ಗ್ರಾಮ ಪಂಚಾಯಿತಿ ಬೇಡಿಕೆಗೆ ಅನುಗುಣವಾಗಿ ಯೋಜನಾ ಅನುದಾನ ಕ್ರೋಢೀಕರಿಸಬೇಕು.
ಗ್ರಾಪಂ ಪಿಡಿಓಒ, ಅಧ್ಯಕ್ಷರಿಗೆ ಕಾರ್ಯಾಗಾರ ₹ ರಾಹುಲ್ ರತ್ನಂ ಪಾಂಡೇಯ ಸೂಚನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರ ಪಾತ್ರ ಮಹತ್ವದ್ದಾಗಿದ್ದು, ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ನಿರ್ದಿಷ್ಟ ಗುರಿಯೊಂದಿಗೆ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಪಿಡಿಒ, ಅಧ್ಯಕ್ಷರಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಸೂಚನೆ ನೀಡಿದರು.
ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ ಜರುಗಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಬೇಡಿಕೆಗೆ ಅನುಗುಣವಾಗಿ ಯೋಜನಾ ಅನುದಾನ ಕ್ರೋಢೀಕರಿಸಬೇಕು. ಗ್ರಾಪಂ ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲು ಸರಿಯಾದ ಯೋಜನೆ ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಯ ಅನುಷ್ಠಾನಗೊಳ್ಳುವ ಕಾಮಗಾರಿಗಳನ್ನು ಹಂತಹಂತವಾಗಿ ಪರಿಶೀಲಿಸಿ, ಮೇಲ್ವಿಚಾರಣೆ ನಡೆಸಬೇಕು ಎಂದರು.
ಗ್ರಾಪಂತ್ ವಾರ್ಷಿಕ ಅಭಿವೃದ್ಧಿ ಯೋಜನೆಯನ್ನು ಮುಂದಾಲೋಚನೆ ದೃಷ್ಟಿಯಲ್ಲಿ ಸಿದ್ಧಪಡಿಸಬೇಕು. ಪ್ರತಿಯೊಂದು ಯೋಜನೆಗಳ ಅನುಷ್ಠಾನದ ವೇಳಾಪಟ್ಟಿ ತಯಾರಿ ಮಾಡಿಕೊಳ್ಳಬೇಕು. ಕ್ರಿಯಾ ಯೋಜನೆಗೆ ಅನುಗುಣವಾಗಿ ಭೌತಿಕ ಗುರಿ, ಅನುದಾನದ ಹಂಚಿಕೆ ಮತ್ತು ಮಾರ್ಗಸೂಚಿಗಳಂತೆ ಅನುಷ್ಠಾನ ಮಾಡಬೇಕು. ಗ್ರಾಪಂ ಸಾಮಾನ್ಯ ಮಾಹಿತಿ ಮತ್ತು ಕುಟುಂಬ ಸಮೀಕ್ಷೆಯ ವರದಿ ಸಿದ್ದಪಡಿಸಿಟ್ಟುಕೊಂಡು ಗ್ರಾಮಸ್ಥರ ಮಾಹಿತಿಗೆ ಪ್ರದರ್ಶಿಸಬೇಕು. ಕುಂದುಕೊರತೆಗಳ ಪರಿಹಾರಕ್ಕಾಗಿ ಗ್ರಾಪಂ ಹಂತದಲ್ಲೇ ಆಂತರಿಕ ಕಾರ್ಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.ಪೋಸ್ಟರ್ ಬಿಡುಗಡೆ:
ಉದ್ಯೋಗ ಖಾತರಿ ಯೋಜನೆ ಜಾಗೃತಿ ಪೋಸ್ಟರ್ ಹಾಗೂ ಜೆಜೆಎಂ ಪೋಸ್ಟರ್ ಅನ್ನು ಜಿಪಂ ಸಿಸೊ ಬಿಡುಗಡೆಗೊಳಿಸಿದರು. ಕೆ.ಎಚ್.ಪಿ.ಟಿ ಯೋಜನೆಯಿಂದ ಪಿಡಿಒ ಮತ್ತು ಅಧ್ಯಕ್ಷರಿಗೆ ಗ್ರಾಮ ಆರೋಗ್ಯ ಕಿಟ್ ವಿತರಿಸಿದರು.
ತಾಲೂಕಿನ ಆಯ್ದ ಪಿಡಿಒಗಳು ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಂಡ ಯೋಜನೆಗಳು ಮತ್ತು ಅಭಿವೃದ್ಧಿ ಮುನ್ನೋಟಗಳ ಬಗ್ಗೆ ಪ್ರಸ್ತುತ ಪಡಿಸಿದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೋದಲಬಾಗಿ, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ್ ವಡ್ಡರ್, ಜಿಲ್ಲೆಯ ಎಲ್ಲಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಿಡಿಒಗಳು, ಗ್ರಾಪಂ ಅಧ್ಯಕ್ಷರು, ಎಲ್ಲಾ ಯೋಜನೆಗಳ ಜಿಲ್ಲಾ ಸಂಯೋಜಕರು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೇಲೋ ಸಂಯೋಜಕರು ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.