ಕೊಡಗು ವಿ.ವಿ. ವಿಲೀನ ಪ್ರಸ್ತಾಪಕ್ಕೆ ಖಂಡನೆ

KannadaprabhaNewsNetwork | Published : Feb 24, 2025 12:33 AM

ಸಾರಾಂಶ

ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಮತ್ತು ಇತರೆ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಕುಶಾಲನಗರ ಕೊಡವ ಸಮಾಜ ಖಂಡಿಸುತ್ತದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಜಿಲ್ಲೆಯ ಕುಶಾಲನಗರ ಸಮೀಪ ಅಳುವಾರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ಇತರೆ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಕುಶಾಲನಗರ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ ತಿಳಿಸಿದ್ದಾರೆ.

ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು ಕೊಡಗು ವಿಶ್ವವಿದ್ಯಾಲಯದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ಜಿಲ್ಲೆಯ ಹಲವೆಡೆ ನೆಲೆಸಿರುವ ಬಡತನ ರೇಖೆಯ ಹಾಗೂ ಮಧ್ಯಮ ವರ್ಗದ ಹಿಂದುಳಿದ ಜನರಿಗೆ ಉನ್ನತ ಶಿಕ್ಷಣ ಜಿಲ್ಲೆಯಲ್ಲಿ ನೀಡುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಮೂಲಕ ನೂರಾರು ಸಂಖ್ಯೆಯ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಅನುಕೂಲ ಕಲ್ಪಿಸುವುದರೊಂದಿಗೆ ವಿದ್ಯಾರ್ಥಿಗಳ ಹಾಗೂ ಪೋಷಕರ ಕನಸು ನನಸಾಗುತ್ತಿದೆ ಎಂದರು.

ಇದೀಗ ರಾಜ್ಯ ಸರ್ಕಾರ ಇದನ್ನು ರದ್ದುಗೊಳಿಸಿ ಬೇರೆ ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ಕಾಯಕಕ್ಕೆ ಚಿಂತನೆ ಮಾಡಿರುವುದು ವಿಪರ್ಯಾಸವಾಗಿದೆ.

ಕುಶಾಲನಗರ ಕೊಡವ ಸಮಾಜ ಸೇರಿದಂತೆ ಜಿಲ್ಲೆಯ ಸಮಾಜಗಳ ಜೊತೆ ಕೈಜೋಡಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಶಿಕ್ಷಣ ಇಲಾಖೆಗೆ ಕುತ್ತು ತರುವುದು ಸರಿಯಲ್ಲ.

ಯಾವುದೇ ಸಂದರ್ಭದಲ್ಲಿಯೂ ಕೊಡಗು ವಿಶ್ವವಿದ್ಯಾಲಯವನ್ನು ಜಿಲ್ಲೆಯ ಅಳುವಾರದಲ್ಲಿ ಉಳಿಸಿಕೊಂಡು ಅಭಿವೃದ್ಧಿಗೊಳಿಸುವ ಕೆಲಸ ಆಗಬೇಕು ಎಂದು ಅವರು ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಉತ್ತಮ ಅಂಕ ಪಡೆದು ರಾಜ್ಯಕ್ಕೆ ಎರಡು ಅಥವಾ ಮೂರನೇ ಸ್ಥಾನ ಪಡೆಯುತ್ತಿದ್ದಾರೆ.

ಪದವಿ ವ್ಯಾಸಂಗ ನಂತರ ಉನ್ನತ ವ್ಯಾಸಂಗಕ್ಕೆ ಜಿಲ್ಲೆಯಲ್ಲಿ ಇರುವ ವಿಶ್ವವಿದ್ಯಾಲಯ ತುಂಬಾ ಅನುಕೂಲ ತಂದಿದೆ.

ಸರ್ಕಾರ ವಿಶ್ವವಿದ್ಯಾಲಯವನ್ನು ರದ್ದುಗೊಳಿಸುವ ನಿರ್ಧಾರ ಕೈ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ಹರಿಸಬೇಕು ಎಂದು ವಾಂಚೀರ ಮನು ನಂಜುಂಡ ಹೇಳಿದ್ದಾರೆ.

ಈ ಸಂಬಂಧ ವಿಶ್ವವಿದ್ಯಾಲಯ ಹಿತ ರಕ್ಷಣಾ ಬಳಗ ಕೈಗೊಳ್ಳುವ ಎಲ್ಲಾ ಹೋರಾಟಕ್ಕೂ ಸಮಾಜ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಕೊಡವ ಸಮಾಜದ ಉಪಾಧ್ಯಕ್ಷ ಪುಲಿಯಂಡ ಎಂ ಚೆಂಗಪ್ಪ, ಕಾರ್ಯದರ್ಶಿ ಆಯಿಲಪಂಡ ಸಂಜು ಬೆಳ್ಳಿಯಪ್ಪ, ಜಂಟಿ ಕಾರ್ಯದರ್ಶಿ ಮೈಂದಪಂಡ ಜಗದೀಶ್, ನಿರ್ದೇಶಕರಾದ ಅಂಜಪರವಂಡ ತಮ್ಮಯ್ಯ, ಮತ್ತು ಸಿದ್ದಂಡ ಮಹೇಶ ಇದ್ದರು.

Share this article