ಕುಮಟಾ: ಪ್ರಧಾನಿಯಾಗಿ ನರೇಂದ್ರ ಮೋದೀಜಿಯವರು ಬಂದ ಮೇಲೆ ನಮ್ಮ ದೇಶದಲ್ಲಿ ಮಾತ್ರವಲ್ಲ. ಇಡೀ ಜಗತ್ತಿನಲ್ಲೇ ಬದಲಾವಣೆಯಾಗಿದೆ. ಅಂಥ ನಾಯಕತ್ವ ದೇಶಕ್ಕೆ ಸಿಕ್ಕಿದಾಗ ಮಾತ್ರ ದೇಶ- ಧರ್ಮ ಉಳಿಯಲು ಸಾಧ್ಯ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ತಿಳಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ವಿಶೇಷ ಉಪನ್ಯಾಸ ಮಾಡಿದ ಅವರು, ನಾಯಕತ್ವ ಸರಿಯಾಗಿ ಇಲ್ಲದಿದ್ದಾಗ ಔರಂಗಜೇಬ್, ಟಿಪ್ಪುಸುಲ್ತಾನ್ ಅವರಂಥವರನ್ನು ಸಮಾಜದ ಮಧ್ಯೆ ಮೆರೆಸಿ ವಿಜೃಂಭಿಸುವುದನ್ನು ಕಾಣಬಹುದು. ನೇಹಾ ಹತ್ಯೆಯಂತಹ ಪ್ರಕಣಗಳು ನಡೆಯುತ್ತವೆ. ಬೇಸರವೆಂದರೆ ನೇಹಾ ಹತ್ಯೆಗೆ ತಕ್ಕ ಪ್ರತಿಕ್ರಿಯೆ ರಾಜ್ಯ ಸರ್ಕಾರದಿಂದ ಈವರೆಗೂ ಬರಲೇ ಇಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗೀಜಿಯಂತಹ ನಾಯಕತ್ವ ಇಲ್ಲಿ ಬೇಕಾಗಿತ್ತು. ಆರೋಪಿ ಫಯಾಜ್ ಮನೆಯ ಮುಂದೆ ಪೊಲೀಸ್ ಕಾವಲಿನ ಬದಲು ಬುಲ್ಡೋಜರ್ ನಿಂತಿರುತ್ತಿತ್ತು ಎಂದರು.ಕಾನೂನು ಭಯ ಉಳಿದಿಲ್ಲ. ಸರಿಯಾದ ನಾಯಕರನ್ನು ಆಯ್ಕೆ ಮಾಡಬೇಕಾದ ಅವಶ್ಯಕತೆ ತುಂಬಾ ಇದೆ. ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಪರಕೀಯರ ದಾಳಿಯಾದಾಗ ಧರ್ಮ ಉಳಿಸಿಕೊಳ್ಳುವುದಕ್ಕಾಗಿ ಮನೆ ಮಠ ಬಿಟ್ಟು ಒಡವೆ, ಆಸ್ತಿ ಅಂತಸ್ತನ್ನು ಬಿಟ್ಟು ದೇವರ ಮೂರ್ತಿ ಹಿಡಿದು ಊರು ಬಿಟ್ಟು ಎಲ್ಲೆಲ್ಲಿಯೋ ಹೋದರು. ಎಲ್ಲವನ್ನೂ ಬಿಟ್ಟರೂ ಸನಾತನ ಸಂಸ್ಕೃತಿ-ಸಂಸ್ಕಾರವನ್ನು ಬಿಡಲಿಲ್ಲ. ಹೀಗಾಗಿ ದೇಶ ಹಾಗೂ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ ಯೋಗ್ಯ ನಾಯಕರನ್ನು ಆರಿಸಬೇಕಿದೆ ಎಂದರು.
ಶಾಸಕ ದಿನಕರ ಶೆಟ್ಟಿ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ, ಸೂರಜ ನಾಯ್ಕ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪ್ರಶಾಂತ ನಾಯ್ಕ, ಹೇಮಂತಕುಮಾರ ಗಾಂವಕರ ಇತರರು ಇದ್ದರು.ಇದಕ್ಕೂ ಮುನ್ನ ಬಿಜೆಪಿ, ಜೆಡಿಎಸ್ ಹಾಗು ಸೂರಜ ನಾಯ್ಕ ಅಭಿಮಾನಿ ಬಳಗದಿಂದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಅವರಿಗೆ ಬೆಂಬಲಿಸಿ ಮತ್ತು ಸಾರ್ವಜನಿಕರಲ್ಲಿ ಮತದಾನ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ ನಡೆಸಲಾಯಿತು. ಬೈಕ್ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿ ಪಕ್ಷಗಳಿಂದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಪಾಲ್ಗೊಂಡಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿ ಗಮನ ಸೆಳೆದರು.