ಕಿಕ್ಕೇರಿ: ಧಾರ್ಮಿಕ ವರ್ಷಾಚರಣೆಯಲ್ಲಿ ಪುಣ್ಯಕಾಲ ದಿನವಾದ ವೈಕುಂಠ ಏಕಾದಶಿಯಂದು ವಿಷ್ಣು ದೇವಾಲಯಗಳಲ್ಲಿ ವಿವಿಧ ಪೂಜಾ ಕೈಂಕರ್ಯ, ಅಭಿಷೇಕಗಳು ಜರುಗಿದವು.
ಪಟ್ಟಣದ ಸಿದ್ಧಾರೂಢಸ್ವಾಮಿ ಮಠ, ನರಸಿಂಹಸ್ವಾಮಿ ದೇಗುಲ, ವೀರಾಂಜನೇಯ ದೇಗುಲದಲ್ಲಿ ಭಕ್ತರು ಅಧಿಕವಾಗಿ ಸೇರಿದ್ದರು. ದೇಗುಲಗಳಲ್ಲಿ ನಿರ್ಮಿಸಲಾಗಿದ್ದ ವೈಕುಂಠ ಉತ್ತರದ್ವಾರ ಬಾಗಿಲು ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದು ಪುನೀತರಾದರು.
ಗೋವಿಂದ, ನಾರಾಯಣ ಎಂಬ ಜಯಘೋಷದೊಂದಿಗೆ ದೇಗುಲದಲ್ಲಿ ಶಂಖನಾದ ಮೊಳಗಿತು.ಅರ್ಚಕ ವೃಂದದವರು ದೇವರಿಗೆ ಪಂಚಾಮೃತ ಅಭಿಷೇಕ, ವಿವಿಧ ಪೂಜಾಲಂಕಾರ ಸೇವೆಗಳನ್ನು ಮಾಡಿ ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದರು. ದೇವರಿಗೆ ವಿವಿಧ ಪರಿಮಳದ ಪುಷ್ಪ, ಆಭರಣಗಳಿಂದ ಅಲಂಕರಿಸಲಾಗಿತ್ತು. ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯಲು ಭಕ್ತರು ಉತ್ಸುಕರಾಗಿದ್ದರು.
ಸಮಾಜದ ಮಹಿಳೆಯರು ಚಿತ್ತಾಕರ್ಷಕವಾದ ರಂಗೋಲಿ ಬಿಡಿಸಿ ಭಕ್ತರನ್ನು ಸ್ವಾಗತಿಸಿದರು. ವಿವಿಧ ದೇಗುಲಗಳಲ್ಲಿ ಸಿಹಿಬೂಂದಿ, ಲಡ್ಡು, ಮೊಸರನ್ನ, ರಸಾಯನ, ಪುಳಿಯೋಗರೆ, ತೀರ್ಥ, ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.
-----------
ಕಿಕ್ಕೇರಿ ಸಿದ್ಧಾರೂಢಸ್ವಾಮಿ ಮಠದಲ್ಲಿ ವೈಕುಂಠ ಏಕಾದಶಿಯ ಶುಕ್ರವಾರ ಉತ್ತರ ವೈಕುಂಠದ್ವಾರದ ಮೂಲಕ ಭಕ್ತರು ದೇವರ ದರ್ಶನ ಪಡೆದರು.