ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಜಿಲ್ಲಾ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಲೇಖಕಿಯರ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ವಿಕೃತಿಯಿಂದ ಜನಸಾಮಾನ್ಯರನ್ನು ಅದರಲ್ಲೂ ಯುವ ಸಮುದಾಯವನ್ನು ವಿಮುಖಗೊಳಿಸಬೇಕಿದೆ. ನೈತಿಕ ಪ್ರಜ್ಞೆಯುಳ್ಳ ಸಂಸ್ಕೃತಿ-ಸಂಸ್ಕಾರಗಳತ್ತ ಅವರನ್ನು ಹೊರಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಮಗಿರುವ ಜವಾಬ್ದಾರಿ ಎಂದರೆ ಹೊಸ ಭರವಸೆ ಹೊತ್ತ ಹೊಸ ಜನಾಂಗದ ನಿರೀಕ್ಷೆಯಂತೆ ಹೊಸ ಸಾಹಿತ್ಯ ರಚನೆ ಮತ್ತು ಹಳೇ ಸಾಹಿತ್ಯದ ಓದು ಹೆಚ್ಚಿಸಬೇಕಿರುವುದು ಅವಶ್ಯವಾಗಿದೆ ಎಂದರು.
ಪ್ರಾದೇಶಿಕ ಸಾಹಿತ್ಯ ಸೃಷ್ಟಿ ಚುರುಕು ಪಡೆದುಕೊಂಡಿದೆ. ಆದಿವಾಸಿ, ಬುಡಕಟ್ಟು, ತೃತೀಯ ಲಿಂಗಿ, ಅನ್ಯಲಿಂಗಿಗಳಂತಹ ನಿರ್ಲಕ್ಷಿತ ಸಮುದಾಯದ ಅನುಭವಗಳಿಗೆ ಸಾಹಿತ್ಯದಲ್ಲಿ ಸ್ಥಾನ ಸಿಗುತ್ತಿದೆ. ಮಹಿಳಾಪರ ಸಾಹಿತ್ಯ ಎನ್ನುವುದೀಗ ಮಾನವಪರ ಸಾಹಿತ್ಯವಾಗಿ ಬದಲಾಗಿದೆ. ಇಷ್ಟು ಕಾಲದ ಲೇಖಕಿಯರ ಸ್ತ್ರೀಪರ ಕೂಗಿಗೆ ಪುರುಷ ಸಮುದಾಯ ಓಗೊಟ್ಟಂತಿದೆ. ಹೆಣ್ಣಿನ ಮನಃಸ್ಥಿತಿ ಈಗಿನ ಸಮಾಜಕ್ಕೆ ಹೆಚ್ಚು ಸ್ಪಷ್ಟವಾಗಿರುವಂತಿದೆ ಎಂದರು.ಅನುವಾದ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ನಾರೀ ಶಕ್ತಿ ಹೆಚ್ಚಾಗಿ ತೊಡಗಿಕೊಂಡು ವಿಶ್ವ ವ್ಯಾಪಕತೆಯಿರುವ ಪಟಲಕ್ಕೆ ತೆರೆದುಕೊಂಡಿದೆ. ಕನ್ನಡದ ಕೃತಿಗಳಿಗೆ ಜಾಗತಿಕ ಮನ್ನಣೆ ಲಭ್ಯವಾಗುತ್ತಿದೆ. ಕನ್ನಡದ ವಿಚಾರಧಾರೆ ಜಗತ್ತಿನ ಇತರೆ ಭಾಷೆಗಳಿಗೆ ರವಾನೆಯಾಗುತ್ತಿದೆ. ತಾಂತ್ರಿಕ ಮತ್ತು ವಿಜ್ಞಾನ ವಿಚಾರಗಳಂತಹ ಸೃಜನೇತರ ಸಾಹಿತ್ಯ ರಚನೆ ಹೆಚ್ಚಾಗುತ್ತಿದೆ. ಇದೆಲ್ಲವೂ ಪ್ರಸಕ್ತ ಕಾಲಮಾನದ ದೊಡ್ಡ ಬೆಳವಣಿಗೆ ಎನ್ನಬಹುದು ಎಂದರು.
ಜಿಲ್ಲೆಯಲ್ಲಿ ನಡೆದ ಪ್ರಥಮ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಟಿ.ಸಿ.ಪೂರ್ಣಿಮಾ ಅವರನ್ನು ಭವ್ಯ ಮೆರವಣಿಗೆಯೊಂದಿಗೆ ಅಂಬೇಡ್ಕರ್ ಭವನಕ್ಕೆ ಕರೆತರಲಾಯಿತು. ನಿವೃತ್ತ ಐಎಎಸ್ ಅಧಿಕಾರಿ ಡಾ.ಟಿ.ಸಿ.ಪೂರ್ಣಿಮಾ ಅವರನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರು. ರೈತ ಸಭಾಂಗಣದಿಂದ ಆರಂಭವಾದ ಮೆರವಣಿಗೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಮನುಜಶ್ರೀ ಹಾಗೂ ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ಚಾಲನೆ ನೀಡಿದರು. ಪೂರ್ಣಕುಂಭ, ಮಂಗಳವಾದ್ಯ, ಜಾನಪದ ಕಲಾತಂಡಗಳು ಹಾಗೂ ನೂರಾರು ಲೇಖಕಿಯರ ಭಾವಚಿತ್ರಗಳನ್ನು ಹಿಡಿದ ಯುವತಿಯರು ಹಾಗೂ ಮಹಿಳೆಯರು ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಕರೆತರಲಾಯಿತು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಿತು.
ಮಂಡ್ಯದ ಜನರಲ್ಲಿ ಧಾರಾಳತನ ತುಂಬಾ ಜಾಸ್ತಿ. ಅದು ತನ್ನ ಕ್ಷೇತ್ರದ ಗಡಿಯನ್ನು ದಾಟಿ ವಿಸ್ತರಿಸಿಕೊಳ್ಳುವ ಎಲ್ಲಾ ನೆಲೆಗಳನ್ನು ಒಳಗೊಂಡಿದೆ. ಪ್ರೀತಿಯಲ್ಲಿರಲಿ, ಊಟದಲ್ಲಿರಲಿ, ಸ್ನೇಹ ಎಲ್ಲದರಲ್ಲೂ ಈ ಧಾರಾಳತನ ಕಂಡುಬರುತ್ತದೆ. ಇದರ ಜೊತೆ ಸಿಟ್ಟಿಗೂ ಧಾರಾಳತೆ ಇದೆ ಎಂದು ಧೀಮಂತೆ’ಸಮ್ಮೇಳನ ಸ್ಮರಣ ಸಂಚಿಕೆ ಸಂಪಾದಕಿ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಬಣ್ಣಿಸಿದರು.
ಮಂಡ್ಯ ಜಿಲ್ಲೆಯ ಇದುವರೆಗಿನ ಸಮ್ಮೇಳನ ಸ್ಮರಣ ಸಂಚಿಕೆಗಳನ್ನು ನೋಡಿ ಗಮನಿಸಿದಾಗ ಎಲ್ಲಾ ಕ್ಷೇತ್ರಗಳ ಲೇಖನಗಳಿವೆ. ಹಾಗಾಗಿ ದಾಖಲೀಕರಣದಲ್ಲಿ ಮಂಡ್ಯ ಜನ ತುಂಬಾ ಮುಂದೆ ಇದ್ದಾರೆ. ಪ್ರಕಟಗೊಂಡಿರುವ ಈ ಸಂಚಿಕೆಯ ೩೬೬ ಪುಟಗಳ ಆರು ವಿಭಾಗಗಳಲ್ಲಿ ಮಹಿಳಾ ಅಭಿವ್ಯಕ್ತಿ:ಕಾದಂಬರಿ, ಕಾವ್ಯ, ಜಾನಪದ ರಂಗಭೂಮಿ ವಿಷಯಗಳಲ್ಲದೆ, ಕ್ರೀಡೆ,ನಾಗರಿಕ ಸೇವೆ, ರಾಜಕೀಯ, ಕೃಷಿ ಮುಂತಾದ ಭಿನ್ನ ಸ್ತರಗಳಲ್ಲಿ ಹಾಗೂ ಅಕಾಡೆಮಿಗಳ ಪ್ರಶಸ್ತಿ ಪಡೆದವರ ಪಟ್ಟಿ ಒಳಗೊಂಡಿದೆ ಎಂದು ವಿವರಿಸಿದರು.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮೋಸ, ವಂಚನೆ, ಕೊಲೆ ಪ್ರಕರಣಗಳನ್ನು ಗಮನಿಸಿದಾಗ ಇಂದಿನ ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆ. ಮಾಧ್ಯಮಗಳು ನಮ್ಮ ಬೆನ್ನ ಹಿಂದೆ ನಿಂತು ಬೇಟೆಯಾಡುತ್ತಿರುವುದನ್ನು ಗಮನಿಸಿ ಮುನ್ನಡೆಯಬೇಕಿದೆ. ಸಾಮಾಜಿಕ ಮಾಧ್ಯಮದ ಲೆಕ್ಕಾಚಾರದಲ್ಲಿ ಜೀವನ ನಡೆಯುತ್ತಿದ್ದು, ಪ್ರಚಾರ-ಅಪಪ್ರಚಾರ ಸಿಗುತ್ತಿದೆ. ತಪ್ಪಿಹೋದ ಕಾನೂನಿನ ನಿಯಂತ್ರಣ ಇವುಗಳಿಂದ ಏನು ಬೇಕಾದರೂ ಮಾಡಿ ಜಯಿಸಬಲ್ಲೆ ಎಂಬ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷೆ ಎಚ್.ಎಲ್.ಪುಷ್ಪ ಹೇಳಿದರು.