ಕನ್ನಡಪ್ರಭವಾರ್ತೆ ಚಿತ್ರದುರ್ಗಪರಿಶಿಷ್ಟರಿಗೆ ಶೀಘ್ರ ಒಳ ಮೀಸಲಾತಿ ಜಾರಿಗೊಳಿಸುವುದರ ಜತೆಗೆ ಕಾಂತರಾಜ್ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಜನಗಣತಿ) ವರದಿ ಬಿಡುಗಡೆ ಮಾಡುವಂತೆ ಅಹಿಂದ ಸಮುದಾಯಗಳ ಮುಖಂಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಇಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಡ ಕೆಂಚಪ್ಪ, ಭಾರತ ಸಂವಿಧಾನ ಜಾರಿಗೊಂಡು 75 ವರ್ಷಗಳು ಕಳೆದಿವೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಈಗಲೂ ಅಹಿಂದ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಿಲ್ಲ. ಅಹಿಂದ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿಸಿ, ಅವರಿಗೆ ಆರ್ಥಿಕ ಶಕ್ತಿ ತುಂಬಬೇಕು. ಆ ಮೂಲಕ ದೇಶದಲ್ಲಿ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ರಾಜ್ಯದಲ್ಲಿ 1990ರ ದಶಕದಿಂದ ಮಾದಿಗ ಜಾತಿಯವರು, ಸಂಘಟನೆಗಳು, ಸಮುದಾಯಗಳು ಸಂಘಟಿತರಾಗಿ ಒಳ ಮೀಸಲಾತಿಗಾಗಿ ನಡೆಸಿದ ಹಲವು ಹೋರಾಟಗಳ ಫಲವಾಗಿ 2004ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವನ್ನು ನೇಮಕ ಮಾಡಿತು. ಈ ಆಯೋಗವು ಸುಮಾರು 7 ವರ್ಷಗಳ ಅವಧಿ, ಅಧ್ಯಯನ ನಡೆಸಿ ದಿನಾಂಕ 14-7-2012ರಂದು ಅಂದಿನ ಮುಖ್ಯಮಂತ್ರಿ ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈವರೆಗೂ ವರದಿ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಶಿವಮೊಗ್ಗದ ಜಿಲ್ಲಾ ಮುಖ್ಯ ಸಂಚಾಲಕರಾದ ಸನಾವುಲ್ಲಾ ಮಾತನಾಡಿ, ಬೊಮ್ಮಾಯಿ ನೇತೃತ್ವದ ಸರ್ಕಾರ, ಸರ್ಕಾರಿ ಆದೇಶವೊಂದನ್ನು ಹೊರಡಿಸಿ, ಮಾದಿಗೆ ಜಾತಿಯವರಿಗೆ ಶೇ.6, ಹೊಲೆಯ ಜಾತಿಯವರಿಗೆ ಶೇ5.5, ಬೋವಿ ಮತ್ತು ಲಂಬಾಣಿ ಜಾತಿಯವರಿಗೆ ಶೇ.4.5, ಮತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇನ್ನುಳಿದ ಜಾತಿಗಳಿಗೆ ಶೇ. 1ರಷ್ಟರಂತೆ ಒಟ್ಟು ಶೇ.17 ಪ್ರಮಾಣದ ಮೀಸಲಾತಿಯನ್ನು ನಿಗದಿಪಡಿಸಿರುವುದಾಗಿ ಆದೇಶಿಸಲಾಗಿತ್ತು ಎಂದರು.
ಗೋಷ್ಠಿಯಲ್ಲಿ ಸತ್ಯಪ್ಪ ಮಲ್ಲಾಪುರ, ತಿಪ್ಪೇಸ್ವಾಮಿ, ಯಾದವ ಮುಖಂಡರಾದ ಆನಂದ ಕುಮಾರ್, ಕೈಸ್ತ ಸಮುದಾಯದ ಅವಿನಾಶ್, ಸುರೇಂದ್ರ, ಸುಬ್ಬಣ್ಣ ನಾಗರಾಜ, ವಿನೋದ್ ಭದ್ರಾವತಿ, ಕರಿಯಪ್ಪ, ಜಗದೀಶ್, ಶಂಕರ್ ರಾವ್, ರಾಜಪ್ಪ, ಜ್ಯೋತಿ ಲಕ್ಷ್ಮೀ, ವರಲಕ್ಷ್ಮೀ, ವಿನೋಧಮ್ಮ, ಶರೀಫವುಲ್ಲಾ ಖಾನ್, ಜಮೀರ್, ಮಲ್ಲಿಕಾರ್ಜನ್ ಇದ್ದರು.