ದಾಬಸ್‍ಪೇಟೆ: ಕಳೆದ ಎರಡೂವರೆ ವರ್ಷದ ನಮ್ಮ ಸರ್ಕಾರದ ಸಾಧನೆಗಳನ್ನು ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಯೊಂದು ಮನೆಗೆ ತಿಳಿಸಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ಸರ್ಕಾರದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಪಂಚ ಗ್ಯಾರಂಟಿಗಳು ಪ್ರತಿಯೊಬ್ಬರಿಗೂ ತಲುಪಿ ಸದುಪಯೋಗಪಡಿಸಿಕೊಳ್ಳುವ ಕೆಲಸವಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಾ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದು, ನಮ್ಮ ಮುಖಂಡರುಗಳು ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಆಗುವ ಉಪಯೋಗದ ಬಗ್ಗೆ ವಿರೋಧಿಸುವವರಿಗೆ ತಕ್ಕ ಉತ್ತರ ನೀಡುವ ಕೆಲಸ ಮಾಡಬೇಕು ಎಂದರು.
ಈಗಾಗಲೇ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿಯೋಜನೆ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಸದುಪಯೋಗವನ್ನು ಕ್ಷೇತ್ರದ ಜನತೆ ಪಡೆಯುತ್ತಿದ್ದು, ಯಾವ ಫಲಾನುಭವಿಗಳು ಈ ಯೋಜನೆಗಳಿಂದ ವಂಚಿತರಾಗಿದ್ದರೆ ಅಂತಹವರನ್ನು ಗ್ಯಾರಂಟಿ ಯೋಜನೆಯ ಸಮಿತಿ ಅಧ್ಯಕ್ಷರು, ಸದಸ್ಯರುಗಳು ಪತ್ತೆಹಚ್ಚಿ ಯೋಜನೆಗಳು ತಲುಪುವಂತೆ ಮಾಡಬೇಕು ಎಂದರು.ಸಂಘಟನೆಗೆ ಒತ್ತು ನೀಡಿ : ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಸಾರಥ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಸದೃಡವಾಗಿ ಸಂಘಟನೆಯಾಗುತ್ತಿದೆ ಅದರಂತೆ ನಮ್ಮ ಕ್ಷೇತ್ರದಲ್ಲೂ ಎಲ್ಲಾ ಬ್ಲಾಕ್ ಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದು, ಮುಖಂಡರು, ಕಾರ್ಯಕರ್ತರುಗಳು ಹೆಚ್ಚು ಹೆಚ್ಚು ಸದಸ್ಯತ್ವ ಮಾಡಿಸಿ ಕಾಂಗ್ರೇಸ್ ಪಕ್ಷವನ್ನು ಬಲಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಗ್ರಾ.ಪಂ.ಅಧ್ಯಕ್ಷೆ ಉಮಾಹರೀಶ್, ಉಪಾಧ್ಯಕ್ಷ ವಾಸುದೇವ್, ಬ್ಲಾಕ್ ಮಾಜಿ ಅಧ್ಯಕ್ಷ ಜಗದೀಶ್, ನೆಲಮಂಗಲ ಟೌನ್ ಅಧ್ಯಕ್ಷ ಪ್ರದೀಪ್, ಮುಖಂಡರಾದ ಹೊನ್ನಸಿದ್ದಪ್ಪ, ಸಾಧೀಕ್, ಪ್ರಕಾಶ್ ಬಾಬು, ಪ್ರದೀಪ್ ಮತ್ತೀತ್ತರಿದ್ದರು.