ಶೋಷಿತ ಸಮಾಜ ಒಗ್ಗೂಡಿ ರಾಜಕೀಯ ಶಕ್ತಿಯಾಗೋಣ: ಹೊದಿಗೆರೆ ರಮೇಶ್

KannadaprabhaNewsNetwork | Published : Jan 19, 2024 1:49 AM

ಸಾರಾಂಶ

ನಾವೆಲ್ಲರೂ ಒಂದಾಗಿ ಶೋಷಿತ ಸಮುದಾಯಗಳ ಹೋರಾಟ ಎಂದಿಗೂ ನಿಲ್ಲದಂತೆ ಮುಂದುವರಿಸೋಣ. ರಾಜಕೀಯ ಶಕ್ತಿಯಾಗಿ ಬೆಳೆಯಲು ನಮ್ಮಲ್ಲಿ ಎಲ್ಲಾ ರೀತಿಯ ಸಾಮರ್ಥ್ಯಗಳಿವೆ. ಈಗಿನಿಂದಲೇ ಹೋರಾಟದ ಮನೋಭಾವನೆಗಳ ಬೆಳೆಸಿಕೊಳ್ಳೋಣ.

ಚಿತ್ರದುರ್ಗದಲ್ಲಿ ನಡೆಯುವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಿವಿಮಾತು

ಕನ್ನಡಪ್ರಭ ವಾರ್ತೆ ಚನ್ನಗಿರಿ

ಶೋಷಿತ ಸಮಾಜದ ಜನರ ನೋವು ನಲಿವುಗಳ ಕಣ್ಣಾರೆ ಕಂಡಿದ್ದು, ದಲಿತ-ಶೋಷಿತ, ಹಿಂದುಳಿದ ಸಮುದಾಯಗಳು ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೂ ನಾವೆಲ್ಲರೂ ಅಸಂಘಟಿತರಾದ್ದರಿಂದ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಒಗ್ಗಟ್ಟಾಗಿ ರಾಜಕೀಯ ಶಕ್ತಿಯಾಗಿ ಬೆಳೆಯೋಣ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಹೊದಿಗೆರೆ ರಮೇಶ್ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಗುರುವಾರ ಚಿತ್ರದುರ್ಗದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ ಜ.28ರಂದು ಜರುಗುವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ನಾವೆಲ್ಲರೂ ಒಂದಾಗಿ ಶೋಷಿತ ಸಮುದಾಯಗಳ ಹೋರಾಟ ಎಂದಿಗೂ ನಿಲ್ಲದಂತೆ ಮುಂದುವರಿಸೋಣ. ರಾಜಕೀಯ ಶಕ್ತಿಯಾಗಿ ಬೆಳೆಯಲು ನಮ್ಮಲ್ಲಿ ಎಲ್ಲಾ ರೀತಿಯ ಸಾಮರ್ಥ್ಯಗಳಿವೆ. ಈಗಿನಿಂದಲೇ ಹೋರಾಟದ ಮನೋಭಾವನೆಗಳ ಬೆಳೆಸಿಕೊಳ್ಳೋಣ ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ ದೇಶ ಮತ್ತು ರಾಜ್ಯದಲ್ಲಿ ಶೇ.30 ಇರುವವರು ರಾಜಕಾರಣದ ಚುಕ್ಕಾಣಿ ಹಿಡಿದು ಅಧಿಕಾರ ನಡೆಸುತ್ತಾರೆ. ಶೇ. 70 ಇರುವ ಶೋಷಿತ, ಹಿಂದುಳಿದ ಜನರ ಬಳಸಿ ರಾಜಕಾರಣದ ದಬ್ಬಾಳಿಕೆ ನಡೆಸುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶಗಳ ನೀಡಬಾರದು. ದೇವರು ಧರ್ಮದ ಹೆಸರಿನಲ್ಲಿ ಶೋಷಿತ ಜನಾಂಗದವರ ಮೌಢ್ಯತೆಗೆ ತಳ್ಳುತ್ತಾ ಮಾನಸಿಕವಾಗಿ ಹಿಂದುಳಿದು ಶೋಷಣೆಗೆ ಒಳಪಡಿಸುವುದರಿಂದಲೇ ನಾವೆಲ್ಲರೂ ಹಿಂದುಳಿದಿದ್ದೇವೆ. ಬಂಗಾರಪ್ಪ, ದೇವರಾಜ ಅರಸ್, ಸಿದ್ದರಾಮಯ್ಯರಂತಹ ಧೀಮಂತ ನಾಯಕರು ಶೋಷಿತ ಸಮಾಜಗಳಿಗೆ ಶಕ್ತಿ ಕೊಡುವಂತವರಾಗಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಮಾತನಾಡಿ ಶೋಷಿತ ಸಮುದಾಯಗಳ ಇದುವರೆಗೂ ಯಾರು ಗುರುತಿಸಿಲ್ಲ ಕಾಂಗ್ರೆಸ್‌ ಅಧಿಕಾರದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳ ಗುರುತಿಸಿ ಸೌಲಭ್ಯಗಳ ಕೊಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತು ಚಿತ್ರದುರ್ಗದಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಎಂದರು.

ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಹಿಂದುಳಿದ, ಶೋಷಿತ ಸಮಾಜಗಳ ಮುಖಂಡರಾದ ರುದ್ರಮುನಿ, ವಿರೇಶ್ ನಾಯ್ಕ್, ಸಿ.ನಾಗರಾಜ್, ರಾಜಪ್ಪ, ಗುಡ್ಡಪ್ಪ, ಎಚ್.ಎಸ್.ಶ್ರೀನಿವಾಸ್, ಶಿವಣ್ಣ, ತಿಪ್ಪಾಬೋವಿ, ಬುಳಸಾಗರಬಾಬು, ಶಿವಾಜಿರಾವ್, ಹೆಗ್ಗರೆ ರಂಗಪ್ಪ, ಬಸವಾಪುರ ರಂಗನಾಥ್, ಎ.ಸಿ.ಚಂದ್ರು, ಶೇಖರಪ್ಪ, ಶಿವಣ್ಣ, ನಿಂಗಪ್ಪ, ಶಿವಕುಮಾರ್ ಒಡೆಯರ್, ಖದೀರ್ ಬೇಗ್, ಬುಳಸಾಗರ ನಾಗರಾಜ್, ಮಾಚನಾಯ್ಕನಹಳ್ಳಿ ಮಂಜುನಾಥ್, ಅಪ್ರೋಜ್, ಸೈಯ್ಯಾದ್ ಗೌಸ್ ಪೀರ್, ಸಿ.ರಮೇಶ್ ಸೇರಿ ಶೋಷಿತ ಸಮಾಜದ ಜನರು ಭಾಗವಹಿಸಿದ್ದರು.

Share this article