ಅಲೆಮಾರಿ ಜನಾಂಗ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲಿ: ಮೌಲಾಲಿ

KannadaprabhaNewsNetwork | Published : Jan 22, 2025 12:35 AM

ಸಾರಾಂಶ

Let the nomads get educated and mainstream: Maulali

-ಹಿತಸೇವಾ ಫೌಂಡೇಷನ್ ದಿಂದ ಸಾಧಕರಿಗೆ ಸನ್ಮಾನ, ಜನಜಾಗೃತಿ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಹಿಂದುಳಿದ ಅಲೆಮಾರಿ ಜೀವನ ನಡೆಸಿಕೊಂಡು ಹಗಲುವೇಷ ಹಾಕಿಕೊಂಡು ಬದುಕಿದ ಸಮುದಾಯದ ಏಳಿಗೆಗೆ ಸರ್ಕಾರಗಳು ಚಿಂತನೆ ನಡೆಸಬೇಕು. ಜೊತೆಗೆ ಅಲೆಮಾರಿಗಳು ಜಾಗೃತರಾಗಿ ಶಿಕ್ಷಣ ಪಡೆದುಕೊಂಡು ವ್ಯಾಪಾರ ಉದ್ದಿಮೆ ಮಾಡುತ್ತಾ, ಮುಂದೆ ಬಂದು ಮುಖ್ಯವಾಹಿನಿಗೆ ಸೇರಿಕೊಳ್ಳಬೇಕೆಂದು ಸಮಾಜ ಸೇವಕ ಮೌಲಾಲಿ ಅನಪೂರ ಹೇಳಿದರು.

ನಗರದ ಅಲೆಮಾರಿಗಳು ವಾಸ ಮಾಡುವ ಹೊಸಳ್ಳಿ ತಾಂಡಾ ಬಳಿಯ ಕೃಪಾ ನಗರದಲ್ಲಿ ಅಲೆಮಾರಿಗಳ ಹಿತ ಸೇವಾ ಫೌಂಡೇಷನ್ ವತಿಯಿಂದ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖಂಡ ಬಿ.ಎಲ್. ಆಂಜನೇಯ ಅವರ 45ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ, ಜನಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಹಣಮೇಗೌಡ ಬೀರನಕಲ್ ಮಾತನಾಡಿ, ಹಿಂದುಳಿದ ಅಲೆಮಾರಿ ಸಮುದಾಯದಿಂದ ಸಂಕಷ್ಟದ ನಡುವೆ ಬಂದರೂ ಸ್ವಸಾಮರ್ಥ್ಯದಿಂದ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾನೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಸಮುದಾಯದ ಜಾಗೃತಿ ಮಾಡುತ್ತಿರುವ ಆಂಜನೇಯ ಅವರನ್ನು ಮಾದರಿಯಾಗಿ ಮಾಡಿಕೊಂಡು ನೀವೆಲ್ಲರೂ ಬೆಳೆಯಬೇಕು ಎಂದು ಸಲಹೆ ನೀಡಿದರು. ಅಲೆಮಾರಿ ಜನಾಂಗದ ಆಂಧ್ರಪ್ರದೇಶದ ಮುಖಂಡ ಶ್ರೀನಿವಾಸ ಸಿದ್ದಪೇಟ ಮತ್ತು ಬಿ.ಎಲ್. ಆಂಜನೇಯ ಮಾತನಾಡಿದರು.

ವೇದಿಕೆ ಮೇಲೆ ವಿಜಯಕುಮಾರ, ವಿಶ್ವನಾಥ ನಾಯಕ, ಮಹೇಶ, ಭಾಸ್ಕರ್, ಸತ್ಯನಾರಾಯಣ, ಸೂಲಗಿತ್ತಿ ಕಾಯಕದ ಹಿರಿಯ ಮಹಿಳೆ ಶ್ರೀಮತಿ ಜಯಲಕ್ಷ್ಮಿ ಸೇರಿದಂತೆ ಅನೇಕರಿದ್ದರು. ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಮೌಲಾಲಿ ಅನಪೂರ (ಸಮಾಜ ಸೇವೆ), ಹಣಮೇಗೌಡ ಬೀರನಕಲ್ (ರಾಜಕೀಯ ಕ್ಷೇತ್ರ), ವೈಜನಾಥ ಹಿರೇಮಠ (ಪತ್ರಿಕಾ ಕ್ಷೇತ್ರ), ಜಯಲಕ್ಷ್ಮಿ (ಸೂಲಗಿತ್ತಿ ಕಾಯಕ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಆಂಜನೇಯ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

---

ಫೋಟೊ: ಯಾದಗಿರಿಯ ಕೃಪಾ ನಗರದಲ್ಲಿ ಅಲೆಮಾರಿಗಳ ಹಿತ ಸೇವಾ ಫೌಂಡೇಷನ್ ವತಿಯಿಂದ ಸಾಧಕರಿಗೆ ಸನ್ಮಾನ, ಜನಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

18ವೈಡಿಆರ್17

Share this article