ಚಳ್ಳಕೆರೆ: ನ್ಯಾಯವನ್ನು ನಂಬಿ ಬರುವ ಕಕ್ಷಿದಾರರಿಗೆ ಸತ್ಯ ಮತ್ತು ಪ್ರಾಮಾಣಿಕತೆಯಿಂದ ನ್ಯಾಯುತವಾಗಿ ದೊರಕಬೇಕಾದ ಪರಿಹಾರವನ್ನು ತೀರ್ಪಿನ ಮೂಲಕ ಕೊಡಿಸುವ ವಕೀಲರ ಜವಾಬ್ದಾರಿ ಮಹತ್ವದಿಂದ ಕೂಡಿದೆ. ಪ್ರತಿಯೊಬ್ಬ ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವ ಸಂದರ್ಭದಲ್ಲಿ ನ್ಯಾಯಾಲಯದ ಘನತೆ, ಕೀರ್ತಿಗೆ ಧಕ್ಕೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಮೀರ್ ಪಿ.ನಂದ್ಯಾಲ ಹೇಳಿದರು.
ಮಂಗಳವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಂದು ನ್ಯಾಯಾಲಯದ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚಾಗುತ್ತಿದೆ. ಕಾರಣ, ಎಲ್ಲಾ ನ್ಯಾಯಾಲಯಗಳು ನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಾ ಬಂದಿವೆ. ವಿಶೇಷವಾಗಿ ವಕೀಲರು ನ್ಯಾಯಾಲಯ ಮತ್ತು ಕಕ್ಷಿದಾರರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಿಗೆ ಕೇವಲ ಅಪರಾಧಕ್ಕೆ ಸಂಬಂಧಪಟ್ಟ ವ್ಯಾಜ್ಯಗಳು ಮಾತ್ರ ಬರುತ್ತಿಲ್ಲ. ಬದಲಾಗಿ ಜಮೀನಿಗೆ ಸಂಬಂಧಪಟ್ಟ ದಾಖಲಾತಿಗಳ ಬಗ್ಗೆಯೂ ಸಹ ಸುಧೀರ್ಘವಾದ ಚರ್ಚೆ ನಡೆಯುತ್ತಿದೆ. ಕಂದಾಯ ಇಲಾಖೆ ಎಲ್ಲಾ ದಾಖಲಾತಿಗಳನ್ನು ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ನೀಡಿದರೂ ಆ ಬಗ್ಗೆ ನ್ಯಾಯಾಲಯ ಮೊರೆಹೋಗುವ ಸಂಖ್ಯೆ ಹೆಚ್ಚುತ್ತಿದೆ ಎಂದ ಅವರು, ವಕೀಲರು ಕಕ್ಷಿದಾರರಿಗೆ ತಮ್ಮದೇಯಾದ ವಾದ, ಪ್ರತಿವಾದ ಮಂಡನೆ ಮೂಲಕ ನ್ಯಾಯದೊರಕಿಸಿಕೊಡುತ್ತಾರೆ. ನ್ಯಾಯಾಲಯದ ತೀರ್ಪುಗಳನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ವಕೀಲರ ಸಂಪೂರ್ಣ ಬದುಕು ವೃತ್ತಿಯ ಮೇಲೆ ಅವಲಂಬಿತವಾಗಿದೆ. ವಕೀಲ ವೃತ್ತಿಯನ್ನು ಕೇವಲ ವಕೀಲರು ಮಾತ್ರ ಗೌರವಿಸುತ್ತಿಲ್ಲ, ಬದಲಾಗಿ ಇಡೀ ಸಮಾಜವೇ ಈ ವೃತ್ತಿಯ ಬಗ್ಗೆ ವಿಶ್ವಾಸ ಹೊಂದಿದೆ ಎಂದರು.
ಜೆಎಂಎಫ್‌ಸಿ ನ್ಯಾಯಾಧೀಶರಾದ ಎಚ್.ಆರ್.ಹೇಮಾ ಮಾತನಾಡಿದರು.ಇದೇ ವೇಳೆ ಹಿರಿಯ ವಕೀಲರಾದ ಎಂ.ಎಸ್.ಜಗದೀಶ್‌ನಾಯಕ, ಗಿರೀಶ್, ಆರ್.ಟಿ.ಸ್ವಾಮಿ, ಧನಂಜಯ, ಕೆ.ವಿ.ಹನುಮಂತರಾವ್ ಮುಂತಾದವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ರೇಹಾನ್‌ಪಾಷ, ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಕಾರ್ಯದರ್ಶಿ ಎಂ.ಸಿದ್ದರಾಜು, ಡಿ.ಬಿ.ಬೋರಯ್ಯ, ಟಿ.ರುದ್ರಯ್ಯ, ದೊರೆನಾಗರಾಜು, ಸಣ್ಣಬೋರನಾಯಕ, ಬಿ.ಟಿ.ಶ್ಯಾಮಲ, ಒ.ಹನುಮಂತರಾಯ, ರಾಮಕೃಷ್ಣ, ಹಿರಿಯ ವಕೀಲರಾದ ಜಿ.ಶರಣಪಯ್ಯ, ಟಿ.ತಮ್ಮಣ್ಣ, ಕೆ.ವಿ.ಪ್ರಭಾಕರ ಮತ್ತಿತರರಿದ್ದರು.