ಶಾಸಕರೇ ಬಂದು ಸ್ಥಳ ಪರಿಶೀಲನೆ ನಡೆಸಲಿ: ಮುದ್ದನಘಟ್ಟ ಗ್ರಾಮಸ್ಥರು

KannadaprabhaNewsNetwork |  
Published : Nov 08, 2026, 01:30 AM IST
೭ಕೆಎಂಎನ್‌ಡಿ-೧ಮಂಡ್ಯ ತಾಲೂಕು ಬಸರಾಳು ಸಮೀಪದ ಮುದ್ದನಘಟ್ಟ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಖಾಲಿ ಜಾಗ ಇಲ್ಲವೆಂಬುದನ್ನು ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. | Kannada Prabha

ಸಾರಾಂಶ

ಶಾಸಕರು ಹೇಳಿರುವಂತೆ ೧೦೭ ಎಕರೆ ಖಾಲಿ ಜಾಗ ಎಲ್ಲಿಯೂ ಇಲ್ಲ. ಎಲ್ಲರೂ ಉಳುಮೆ ಮಾಡುತ್ತಿದ್ದಾರೆ. ಬೆಳೆ ಬೆಳೆದಿದ್ದಾರೆ. ತೆಂಗಿನ ತೋಟ, ಮರಗಳು ಬೆಳೆದಿವೆ. ಮನೆಗಳು ನಿರ್ಮಾಣಗೊಂಡಿವೆ. ಕಣ್ಣಾರೆ ಇವೆಲ್ಲವನ್ನೂ ನೋಡದೆ ಸುಮ್ಮನೆ ಖಾಲಿ ಜಾಗ ಎಂದು ಹೇಳಿದರೆ ಹೇಗೆ? ನಮ್ಮ ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಬದುಕಿನ ಆಧಾರ ಮಾಡಿಕೊಂಡಿದ್ದೇವೆ. ಈಗ ಭೂಮಿಯನ್ನು ಕಿತ್ತುಕೊಂಡರೆ ವಿಷ ಕುಡಿಯುವುದೊಂದೇ ಬಾಕಿ ಎಂದು ನೊಂದು ನುಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ತಾಲೂಕು ಬಸರಾಳು ಸಮೀಪದ ಮುದ್ದನಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ಖಾಲಿ ಜಾಗ ಯಾವುದೂ ಇಲ್ಲ. ಶಾಸಕರು, ಜಿಲ್ಲಾಡಳಿತ ಸುಮ್ಮನೆ ದಾರಿತಪ್ಪಿಸುತ್ತಿದ್ದಾರೆ. ಶಾಸಕರೇ ಬಂದು ಸ್ಥಳ ಪರಿಶೀಲನೆ ನಡೆಸಲಿ. ಖಾಲಿ ಜಾಗ ಎಲ್ಲಿದೆ ಬಂದು ತೋರಿಸಲಿ ಎಂದು ಮುದ್ದನಘಟ್ಟ ಗ್ರಾಮಸ್ಥರಾದ ದೇವರಾಜೇಗೌಡ, ಚಿಕ್ಕೇಗೌಡ, ರಮೇಶ್, ವಸಂತ್, ರಾಜು, ವೆಂಕಟೇಶ್, ಕುಮಾರ್ ಮತ್ತಿತರರು ಸವಾಲು ಹಾಕಿದರು.

ನಮ್ಮನ್ನು ಯಾರೂ ಪ್ರಚೋದಿಸುತ್ತಿಲ್ಲ. ಇನ್ನೊಬ್ಬರ ಮಾತನ್ನು ಕೇಳಿ ಬದುಕನ್ನು ಕಳೆದುಕೊಳ್ಳುವವರೂ ಅಲ್ಲ. ಇಲ್ಲಿರುವ ಭೂಮಿಯನ್ನು ನಾವು ನಂಬಿ ಬದುಕು ನಡೆಸುತ್ತಿದ್ದೇವೆ. ಕೈಗಾರಿಕೆ ಉದ್ದೇಶಕ್ಕೆ ಭೂಮಿ ಕಿತ್ತುಕೊಂಡರೆ ನಾವು ಎಲ್ಲಿಗೆ ಹೋಗೋಣ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ವ್ಯಕ್ತಪಡಿಸಿದರು.

ಯಾರೂ ರೈತರ ಅಭಿಪ್ರಾಯ ಸಂಗ್ರಹಿಸಿಲ್ಲ:

ಯಾರೊಬ್ಬರೂ ಸ್ಥಳಕ್ಕೆ ಬಂದು ಪರಿಶೀಲನೆಯನ್ನೇ ನಡೆಸುತ್ತಿಲ್ಲ. ಶಾಸಕರು ಕುಳಿತಲ್ಲೇ ಸ್ಯಾಟಲೈಟ್ ಪಿಕ್ಚರ್ ತೋರಿಸಿ ಖಾಲಿ ಜಾಗ ಎನ್ನುತ್ತಾರೆ. ಜಿಲ್ಲಾಡಳಿತ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಸರ್ವೇ ನಂ.ಗಳನ್ನು ಕಂಪ್ಯೂಟರ್‌ನಲ್ಲಿ ಗೋಮಾಳ ಎಂದು ತೋರಿಸಿ ಸರ್ಕಾರಕ್ಕೆ ವರದಿ ಮಾಡುತ್ತಿದೆ. ಜೆಡಿಎಸ್‌ನವರೂ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿಲ್ಲ. ರೈತರ ಅಭಿಪ್ರಾಯವನ್ನೂ ಸಂಗ್ರಹಿಸುತ್ತಿಲ್ಲ. ಮಂಡ್ಯದಿಂದ ೩೦ ಕಿ.ಮೀ. ದೂರದಲ್ಲಿರುವ ಜಾಗಕ್ಕೆ ಬಂದು ನೋಡಿದರಲ್ಲವೇ ಸತ್ಯದ ಅರಿವಾಗುತ್ತದೆ ಎಂದು ಖಡಕ್ಕಾಗಿ ಹೇಳಿದರು.

ಶಾಸಕರು ಹೇಳಿರುವಂತೆ ೧೦೭ ಎಕರೆ ಖಾಲಿ ಜಾಗ ಎಲ್ಲಿಯೂ ಇಲ್ಲ. ಎಲ್ಲರೂ ಉಳುಮೆ ಮಾಡುತ್ತಿದ್ದಾರೆ. ಬೆಳೆ ಬೆಳೆದಿದ್ದಾರೆ. ತೆಂಗಿನ ತೋಟ, ಮರಗಳು ಬೆಳೆದಿವೆ. ಮನೆಗಳು ನಿರ್ಮಾಣಗೊಂಡಿವೆ. ಕಣ್ಣಾರೆ ಇವೆಲ್ಲವನ್ನೂ ನೋಡದೆ ಸುಮ್ಮನೆ ಖಾಲಿ ಜಾಗ ಎಂದು ಹೇಳಿದರೆ ಹೇಗೆ? ನಮ್ಮ ತಾತನ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಬದುಕಿನ ಆಧಾರ ಮಾಡಿಕೊಂಡಿದ್ದೇವೆ. ಈಗ ಭೂಮಿಯನ್ನು ಕಿತ್ತುಕೊಂಡರೆ ವಿಷ ಕುಡಿಯುವುದೊಂದೇ ಬಾಕಿ ಎಂದು ನೊಂದು ನುಡಿದರು.

ಗ್ರಾಮಸ್ಥರ ಆಗ್ರಹಗಳೇನು?:

ಶಾಸಕ ಪಿ.ರವಿಕುಮಾರ್ ಅವರು ಕಂದಾಯ ಮತ್ತು ಸರ್ವೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ರೈತರ ಸಮ್ಮುಖದಲ್ಲಿ ಪರಿಶೀಲನೆ ನಡೆಸಬೇಕು. ಮಂಜೂರಾತಿ ದಾಖಲೆಗಳು, ಮಂಜೂರಾತಿಗೆ ಸಲ್ಲಿಸಿರುವ ಅರ್ಜಿಗಳು, ಸಾಗುವಳಿ, ಬೆಳೆಗಳು ಮತ್ತು ಬೋರ್‌ವೆಲ್‌ಗಳ ವಿವರಗಳನ್ನು ಪರಿಶೀಲಿಸಿ ವಾಸ್ತವ ವರದಿ ಸಿದ್ಧಪಡಿಸಲಿ. ಬಾಧಿತ ರೈತರ ಸಭೆ ನಡೆಸಿ ಪ್ರತಿಯೊಬ್ಬರ ಅಹವಾಲನ್ನು ದಾಖಲಿಸಬೇಕು. ರೈತರ ದಾಖಲೆಗಳು ಮತ್ತು ಬೇಡಿಕೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಭೂಮಿ ಹಸ್ತಾಂತರ ಹಾಗೂ ತೆರವು ಕ್ರಮಗಳನ್ನು ಮುಂದುವರಿಸಬಾರದು. ಮಂಜೂರಾತಿದಾರರನ್ನು ಕೃಷಿಕರು ಹಾಗೂ ಬಾಧಿತ ಕುಟುಂಬಗಳಿಗೆ ಸೂಕ್ತ ಪರಿಹಾರ, ಜೀವನ ಭದ್ರತೆ ಮತ್ತು ಉದ್ಯೋಗ ಕುರಿತು ಸ್ಪಷ್ಟ ಭರವಸೆ ನೀಡಿ ರೈತರ ಒಪ್ಪಿಗೆ ಪಡೆದು ಮುಂದುವರಿಯುವಂತೆ ಆಗ್ರಹಪಡಿಸಿದರು.

ನಮಗೂ ವಿವೇಚನೆ ಇದೆ:

ಅಭಿವೃದ್ಧಿಯನ್ನು ನಾವು ಸ್ವಾಗತಿಸುತ್ತೇವೆ. ಆ ಅಭಿವೃದ್ಧಿಯಲ್ಲಿ ರೈತರ ಬದುಕಿಗೂ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಒತ್ತಾಯ. ನಮ್ಮ ಬದುಕಿನ ಬಗ್ಗೆ ಮಾತನಾಡಲು ನಮಗೆ ಯಾರ ಪ್ರಚೋದನೆಯೂ ಬೇಕಿಲ್ಲ. ನಮ್ಮ ಜಮೀನು, ಬೆಳೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನಿರ್ಧರಿಸುವ ಅರಿವು ನಮಗಿದೆ. ಯಾರೋ ಎತ್ತಿಕಟ್ಟಿದರೆ ಮಾತನಾಡುವಷ್ಟು ವಿವೇಚನೆಯಿಲ್ಲದವರಲ್ಲ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ಗಮನಕ್ಕೆ ನಮ್ಮ ಸಂಕಷ್ಟವನ್ನು ತರುವುದು ನಮ್ಮ ಹಕ್ಕು. ಅದಕ್ಕೆ ರಾಜಕಾರಣದ ಬಣ್ಣ ಲೇಪನ ಮಾಡುವುದು, ರೈತರ ಅಹವಾಲನ್ನು ಕಡೆಗಣಿಸುವುದು ಸರಿಯಲ್ಲ ಎಂದು ನೇರವಾಗಿ ಹೇಳಿದರು.

ಮಹಾಲಿಂಗೇಗೌಡರು ಕಾರ್ಖಾನೆ ಮತ್ತು ಅಭಿವೃದ್ಧಿ ಯೋಜನೆ ಬಂದರೆ ಸ್ವಾಗತಿಸುವುದಾಗಿ ಈಗಾಗಲೇ ಹೇಳಿದ್ದಾರೆ. ರೈತರಿಗೆ ನ್ಯಾಯ ದೊರಕಿದರೆ ತಮ್ಮ ಕುಟುಂಬದವರು ಕೃಷಿ ಮಾಡುತ್ತಿರುವ ಜಮೀನನ್ನು ಯೋಜನೆಗೆ ಬಿಟ್ಟುಕೊಡಲು ಸಿದ್ಧವೆಂದೂ ಸ್ಪಷ್ಟಪಡಿಸಿದ್ದಾರೆ. ಅವರನ್ನೇ ಅಭಿವೃದ್ಧಿಗೆ ಅಡ್ಡಿಪಡಿಸುವವರೆಂದು ಬಿಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರೈತರ ಅಹವಾಲನ್ನು ಕೇಳಿ ಪರಿಹಾರ ಕಂಡುಕೊಳ್ಳಬೇಕಾದ ಶಾಸಕರು ನಮ್ಮ ಸಮಸ್ಯೆಯನ್ನು ರಾಜಕೀಯ ಪ್ರೇರಿತವೆಂದು ತಳ್ಳಿಹಾಕುತ್ತಿರುವುದು ಉದ್ಧಟತನದ ಧೋರಣೆ. ಜನಪ್ರತಿನಿಧಿಗಳಾಗಿ ನಮ್ಮ ನೋವನ್ನು ಆಲಿಸಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಮಾತನಾಡಬೇಕು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ