ಯಾರೇನು ಮಾಡಿದರು ಅನ್ನೋದ ಜನರೇ ಆಲೋಚಿಸಲಿ

KannadaprabhaNewsNetwork |  
Published : Feb 24, 2025, 12:33 AM IST
ಫೋಟೋ: ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ. | Kannada Prabha

ಸಾರಾಂಶ

Let the people think about who did what.

-ಮತದಾರರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಪ್ರಶ್ನೆ । ಗುಂಜಿಗನೂರಲ್ಲಿ 3ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

-----

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಎಷ್ಟೋ ಜನ ಶಾಸಕರು ಬಂದು, ಹೋದರು. ಯಾರು ಏನು ಮಾಡಿದರು ಅನ್ನೋದನ್ನ ಹೊಳಲ್ಕೆರೆ ಜನ ಆಲೋಚನೆ ಮಾಡಿ ತಿಳಿದುಕೊಳ್ಳಲಿ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸಗಳನ್ನು ಹೀಗೆ ಸಮರ್ಥಿಸಿಕೊಂಡರು.

ಗುಂಜಿಗನೂರು ಗ್ರಾಮದಲ್ಲಿ ಮೂರು ಕೋಟಿ ರು. ವೆಚ್ಚದಲ್ಲಿ ಎರಡು ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದವು. ಹಲವು ಎಂಎಲ್‌ಎ ಬಂದು ಹೋದರು. ಈ ಕ್ಷೇತ್ರದಲ್ಲಿ ಟಾರ್‌ ರಸ್ತೆಗಳೇ ಇರಲಿಲ್ಲ. ಈಗ ನೋಡಿದಿರೇನು? ಎಲ್ಲೆಲ್ಲಿ ಏನೇನಾಗಿದೆ ಅಂತ ಮತದಾರ ಬಾಂಧವರನ್ನು ಪ್ರಶ್ನೆ ಮಾಡಿದರು.

ಹೊಳಲ್ಕೆರೆಯಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ವೈದ್ಯರು ಇಲ್ಲಿಯೇ ತಂಗಬೇಕೆನ್ನುವ ಕಾರಣಕ್ಕೆ ವಸತಿ ಗೃಹ ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ಶಾಲಾ-ಕಾಲೇಜು, ಡಿಪ್ಲೋಮಾ, ಐಟಿಐ ಪಾಲಿಟೆಕ್ನಿಕ್, ಪದವಿ ಕಾಲೇಜು ಕಟ್ಟಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿದ್ದೇನೆ. ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಎಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದರೆ ಜನತೆಗೆ ಒಳ್ಳೆಯದಾಗುತ್ತದೆ ಎಂಬ ಅರಿವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆಂದರು.

ಹಾಲಿದ್ದಾಗ ಹಬ್ಬ ಮಾಡು, ಅಧಿಕಾರವಿದ್ದಾಗ ಕೆಲಸ ಮಾಡು ಎನ್ನುವುದನ್ನು ಹಿರಿಯರು ಹೇಳಿಕೊಟ್ಟಿದ್ದಾರೆ. ಅದರಂತೆ ಕ್ಷೇತ್ರದ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. 365 ದಿನವೂ ಕೆಲಸ ಮಾಡುವಷ್ಟು ಅನುದಾನ ತರುವ ಯೋಗ್ಯತೆಯಿಟ್ಟುಕೊಂಡಿದ್ದೇನೆ. ದೊಡ್ಡ ದೊಡ್ಡ ಕೆರೆ ಕಟ್ಟೆ, ಚೆಕ್‍ಡ್ಯಾಂ ಕಟ್ಟಿಸಿದ್ದೇನೆ. ಚಿಕ್ಕಜಾಜೂರು ಸಮೀಪ ಕೋಟೆಹಾಳ್ ಬಳಿ ಐದುನೂರು ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಜೋಗ್‍ಫಾಲ್ಸ್‌ ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ. ಈ ಕಾಮಗಾರಿ ಪೂರ್ಣಗೊಂಡರೆ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಿರುವುದಿಲ್ಲ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಪ್ರತಿ ಮನೆಮನೆಗೆ ಶುದ್ಧ ಕುಡಿವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತರಲು 367 ಕೋಟಿ ಖರ್ಚು ಮಾಡುತ್ತಿದ್ದೇನೆ. ನೀರಿನ ಮಧ್ಯೆ ನಲವತ್ತು ಅಡಿ ಆಳದಿಂದ ಪಿಲ್ಲರ್ ಎತ್ತಿ ಟ್ಯಾಂಕ್ ಕಟ್ಟಿ ಮೋಟಾರ್ ಕೂರಿಸಲಾಗುವುದು. ಎತ್ತಿನಹೊಳ್ಳೆ ಹಾಗೂ ಭದ್ರಾ ಡ್ಯಾಂನಿಂದ ಇಲ್ಲಿಗೆ ನೀರು ಹರಿಯುವುದರಿಂದ ಎಂತಹ ಬೇಸಿಗೆಯಲ್ಲೂ ಕುಡಿವ ನೀರಿಗೆ ಸಮಸ್ಯೆಯಾಗುವುದಿಲ್ಲ. ಬಡವರಿಗೆ ನಿವೇಶನಗಳನ್ನು ನೀಡಿ ಮನೆ ಕಟ್ಟಿಸಿಕೊಳ್ಳಲು ಒಬ್ಬರಿಗೆ ಏಳು ಲಕ್ಷ ರು. ನೀಡಲಾಗುವುದು ಎಂದರು.

ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷೆ ದೇವಮ್ಮ, ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ಸದಸ್ಯರಾದ ಆನಂದಪ್ಪ, ಜಗದೀಶ್, ನಾಗೇಂದ್ರಪ್ಪ, ರುದ್ರೆಗೌಡ್ರು, ಗಂಗಾಧರಪ್ಪ, ಲವಕುಮಾರ್, ಜಯಪ್ಪ, ವೀಣ ಹಾಗೂ ಗ್ರಾಮದ ಮುಖಂಡರು ಇದ್ದರು.

----

ಫೋಟೋ: ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!