ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರಿ ನೌಕರರು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಕಾರ್ಯಕ್ಷಮತೆ ಹೆಚ್ಚಾಗಬೇಕು. ನೌಕರರ ಕಾರ್ಯಕ್ಷಮತೆ ಹೆಚ್ಚಿಸುವುದಕ್ಕೆ ನೌಕರರ ಸಂಘಟನೆ ಕಾರ್ಯಾಗಾರ ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.ನವನಗರ ಕಲಾಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕ ವತಿಯಿಂದ 2023-24ನೇ ಸಾಲಿನ ಸದಸ್ಯರ ವಾರ್ಷಿಕ ಮಹಾಸಭೆ, ನೌಕರರ ಮಕ್ಕಳ ಪತ್ರಿಭಾ ಪುರಸ್ಕಾರ ನೂತನವಾಗಿ ನಿರ್ಮಿಸಿದ ಮಳಿಗೆಗಳ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸುಧಾರಣೆಯಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ. ನೌಕರರು ಮಕ್ಕಳು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಸೂಕ್ತ ಕೆಲಸವಾಗಿದೆ. ಸಂಘಟನೆಯ ಎಲ್ಲಾ ಮುಖಂಡರು ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಾಗಿ ನಡೆಯುತ್ತದೆ. ಈ ಹಿನ್ನೆಲೆ ಮಕ್ಕಳು ತಮ್ಮ ಪ್ರತಿಭೆ ತೋರ್ಪಡಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸಾಕಷ್ಟು ಇದ್ದಾರೆ. ಇಡೀ ರಾಜ್ಯಕ್ಕೆ ಪ್ರಥಮ ಬಂದಿರುವ ಅಂಕಿತಾ ಕೊಣ್ಣೂರ ಮಾದರಿಯಲ್ಲಿಯೇ ಎಲ್ಲರೂ ಕಷ್ಟಪಟ್ಟು ಅಧ್ಯಯನ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಕಷ್ಟುಪಟ್ಟು ಸಾಧನೆ ಮಾಡಿದರೆ ಫಲ ಸಿಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತದೆ. 7ನೇ ವೇತನ ಆಯೋಗ ಜಾರಿ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಶೀಘ್ರವಾಗಿ ಎಲ್ಲ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸಿಎಂ ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಮಾತನಾಡಿ, ಸರ್ಕಾರಿ ನೌಕರರ ಭವನ ಕಟ್ಟಡಕ್ಕೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಎಸ್ಎಸ್ಎಲ್ಸಿ ಟಾಪರ್ ಅಂಕಿತಾ ಕೊಣ್ಣೂರ ಪರವಾಗಿ ಪಾಲಕರಿಗೆ ₹ 10,000 ನಗದು ಹಣ ನೀಡಿ ಗೌರವಿಸಿ ದರು. ಜಿಲ್ಲಾ ಅಧ್ಯಕ್ಷ ಎಂ.ಬಿ. ಬಳ್ಳಾರಿ, ಸಂಘದ ಲೆಕ್ಕಪತ್ರ ಸರಿಯಾಗಿಟ್ಟುಕೊಳ್ಳುವ ಕುರಿತು ಮಾಹಿತಿ ನೀಡಿದರು. ಕಾರ್ಯದರ್ಶಿ ವಿಠ್ಠಲ ವಾಲೀಕಾರ ಸ್ವಾಗತಿಸಿದರು.