ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಮಾಜಮುಖಿ ಸೇವೆ ಮಾಡುವ ಜೊತೆಗೆ ನಿಮ್ಮ ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಜೀವಿಕ ರಾಜ್ಯಾಧ್ಯಕ್ಷ ಪಿ.ಜಿ.ಗೋವಿಂದರಾಜ್ ಕರೆ ನೀಡಿದರು.ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಘವರ್ಷಿಣಿ ಟ್ರಸ್ಟಿನ ಉದ್ಘಾಟನೆ ಸಮಾರಂಭ ಹಾಗೂ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳಿಂದ ಸಮಾಜದಲ್ಲಿ ಇರುವ ಅಂಕು- ಡೊಂಕುಗಳನ್ನು ತಿದ್ದುವ ಕೆಲಸವಾಗಬೇಕಾಗಿದೆ ಎಂದರು.
ಸರ್ಕಾರದಿಂದ ಸಿಗುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿ ಶಾಲಾ ಆವರಣವನ್ನು ಸ್ವಚ್ಛತೆಗೊಳಿಸುವ ಜೊತೆಗೆ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸುವಂತೆ ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ ಅವರಿಗೆ ನಿಮ್ಮ ಪಂಚಾಯತಿಯಿಂದ ಬರುವ ಅನುದಾನವನ್ನು ನೀಡಿ ಶಾಲೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಶಾಲೆ ಸಿಆರ್ ಪಿ ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯ. ಅದೇ ರೀತಿ ರಾಘ ವರ್ಷಿಣಿ ಟ್ರಸ್ಟಿನ ಎಲ್ಲಾ ಸದಸ್ಯರು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಶಾಲಾ ಅಭಿವೃದ್ಧಿಗೂ ಸಹ ಮುಂದಾಗಬೇಕು ಎಂದರು.ಗ್ರಾಪಂ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ ಮಾತನಾಡಿ, ಟ್ರಸ್ಟಿನ ಸದಸ್ಯರು ನಿಮ್ಮ ಅನುಕೂಲಕ್ಕಾಗಿ ಹಾಗೂ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಲೇಖನಿ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುರಿ ಇಟ್ಟು ವ್ಯಾಸಂಗ ಮಾಡಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಗಣ್ಯರನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಎಸ್.ಸುರೇಶ್, ಜೆಪಿಎಂ ಐಟಿಐ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ, ಸಿಆರ್ ಪಿ ಕೃಷ್ಣರಾಜು, ತಿಮ್ಮಯ್ಯ, ಮುಖ್ಯ ಶಿಕ್ಷಕಿ ಟಿ.ಕಲಾವತಿ, ಭಾಗ್ಯಮ್ಮ , ಮುಖಂಡರಾದ ವೀರಭದ್ರಯ್ಯ, ಚಂದ್ರಕಾಂತ, ಸೂರ್ಯ, ಉಮೇಶ್, ಸ್ವಾಮಿ ಸೇರಿ ಇತರರು ಇದ್ದರು.