ಕನ್ನಡಪ್ರಭ ವಾರ್ತೆ ಯಲಬುರ್ಗಾದಲಿತ ಮತ್ತು ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ದೂರದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ. ಬಡಿಗೇರ ಹೇಳಿದರು.ತಾಲೂಕಿನ ಯಡ್ಡೋಣಿ ಗ್ರಾಮದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪಾಲಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಕರು ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು ಹೋದರಷ್ಟೇ ಸಾಲದು. ಆಗಾಗ ಬಂದು ಅವರ ಕಲಿಕೆಯ ಪ್ರಗತಿ ಬಗ್ಗೆ ಚರ್ಚಿಸಬೇಕು. ಸಣ್ಣ ಪುಟ್ಟ ಕಾರಣಗಳಿಂದಾಗಿ ಪದೇಪದೇ ಊರಿಗೆ ಕರೆದುಕೊಂಡು ಹೋಗುವುದನ್ನು ಬಿಡಬೇಕು. ಮಕ್ಕಳ ಆರೋಗ್ಯ, ಸುರಕ್ಷತೆ, ಮೂಲಸೌಕರ್ಯ ಸೇರಿದಂತೆ ಓದಿಗೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತಿದೆ. ಪಾಲಕರು ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಅವರ ಕಲಿಕೆಯ ಗುಣಮಟ್ಟ ಉತ್ತಮವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಶಶಿಧರ ಸಕ್ರಿ ಮಾತನಾಡಿ, ವಸತಿ ಶಾಲೆಯಲ್ಲಿ ಮಕ್ಕಳನ್ನು ಅಭ್ಯಾಸದ ಜೊತೆಗೆ ಊಟ, ವಸತಿ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ. ಮಕ್ಕಳು ಮನೆಯಲ್ಲಿರುವುದಕ್ಕಿಂತ ವಸತಿ ಶಾಲೆಯಲ್ಲಿದ್ದರೆ ಸುರಕ್ಷಿತ ಎನ್ನುವ ಭಾವನೆ ಪಾಲಕರಲ್ಲಿ ಮೂಡಿ ಬರಬೇಕು. ಇಲಾಖೆ ನೀಡುವ ಯೋಜನೆಗಳನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘ ಕಾಲ ವಾರ್ಡನ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿರುವ ಸಿದ್ರಾಮಪ್ಪ ಕೆ., ರೇಣುಕಾ ಚಲವಾದಿ, ಇತರರನ್ನು ವಸತಿ ಶಾಲೆಯಿಂದ ಸನ್ಮಾನಿಸಲಾಯಿತು.ಕುಷ್ಟಗಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ನಿವೃತ್ತ ಉಪನ್ಯಾಸಕ ಎಂ.ಎಸ್. ಹಿರೇಮಠ, ಬಿಆರ್‌ಸಿ ಸಂಗಮೇಶ ತೋಟದ್, ಶಿಕ್ಷಕರಾದ ವಿರೇಶ ಕುಂಬಾರ, ಮಹೇಶ ಟಿ., ಪಾಲಕರಾದ ಯಲ್ಲಪ್ಪ ತರಲಕಟ್ಟಿ, ಮಂಜುನಾಥ ರೊಟ್ಟಿ, ಮುಖ್ಯಶಿಕ್ಷಕ ಪ್ರಕಾಶ ಅಂಗಡಿ, ವಸತಿ ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಇದ್ದರು.