ಪೊಲೀಸರು ಹೊಸ ಅಪರಾಧಿಕ ಕಾನೂನಿನ ಅರಿವು ಹೊಂದಲಿ: ನಿವೃತ್ತ ಡಿಜಿಪಿ ಡಾ. ಗುರುಪ್ರಸಾದ್

KannadaprabhaNewsNetwork |  
Published : Jul 17, 2024, 12:53 AM IST
16ಎಚ್‌ಪಿಟಿ3- ಹೊಸಪೇಟೆಯಲ್ಲಿ ಜಿಲ್ಲಾ ಪೊಲೀಸ್  ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಅಪರಾಧಿಕ ಕಾನೂನುಗಳ ಕುರಿತ ಕಾರ್ಯಾಗಾರಕ್ಕೆ ನಿವೃತ್ತ ಡಿಜಿಪಿ ಡಾ. ಗುರುಪ್ರಸಾದ್ ಡಿ.ವಿ. ಅವರು ಚಾಲನೆ ನೀಡಿದರು. ಪೊಲೀಸ್‌ ಮಹಾ ನಿರೀಕ್ಷಕ ಬಿ.ಎಸ್. ಲೋಕೇಶ್ ಕುಮಾರ್, ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ ಇದ್ದರು. | Kannada Prabha

ಸಾರಾಂಶ

ಹೊಸಪೇಟೆ ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಹೊಸ ಅಪರಾಧಿಕ ಕಾನೂನುಗಳ ಕುರಿತ ಕಾರ್ಯಾಗಾರ ಆಯೋಜಿಲಾಗಿತ್ತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪೊಲೀಸರು ಹೊಸ ಅಪರಾಧಿಕ ಕಾನೂನಿನ ಕುರಿತು ಅರಿವು ಹೊಂದುವುದು ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿ, ನಿವೃತ್ತ ಡಿಜಿಪಿ ಡಾ. ಗುರುಪ್ರಸಾದ್ ಡಿ.ವಿ. ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಅಪರಾಧಿಕ ಕಾನೂನುಗಳ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲೆಯ ಪೊಲೀಸರೊಂದಿಗೆ ಸಂವಾದ ನಡೆಸಿದ ಅವರು, ಭಾರತೀಯ ನ್ಯಾಯ ಸಂಹಿತಾ ಅಥವಾ ಬಿಎನ್ಎಸ್, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಅಥವಾ ಬಿಎನ್ಎಸ್ಎಸ್ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಅಥವಾ ಬಿಎಸ್ಎ ಹೊಸದಾಗಿ ಜಾರಿಗೊಂಡ ಕ್ರಿಮಿನಲ್ ಕಾನೂನುಗಳ ಬಗ್ಗೆ ಪೊಲೀಸರು ಅರಿತುಕೊಳ್ಳಬೇಕು. ಈ ಕಾನೂನುಗಳು ಭಾರತೀಯ ದಂಡ ಸಂಹಿತೆ ಅಥವಾ ಐಪಿಸಿ, ಕ್ರಿಮಿನಲ್ ಪ್ರೊಸಿಜರ್ ಕೋಡ್ ಅಥವಾ ಸಿಆರ್‌ಪಿಸಿ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ಸ್ಥಾನ ತುಂಬಲಿವೆ. ಬಿಎನ್ಎಸ್‌ ಕಾಯ್ದೆ 163 ವರ್ಷಗಳ ಹಳೆಯ ಐಪಿಸಿಯ ಜಾಗ ತುಂಬಲಿದೆ. ಇದು ಅಪರಾಧ ಕಾನೂನಿನಲ್ಲಿ ಬಹಳಷ್ಟು ಬದಲಾವಣೆ ತರಲಿದೆ. ಬಿಎನ್ಎಸ್ ಸೆಕ್ಷನ್ 4 ರ ಪ್ರಕಾರ ಶಿಕ್ಷೆ ರೂಪವಾಗಿ ಸಮುದಾಯ ಸೇವೆಯನ್ನು ಪರಿಚಯಿಸಲಾಗುತ್ತಿದೆ ಎಂದರು.

ಲೈಂಗಿಕ ಹಲ್ಲೆ ಎಸಗಿದವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸುವುದಕ್ಕೆ ಹೊಸ ಕಾನೂನು ಅವಕಾಶ ನೀಡಿದೆ. ವಿಚಾರಣಾಧೀನ ಕೈದಿಗಳಿಗೆ ಅಂದರೆ, ಜೀವಾವಧಿ ಶಿಕ್ಷೆ ಅಥವಾ ಬಹು ಆರೋಪ ಹೊಂದಿರುವ ಪ್ರಕರಣ ಹೊರತುಪಡಿಸಿ, ಮೊದಲ ಬಾರಿಗೆ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳು ತಮ್ಮ ಗರಿಷ್ಠ ಶಿಕ್ಷೆಯ 3ನೇ ಒಂದು ಭಾಗದಷ್ಟು ಶಿಕ್ಷೆ ಪೂರೈಸಿದ ನಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಕಡ್ಡಾಯ ಜಾಮೀನು ಪಡೆಯಲು ಮಾನದಂಡ ನಿಗದಿ ಮಾಡಿದೆ. ಈಗ ಕನಿಷ್ಠ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಿಗೆ ಫೋರೆನ್ಸಿಕ್ ತನಿಖೆ ಕಡ್ಡಾಯವಾಗಿದೆ. ಫೋರೆನ್ಸಿಕ್ ತಜ್ಞರು ಅಪರಾಧದ ಸ್ಥಳಗಳಿಂದ ಸಾಕ್ಷ್ಯ ಸಂಗ್ರಹಿಸುತ್ತಾರೆ. ಈ ಸಾಕ್ಷ್ಯ ಸಂಗ್ರಹ ಖಚಿತಪಡಿಸಿಕೊಳ್ಳಲಾಗುತ್ತದೆ. ಯಾವುದೇ ಒಂದು ರಾಜ್ಯವು ವಿಧಿವಿಜ್ಞಾನ ಸೌಲಭ್ಯ ಹೊಂದಿಲ್ಲದಿದ್ದರೆ, ಅದು ಇನ್ನೊಂದು ರಾಜ್ಯದಲ್ಲಿ ಸೌಲಭ್ಯ ಬಳಸುತ್ತದೆ.

ಭಾರತೀಯ ಸಾಕ್ಷ್ಯ ಅಧಿನಿಯಮವು ಈವರೆಗ ಚಾಲ್ತಿಯಲ್ಲಿದ್ದ ಭಾರತೀಯ ಸಾಕ್ಷ್ಯ ಕಾಯ್ದೆ ಜಾಗವನ್ನು ಹೊಸ ಅಪರಾಧ ಕಾನೂನು ಆಗಿರುವ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ) ಭರ್ತಿ ಮಾಡಲಿದೆ ಎಂದರು.

ಆರೋಪಿಗಳಿಗೆ ಸಮನ್ಸ್‌ ಕಳುಹಿಸುವುದು, ನೋಟಿಸ್‌ ಜಾರಿ ಮಾಡುವುದರಲ್ಲೂ ಬದಲಾವಣೆ ಆಗಿದೆ. ಡಿಜಿಟಲ್‌ ಯುಗದಲ್ಲಿ ಕಾನೂನು ಪ್ರಕ್ರಿಯೆಯಲ್ಲಿ ಸುಧಾರಣೆ ಆಗಿದೆ. ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆಯೂ ಹೊಸ ಕಾನೂನಿನಲ್ಲಿ ನಿಯಮ ರೂಪಿಸಲಾಗಿದೆ ಎಂದರು.

ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಬಳ್ಳಾರಿ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಬಿ.ಎಸ್. ಲೋಕೇಶ್ ಕುಮಾರ್ ವಹಿಸಿಕೊಂಡಿದ್ದರು. ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಕರ್ನಾಟಕ ಲಾ ಜರ್ನಲ್ ಪಬ್ಲಿಷರ್ಸ ನ ಮೂರ್ತಿ, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸರು ಹಾಗೂ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ