ವಿರಾಸತ್‌ ಜ್ಯೋತಿ ಅಖಂಡವಾಗಿ ಬೆಳಗಲಿ: ಡಾ.ಹೆಗ್ಗಡೆ

KannadaprabhaNewsNetwork |  
Published : Dec 11, 2024, 12:47 AM IST
11 | Kannada Prabha

ಸಾರಾಂಶ

ಆಳ್ವಾಸ್‌ ವಿರಾಸತ್ ಹೃದಯ ಮತ್ತು ಮನಸ್ಸುಗಳನ್ನು ಬೆಸೆಯುವ ಅಪೂರ್ವ ಕಾರ್ಯಕ್ರಮ. ಸಾಂಸ್ಕೃತಿಕತೆ ಮತ್ತು ಸಾಹಿತ್ಯ ಎರಡೂ ಸಾಮಾನ್ಯವಾಗಿ ಒಟ್ಟಿಗೇ ನಡೆಯುವುದಿಲ್ಲ. ಆದರೆ ಇದು ಆಳ್ವಾಸ್‌ ವಿರಾಸತ್‌ನಲ್ಲಿ ಮೂರ್ತರೂಪ ಪಡೆದಿದೆ. ಇಂತಹ ಹೃದಯ ಬೆಸೆಯುವ ಕಾರ್ಯ ಸದಾ ಮುಂದುವರಿಯಬೇಕು ಎಂದರು.

ಕನ್ನಡಪ್ರಭ ವಾರ್ತೆ, ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರ, ಪುತ್ತಿಗೆ, ಮೂಡುಬಿದಿರೆ:

ವಿರಾಸತ್ ಎಂದರೆ ವಿಶ್ವವನ್ನೇ ಹೃದಯದಲ್ಲಿ ತುಂಬಿಕೊಂಡಂತೆ. ಇದೇ ನಿಜವಾದ ಉತ್ಸವ. ಮೂಡುಬಿದಿರೆಯಲ್ಲಿ ಡಾ.ಎಂ. ಮೋಹನ ಆಳ್ವರಿಂದ ಸಾಕಾರಗೊಂಡಿರುವ ವಿರಾಸತ್ ಜ್ಯೋತಿ ಅಖಂಡವಾಗಿ ಬೆಳಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಶಿಸಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಡಿ.15ರವರೆಗೆ ನಡೆಯಲಿರುವ 30ನೇ ವರ್ಷದ ‘ಆಳ್ವಾಸ್‌ ವಿರಾಸತ್’- ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಆಳ್ವಾಸ್‌ ವಿರಾಸತ್ ಹೃದಯ ಮತ್ತು ಮನಸ್ಸುಗಳನ್ನು ಬೆಸೆಯುವ ಅಪೂರ್ವ ಕಾರ್ಯಕ್ರಮ. ಸಾಂಸ್ಕೃತಿಕತೆ ಮತ್ತು ಸಾಹಿತ್ಯ ಎರಡೂ ಸಾಮಾನ್ಯವಾಗಿ ಒಟ್ಟಿಗೇ ನಡೆಯುವುದಿಲ್ಲ. ಆದರೆ ಇದು ಆಳ್ವಾಸ್‌ ವಿರಾಸತ್‌ನಲ್ಲಿ ಮೂರ್ತರೂಪ ಪಡೆದಿದೆ. ಇಂತಹ ಹೃದಯ ಬೆಸೆಯುವ ಕಾರ್ಯ ಸದಾ ಮುಂದುವರಿಯಬೇಕು ಎಂದರು.

ನಮ್ಮ ಮನಸ್ಸು ಸದಾ ಅರಳಿರಲು, ಪ್ರಫುಲ್ಲವಾಗಿರಬೇಕಾದರೆ ನಮ್ಮ ಸಾಂಸ್ಕೃತಿಕ ಮನಸ್ಸು ಅರಳಿರಬೇಕು. ಅದಕ್ಕಾಗಿ ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕ ಸಂಪತ್ತು ಇನ್ನಷ್ಟು ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟ ಡಾ.ಹೆಗ್ಗಡೆ, ನಮ್ಮ ಸಂಸ್ಕೃತಿಯನ್ನು ಎಲ್ಲರೂ ಗೌರವಿಸಬೇಕು. ಈ ಧಾರೆಯು ಹೃದಯ ವೈಶಾಲ್ಯತೆಯುಳ್ಳ ಯುವಶಕ್ತಿಯನ್ನು ರೂಪುಗೊಳಿಸಬೇಕು. ಒಳ್ಳೆಯದೆಲ್ಲವನ್ನೂ ಒಪ್ಪಿ, ಅಪ್ಪಿಕೊಳ್ಳುವ ಮನಸ್ಥಿತಿ ಬರಬೇಕು. ಅದಕ್ಕಾಗಿ ಆಳ್ವಾಸ್‌ ವಿರಾಸತ್‌ಗೆ ಇನ್ನಷ್ಟು ಜನರು ಬರಬೇಕು, ಡಾ.ಆಳ್ವ ಅವರ ಆಶಯವೂ ಇದೇ ಆಗಿದೆ ಎಂದು ಹೇಳಿದರು.

ಎಲ್ಲರೂ ಕೃಷಿಕರಾಗಬೇಕು:

ನಮ್ಮ ಮನೆ ಆವರಣದಲ್ಲಿ ಗಿಡಗಳು, ಹೂದೋಟ ಅರಳುವುದರೊಂದಿಗೆ ನಮ್ಮ ಮನಸ್ಸು, ಹೃದಯವೂ ಅರಳಬೇಕು. ಎಲ್ಲರೂ ಕೃಷಿಕರಾಗಬೇಕು. ಕೃಷಿಕರಾಗಬೇಕಾದರೆ ಭೂಮಿಯನ್ನು, ಪ್ರಕೃತಿಯನ್ನು ಪ್ರೀತಿಸುವುದನ್ನು ಮೊದಲು ಕಲಿಯಬೇಕು. ಆಗ ಮಾತ್ರ ಜೀವನ ಪರಿಪೂರ್ಣವಾಗುತ್ತದೆ ಎಂದು ಸಲಹೆ ನೀಡಿದರು.

ಸಂಸ್ಕೃತಿಯನ್ನು ಮೂಲರೂಪದಲ್ಲಿ ರಕ್ಷಣೆ ಮಾಡಿ ಬೆಳೆಸಬೇಕಾದರೆ ಸಾಕಷ್ಟು ಶ್ರಮದ ಅಗತ್ಯವಿದೆ. ಅದಕ್ಕೆ ಡಾ.ಆಳ್ವರು ಎಂದೂ ತಯಾರಾಗಿದ್ದಾರೆ. ಅವರಂಥ ಹೃದಯ ವೈಶಾಲ್ಯತೆ ಇರೋರು ಅತಿ ಕಡಿಮೆ. ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ತೋರಿಸಿಕೊಡುವ ವಿರಾಸತ್‌ನ ಕಲ್ಪನೆಯನ್ನು ಸೃಷ್ಟಿಸಿ, ಅದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸುತ್ತಿದ್ದಾರೆ. ಡಾ.ಆಳ್ವರಂಥವರು ಸಮಾಜದಲ್ಲಿ ಇನ್ನಷ್ಟು ಹೆಚ್ಚಬೇಕು, ವಿರಾಸತ್‌ನಂಥ ಕಾರ್ಯಕ್ರಮ ಅವಿಚ್ಛಿನ್ನವಾಗಿ ಮುಂದುವರಿಯಬೇಕು ಎಂದು ಡಾ.ವೀರೇಂದ್ರ ಹೆಗ್ಗಡೆ ಆಶಯ ವ್ಯಕ್ತಪಡಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧಿಯಾ, ಹೇರಂಭಾ ಇಂಡಸ್ಟ್ರೀಸ್ ಮುಂಬೈನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಶಶಿ ಕೇಟರಿಂಗ್ ಸರ್ವಿಸಸ್ ಬರೋಡದ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ, ಧನಲಕ್ಷ್ಮಿ ಕ್ಯಾಶ್ಯೂಸ್‌ನ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ ಎಂ., ಭಾರತ್ ಇನ್‌ಫ್ರಾಟೆಕ್‌ನ ಮುಸ್ತಫಾ ಎಸ್.ಎಂ., ಬಿಮಲ್ ಕನ್‌ಸ್ಟ್ರಕ್ಷನ್ಸ್‌ನ ಪ್ರವೀಣ್ ಕುಮಾರ್ , ಪ್ರಮುಖರಾದ ಸುಂದರ ನಾಯ್ಕ್, ಎಂ.ಬಿ. ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಬಿರಾಮ ಉಡುಪ , ರಾಮದಾಸ್, ತಿಮ್ಮಯ್ಯ ಶೆಟ್ಟಿ, ಕೇಶವ್, ರವಿನಾಥ ಆಳ್ವ ಸೇರಿದಂತೆ ಅನೇಕ ಗಣ್ಯರು ಇದ್ದರು.ಆಳ್ವಾಸ್‌ ವಿದ್ಯಾಸಂಸ್ಥೆ ಕರಾವಳಿಗೆ ವಜ್ರ ಕಿರೀಟ: ಪ್ರಕಾಶ್‌ ಶೆಟ್ಟಿ

ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ 30 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 3 ಸಾವಿರದಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಒದಗಿಸುತ್ತಿದ್ದಾರೆ. ಇಷ್ಟು ದೊಡ್ಡ ವಿದ್ಯಾ ಸಾಮ್ರಾಜ್ಯ ಕಟ್ಟಿರುವುದು ಡಾ.ಮೋಹನ್‌ ಆಳ್ವ ಅವರ ಸಾಧನೆ. ಆಳ್ವಾಸ್‌ ವಿದ್ಯಾಸಂಸ್ಥೆ ಕರಾವಳಿಗೆ ವಜ್ರ ಕಿರೀಟ ಎಂದು ವಿರಾಸತ್‌ನ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ, ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಕೆ. ಪ್ರಕಾಶ್‌ ಶೆಟ್ಟಿ ಶ್ಲಾಘಿಸಿದರು.

ಆಳ್ವರಿಂದಾಗಿ ಜೈನ ಕಾಶಿಯೆನಿಸಿದ್ದ ಮೂಡುಬಿದಿರೆ ಇಂದು ವಿದ್ಯಾಕಾಶಿಯಾಗಿ, ದೇಶದ ಸಾಂಸ್ಕೃತಿಕತೆ ಬಿಂಬಿಸುವ ಕ್ಷೇತ್ರವಾಗಿ ಬೆಳೆದಿದೆ. ಮೇಲಾಗಿ 30 ವರ್ಷಗಳಿಂದ ವಿರಾಸತ್‌ ಕಾರ್ಯಕ್ರಮ ನಡೆಸುತ್ತಿರುವುದು ಮತ್ತೊಂದು ಹಿರಿಮೆ. ಈ ನೆಲದಲ್ಲಿ ವಿರಾಸತ್‌ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ದೆಸೆಯಿಂದಲೂ ಡಾ.ಮೋಹನ್ ಆಳ್ವರು ಸದಾ ಹಸನ್ಮುಖಿ, ಸ್ವತಃ ಕಲಾವಿದರಾಗಿ, ಕಲೆ- ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಅವರ ಎಲ್ಲ ಚಿಂತನೆ, ದೂರದೃಷ್ಟಿಯನ್ನು ಮೂಡುಬಿದಿರೆಯಲ್ಲಿ ಸಾಕಾರಗೊಳಿಸಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!