ನಿತ್ಯ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಸ್ಥರುಬಿ. ರಾಮಪ್ರಸಾದ್ ಗಾಂಧಿ
ತಾಲೂಕಿನ ಹಲುವಾಗಲು ಗ್ರಾಪಂ ವ್ಯಾಪ್ತಿಯ ಒಳತಾಂಡಾ ಗ್ರಾಮವು ಆಧುನಿಕ ಸೌಲಭ್ಯ, ಸಂಪರ್ಕದಿಂದ ವಂಚಿತವಾಗಿದೆ.
ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಒಳತಾಂಡಾ ಗ್ರಾಮವು ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿದ್ದು, 160ಕ್ಕೂ ಹೆಚ್ಚು ಮನೆಗಳಿವೆ. ಕೃಷಿ, ಕೂಲಿ ಕೆಲಸದಿಂದ ಜನ ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ನೆಟ್‌ವರ್ಕ್ ಸಂಪರ್ಕವಿಲ್ಲದೇ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.ಆಸ್ಪತ್ರೆ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳು ಸೇರಿದಂತೆ ಆಗತ್ಯ ಸೇವೆ ಪಡೆಯಲು ಬೇರೆಡೆ ಹೋಗಬೇಕು. ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎನ್ನುತ್ತಾರೆ ಪೋಷಕರು.
ಗ್ರಾಮಕ್ಕೆ ಮೊಬೈಲ್ ಟವರ್ ಸೌಲಭ್ಯ ಕಲ್ಪಿಸಿಕೊಡುವಂತೆ ಬಿಎಸ್‌ಎನ್‌ಎಲ್ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನೆಟ್‌ವರ್ಕ್ ಸಮಸ್ಯೆ ಜತೆಗೆ ಗ್ರಾಮದಲ್ಲಿ ವಿದ್ಯುತ್, ರಸ್ತೆ, ಚರಂಡಿ, ಸಾರಿಗೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆ ಕಾಡುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಈ ಕಡೆ ಗಮನ ಹರಿಸುತ್ತಿಲ್ಲ. ಕೂಡಲೇ ಗ್ರಾಮಕ್ಕೆ ಮೊಬೈಲ್ ಟವರ್ ಅಳವಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಒಳತಾಂಡಾ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆ ಕುರಿತು ಈಗಾಗಲೇ ಬಿಎಸ್‌ಎಲ್‌ಎಲ್ ಎಂಜಿನಿಯರ್‌ಗಳ ಜತೆ ಮಾತನಾಡಿದ್ದೇನೆ, ಅದಷ್ಟು ಬೇಗ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್.