ಹಾನಗಲ್ಲ: ಪ್ರಾಮಾಣಿಕತೆಯ ಪಾಠ ಆಡಳಿತ ನಡುವಳಿಕೆ, ನಿಷ್ಠುರತೆಯಲ್ಲಿಯೂ ಪ್ರೀತಿ ವಿಶ್ವಾಸದಿಂದ ಶಾಲೆಯ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಟ್ಟ ಬಿ.ಬಿ. ಪದಕಿ ಗುರುಗಳ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಿರುವುದು ರಾಜ್ಯದ ಇತಿಹಾಸದಲ್ಲಿ ಅನುಕರಣೀಯವಾದುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಶನಿವಾರ ಇಲ್ಲಿನ ಶಂಕರ ಮಂಗಲ ಭವನದಲ್ಲಿ ಅ.ನ. ಕುಂದಾಪೂರ ಹಾಗೂ ಬಿ.ಬಿ. ಪದಕಿ ಟ್ರಸ್ಟ್ ಆಯೋಜಿಸಿದ ಬಿ.ಬಿ. ಪದಕಿ ಗೌರವಾರ್ಥ ಗುರುವಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಧಕನ ಬದುಕು ಸಮಾಜದ ಅರಿವಿಗೆ ಬರಬೇಕು. ಅವರ ಹೆಸರು ಸದಾ ಸಮಾಜದಲ್ಲಿ ನೆನಪಿಸಿಕೊಳ್ಳುವಂತಿರಬೇಕು. ಹಾಗೇ ಬಿ.ಬಿ. ಪದಕಿ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡುವ ಮೂಲಕ ನಿತ್ಯ ನೆನಪಿಗೆ ಅವಕಾಶ ಮಾಡಿಕೊಟ್ಟಿರುವುದು ಸ್ತುತ್ಯಾರ್ಹ ಸಂಗತಿ. ಒಂದು ಕಾಲಕ್ಕೆ ಯಾವುದೇ ಭದ್ರತೆ ಇಲ್ಲದೆ ಶಿಕ್ಷಕ ಕೆಲಸ ನಿರ್ವಹಿಬೇಕಾಗಿತ್ತು. ಅಂತಹ ಕಠಿಣ ಕಾಲ ಕಳೆದು ಶಿಕ್ಷಕನಿಗೂ ಉತ್ತಮ ಭವಿಷ್ಯ ನೀಡಲು ದೊಡ್ಡ ದೊಡ್ಡ ಹೋರಾಟ ಮಾಡಲಾಯಿತು. ನಾಲ್ಕಾರು ತಿಂಗಳಿಗೊಮ್ಮೆ ವೇತನ ಪಡೆಯುವ ಸ್ಥಿತಿ ಇತ್ತು. ಅಂತಹದ್ದರಲ್ಲೂ ಶಿಕ್ಷಕರು ಬದ್ಧತೆಯಿಂದ ಸೇವೆ ಸಲ್ಲಿಸಿದ್ದರು. ಶಿಕ್ಷಣ ಉತ್ತಮ ಸಂಸ್ಕಾರದಿಂದ ನೀಡಬೇಕಾಗಿವೆ. ಈಗ ಪ್ರಶಸ್ತಿಗಳು ಗೌರವ ಕಳೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳ ಹಿತಕ್ಕಾಗಿ ದುಡಿದು ಅವರ ಮನಸ್ಸಿನಲ್ಲಿ ನೆಲೆಯೂರಿದ ಶಿಕ್ಷಕನಿಗೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಅಗತ್ಯವಿಲ್ಲ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ಇಲ್ಲಿನ ಪ್ರತಿಭಾವಂತರಿಗೆ ಉತ್ತೇಜನ ನೀಡಿದಂತಾಗುತ್ತದೆ. ಮಕ್ಕಳ ಜೀವನ ಜ್ಯೊತಿ ಬೆಳಗುವ ಶಿಕ್ಷಕರು ಸಮಾಜದಲ್ಲಿ ಗೌರವಕ್ಕೆ ಭಾಜನರಾಗುತ್ತಾರೆ. ಹಾನಗಲ್ಲ ತಾಲೂಕಿನ ಶೈಕ್ಷಣಿಕ ಹಿತಕ್ಕಾಗಿ ನಾನು ನಿತ್ಯ ನಿರಂತರ ಶ್ರಮಿಸುತ್ತಿದ್ದು 3 ವರ್ಷದಲ್ಲಿ ಸರ್ಕಾರದ ಅನುದಾನ ಹೊರತುಪಡಿಸಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ₹4 ಕೋಟಿ ವೆಚ್ಚದ ಸೌಲಭ್ಯ ಒದಗಿಸಲು ಸಾಧ್ಯವಾಗಿದೆ. ತಂತ್ರಜ್ಞಾನ ಯುಗದಲ್ಲಿರುವ ನಾವು ಜಗತ್ತಿನ ವೇಗಕ್ಕೆ ನಮ್ಮ ಮಕ್ಕಳನ್ನು ಸಿದ್ಧಗೊಳಿಸಬೇಕಾಗಿದೆ ಎಂದ ಅವರು, ತಮ್ಮ ಶಾಸಕರ ಹೆಚ್ಚುವರಿ ವೇತನದ ಮೊದಲ ತಿಂಗಳ ವೇತನ ಬಿ.ಬಿ.ಪದಕಿ ಟ್ರಸ್ಟಗೆ ನೀಡುವುದಾಗಿ ಪ್ರಕಟಿಸಿದರು.
ಆಶಯ ಮಾತುಗಳನ್ನಾಡಿದ ನಿವೃತ್ತ ಶಿಕ್ಷಕ ಕೆ.ಎಲ್.ದೇಶಪಾಂಡೆ, ಬಿ.ಬಿ.ಪದಕಿ ಸಮಯ ಪಾಲಕ, ಸಾತ್ವಿಕ ಆಲೋಚನೆಯ, ಶೈಕ್ಷಣಿಕ ಅಭಿವೃದ್ಧಿಯ ಜಾಗೃತಿ ಶಿಕ್ಷಕರು. ನಡೆ ನುಡಿ ಒಂದಾದ ಅವರ ಬದುಕು ಎಲ್ಲರಿಗೂ ಆದರ್ಶವಾದುದು. ಅವರ ಹೆಸರನ್ನು ಹಾನಗಲ್ಲಿನಲ್ಲಿ ಒಂದು ವೃತ್ತಕ್ಕೆ ನಾಮಕರಣ ಮಾಡಲು ಒಪ್ಪಿರುವುದು ಬಿ.ಬಿ. ಪದಕಿ ಗುರುಗಳು ಹಾಗೂ ಅವರ ಶಿಷ್ಯ ಬಳಗ ಗೌರವಿಸಿದಂತೆ ಎಂದರು.ನಿವೃತ್ತ ಶಿಕ್ಷಕ ಜಿ.ಆರ್. ಪೋತದಾರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಸುನೀಲ ಪದಕಿ, ನಾಗಪ್ಪ ಸವದತ್ತಿ, ಬಿ.ಎಸ್. ಅಕ್ಕಿವಳ್ಳಿ, ಸುರೇಶ ರಾಯ್ಕರ, ಎ.ಎಸ್. ಬಳ್ಳಾರಿ, ರವಿ ಪುರೋಹಿತ ಅತಿಥಿಗಳಾಗಿದ್ದರು.
ಶಾಂಭವಿ ಪಾಟೀಲ ಪ್ರಾರ್ಥನೆ ಹಾಡಿದರು. ಡಿ.ಜಿ. ಕುಲಕರ್ಣಿ ಸ್ವಾಗತಿಸಿದರು, ಗಿರೀಶ ದೇಶಪಾಂಡೆ ನಿರೂಪಿಸಿದರು. ಆರ್.ಸಿ.ದೇಸಾಯಿ ವಂದಿಸಿದರು.ಸನ್ಮಾನ:
ಇದೇ ಸಂದರ್ಭದಲ್ಲಿ ಬಿ.ಬಿ. ಪದಕಿ ಅವರೊಂದಿಗೆ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಟ್ರಸ್ಟ ವತಿಯಿಂದ ಸನ್ಮಾನಿಸಲಾಯಿತು.