಕರು ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದಿಸಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.ವಿಪ ಮಾಜಿ ಮುಖ್ಯಸಚೇತಕ ಡಿ.ಎಂ. ಸಾಲಿ, ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಸಂಕಮ್ಮ ಸಂಕಣ್ಣನವರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಘಟಕದ ಅಧ್ಯಕ್ಷ ಎನ್.ಸುರೇಶಕುಮಾರ, ರಟ್ಟೀಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಎನ್.ಸಿ. ಕಠಾರೆ, ಸಾಹಿತಿ ಸತೀಶ ಕುಲಕರ್ಣಿ, ಪಪಂ ಅಧ್ಯಕ್ಷ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಜಿ.ಶಿವನಗೌಡ, ಡಾ. ಆರ್.ಎಂ. ಕುಬೇರಪ್ಪ, ಎನ್.ಎಂ. ಈಟೇರ ಮೊದಲಾದವರು ಇದ್ದರು.