ಹೊಸಪೇಟೆ: ಅಲೆಮಾರಿ ಸಮುದಾಯಗಳ ಸಮಸ್ಯೆಗೆ ಸ್ಪಂದಿಸಿರುವ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಜನರು ಮತ ಚಲಾಯಿಸಬೇಕು ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯ ಉಪಾಧ್ಯಕ್ಷ ಸಣ್ಣಮಾರೆಪ್ಪ ಹೇಳಿದರು.ನಗರದ ಜಂಬುನಾಥಹಳ್ಳಿ ಆಶ್ರಯ ಕಾಲೋನಿಯಲ್ಲಿ ಭಾನುವಾರ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪರ ಪ್ರಚಾರ ನಡೆಸಿದ ಅವರು, ಸಮಾಜದಲ್ಲಿ ಭಾಷೆ, ಬಟ್ಟೆ, ಊಟೋಪಚಾರದ ವಿಷಯದಲ್ಲೂ ಬಿಜೆಪಿ ಕೋಮುಭಾವನೆ ಬಿತ್ತುತ್ತಿದೆ. ಸಮಾಜದಲ್ಲಿ ಭಾವೈಕ್ಯತೆ ಮಾಯವಾಗುತ್ತಿದೆ. ನಾವು ಬಹುತ್ವದ ಭಾರತದ ನಿರ್ಮಾಣಕ್ಕಾಗಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಕಾಂಗ್ರೆಸ್ ಬಂದರೆ ಬಡವರ ಬದುಕು ಹಸನಾಗಲಿದೆ. ಈಗಾಗಲೇ ಐದು ಗ್ಯಾರಂಟಿಗಳು ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಆಸರೆಯಾಗಿವೆ ಎಂದರು.
ಶಕ್ತಿ ಯೋಜನೆಯಿಂದ ಮಹಿಳೆಯರು ಹಣ ನೀಡದೇ ಬಸ್‌ಗಳಲ್ಲಿ ತಿರುಗಾಡಲು ಅನುಕೂಲವಾಗಿದೆ. ಗೃಹ ಲಕ್ಷ್ಮಿ ಯೋಜನೆ ಅಲೆಮಾರಿ ಸಮುದಾಯದ ಮಹಿಳೆಯರಿಗೆ ವರದಾನವಾಗಿದೆ. ಹಾಗಾಗಿ ಈ ಅಲೆಮಾರಿ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ನಾವು ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಬಡ ಸಮುದಾಯಗಳ ಪರ ಸಿದ್ದರಾಮಯ್ಯ ನಿಂತಿದ್ದಾರೆ. ಹಾಗಾಗಿ ನಾವು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ, ತುಕಾರಾಂ ಅವರನ್ನು ಬೆಂಬಲಿಸೋಣ ಎಂದರು.ಜಂಬುನಾಥಹಳ್ಳಿ ಆಶ್ರಯ ಕಾಲೋನಿಯ ಸುಡುಗಾಡು ಸಿದ್ದರು ಮತ್ತು ಸಿಂಧೋಳ್, ಶಿಳ್ಳೆಕ್ಯಾತ. ಚನ್ನದಾಸರು. ಕೊರಮ, ಕೊರಚ ಇನ್ನುಇತರೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಮುಖಂಡರು ಕೂಡ ಮತಯಾಚಿಸಿದರು. ಮುಖಂಡರಾದ ಶೇಖಪ್ಪ ಹೊಸಕೇರಿ ಮತ್ತು ಹಂಪಯ್ಯ. ಬದ್ರಿ, ನಿಂಗಪ್ಪ. ಮಂಜುನಾಥ ಮತ್ತಿತರರಿದ್ದರು.