ರೈತ ನಾಯಕ ದಲ್ಲೆವಾಲ್‌ ರಕ್ಷಣೆಗೆ ಪ್ರಧಾನಿ, ರಾಷ್ಟ್ರಪತಿ ಮುಂದಾಗಲಿ

KannadaprabhaNewsNetwork | Published : Jan 14, 2025 1:02 AM

ಸಾರಾಂಶ

ಮಾರಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡುವುದೂ ಸೇರಿದಂತೆ ದೆಹಲಿ ರೈತ ಹೋರಾಟದ ವೇಳೆ ಕೇಂದ್ರ ಸರ್ಕಾರ ನೀಡಿದ್ದ ಲಿಖಿತ ಭರವಸೆ ಈಡೇರಿಸಲು ಒತ್ತಾಯಿಸಿ ಶಂಭು ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಹಿರಿಯ ರೈತ ನಾಯಕ ಜಗಜಿತ್ ಸಿಂಗ್‌ ದಲೈವಾಲಾ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆ ತಕ್ಷಣ ದಲ್ಲೆವಾಲ್‌ ಅವರ ಪ್ರಾಣ ಉಳಿಸಲು ರಾಷ್ಟ್ರಪತಿ, ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ವಿವಿಧ ರೈತ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

- ಮಾರಕ ಕೃಷಿ ಕಾಯ್ದೆಗಳ ವಿರುದ್ಧ 48ನೇ ದಿನ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ: ಆರೋಪ

- ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ರೈತ, ಕಾರ್ಮಿಕ ಸಂಘಟನೆಗಳ ಪ್ರತಿಭಟನೆ । ಸುತ್ತೋಲೆ ಪತ್ರ ದಹನ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾರಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡುವುದೂ ಸೇರಿದಂತೆ ದೆಹಲಿ ರೈತ ಹೋರಾಟದ ವೇಳೆ ಕೇಂದ್ರ ಸರ್ಕಾರ ನೀಡಿದ್ದ ಲಿಖಿತ ಭರವಸೆ ಈಡೇರಿಸಲು ಒತ್ತಾಯಿಸಿ ಶಂಭು ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಹಿರಿಯ ರೈತ ನಾಯಕ ಜಗಜಿತ್ ಸಿಂಗ್‌ ದಲೈವಾಲಾ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆ ತಕ್ಷಣ ದಲ್ಲೆವಾಲ್‌ ಅವರ ಪ್ರಾಣ ಉಳಿಸಲು ರಾಷ್ಟ್ರಪತಿ, ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ವಿವಿಧ ರೈತ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಯುಕ್ತ ಕರ್ನಾಟಕದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ಸುತ್ತೋಲೆ ಪತ್ರ ದಹಿಸುವ ಮೂಲಕ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಈ ಕುರಿತ ಘೋಷಣೆಗಳ ಕೂಗುತ್ತಾ, ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಲಾಯಿತು.

ರೈತ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.26ರಿಂದ ಪಂಜಾಬ್‌- ಹರಿಯಾಣ ಗಡಿಯಲ್ಲಿ 70 ವರ್ಷ ವಯಸ್ಸಿನ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ಲಾ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಸತ್ಯಾಗ್ರಹ ಈಗ 48ನೇ ದಿನಕ್ಕೆ ಕಾಲಿಟ್ಟಿದ್ದು, ದಲೈವಾಲಾ ಸಂಪೂರ್ಣ ನಿತ್ರಾಣರಾಗಿದ್ದಾರೆ. ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಅಪಾಯ ಬಂದೊದಗಿದೆ. ರೈತ ನಾಯಕನ ಇಂತಹ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದರು.

ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ. ಉಮೇಶ ಮಾತನಾಡಿ, ರೈತರಿಗೆ ಮಾರಕವಾದ ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಬಾಗಿಲ ಮೂಲಕ ಜಾರಿಗೆ ಮುಂದಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ರದ್ದುಪಡಿಸುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ಜಾರಿಗೊಳಿಸಲು ಯತ್ನಿಸುತ್ತಿದೆ. ದೇಶಾದ್ಯಂತ ಎಲ್ಲ ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿ, ವಿದ್ಯುತ್ ಪಾವತಿಸುವಂತೆ ರೈತರ ಮೇಲೆ ಒತ್ತಡ ಹೇರಲು, ಆಧಾರ್‌ ಕಾರ್ಡ್ ಜೋಡಣೆ ಕಾರ್ಯ ಪೂರ್ಣಗೊಳಿಸಿದೆ. ಯಾವುದೇ ರೈತರ ಬೆಳೆಗಳನ್ನು ಸಕಾಲದಲ್ಲಿ ಬೆಂಬಲ ಬೆಲೆಗೆ ಖರೀದಿಸುತ್ತಿಲ್ಲ. ಇಂತಹ ಹತ್ತು ಹಲವಾರು ರೈತ ವಿರೋಧಿ ಧೋರಣೆಗಳನ್ನು ಕೇಂದ್ರ ಅನುಸರಿಸುತ್ತಿದೆ ಎಂದು ದೂರಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಸಂಸದರಿಗೆ ದೆಹಲಿ ರೈತ ಹೋರಾಟದ ಲಿಖಿತ ಭರವಸೆ ನೆನಪಿಸುವಂತೆ ಒತ್ತಾಯಿಸಲಾಗಿತ್ತು. ರಾಷ್ಟ್ರಪತಿಗೆ ಜಿಲ್ಲಾಡಳಿತಗಳ ಮೂಲಕ 500ಕ್ಕೂ ಹೆಚ್ಚು ಜಿಲ್ಲೆಗಳಿಂದ ಲಿಖಿತ ಭರವಸೆ ಸರ್ಕಾರಕ್ಕೆ ನೆನೆಪಿಸುವಂತೆ ಮನವಿ ಮಾಡಲಾಗಿತ್ತು. ಮೂರು ವರ್ಷಗಳ ನಂತರವೂ ಕೇಂದ್ರ ಸರ್ಕಾರ ರೈತರ ಹಕ್ಕೊತ್ತಾಯಗಳ ಬಗ್ಗೆ ನಿರ್ಲಕ್ಷ್ಯ ಮುಂದುವರಿಸುತ್ತಿದೆ. ಇಂತಹ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಜನತೆ ವಿಶೇಷವಾಗಿ ರೈತರು ತಕ್ಕ ಪಾಠ ಕಲಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಸಂಘಟನೆಗಳ ಮುಖಂಡರಾದ ಅರುಣಕುಮಾರ ಕುರುಡಿ, ಎಚ್.ಕೆ.ಆರ್. ಸುರೇಶ, ವಿ.ಲಕ್ಷ್ಮಣ, ಪ್ರಸನ್ನಕುಮಾರ, ಐರಣಿ ಚಂದ್ರು, ಮಧು ತೊಗಲೇರಿ, ಮಂಜುನಾಥ ಕೈದಾಳೆ, ಗುಮ್ಮನೂರು ಬಸವರಾಜ, ಸುನಿತ್‌ಕುಮಾರ, ಸತೀಶ ಅರವಿಂದ, ಪೂಜಾ ನಂದಿಹಳ್ಳಿ, ಇ.ಶ್ರೀನಿವಾಸ, ಎ.ಭರಮಪ್ಪ, ಎಸ್.ವೆಂಕಟೇಶ, ಸುರೇಶ ಯರಗುಂಟೆ, ಕೆ.ಎಚ್.ಆನಂದರಾಜ, ದಾದಾಪೀರ್, ಬುಳ್ಳಾಪುರ ಹನುಮಂತಪ್ಪ, ಡಿ.ಷಣ್ಮುಗಂ, ಹರಪನಹಳ್ಳಿ ಸಂತೋಷ, ಶ್ರೀನಿವಾಸಮೂರ್ತಿ, ಮಂಜುನಾಥ ರೆಡ್ಡಿ, ಪವಿತ್ರಾ ಸೇರಿದಂತೆ ರೈತ, ಕಾರ್ಮಿಕ ಸಂಘಟನೆಗಳ ಮುಖಂಡರು, ರೈತ, ಕಾರ್ಮಿಕರು ಇದ್ದರು.

- - - * ಬೇಡಿಕೆಗಳೇನೇನು? - ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ನೀತಿ ಕೈ ಬಿಡಬೇಕು

- ವಿವಿಧೆಡೆ ಕೈಗೊಂಡಿರುವ ಖಾಸಗೀಕರಣ, ಪಂಪ್‌ಸೆಟ್‌ಗೆ ಮೀಟರ್ ಅ‍ಳವಡಿಕೆ ಪ್ರಯತ್ನ ನಿಲ್ಲಿಸಬೇಕು

- 60 ವರ್ಷ ಮೇಲ್ಪಟ್ಟ ಎಲ್ಲ ರೈತರು, ರೈತ ಮಹಿಳೆಯರಿಗೆ ಕನಿಷ್ಠ ₹5 ಸಾವಿರ ಪಿಂಚಣಿ ನೀಡಬೇಕು

- ದೆಹಲಿ ರೈತ ಹೋರಾಟದ ವೇಳೆ ಮುಂದಿಟ್ಟಿದ್ದ ಎಲ್ಲ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ಮೇರೆಗೆ ಈಡೇರಿಸಬೇಕು

- ಕೃಷಿಗೆ ಮಾರಕವಾದ ರೈತವಿರೋಧಿ, ಕರಾಳ ಕೃಷಿ ಕಾಯ್ದೆ ತದ್ರೂಪು ಆಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ಹಿಂಪಡೆಯಬೇಕು.

- -13ಕೆಡಿವಿಜಿ1:

ದಾವಣಗೆರೆಯಲ್ಲಿ ಸೋಮವಾರ ಕೇಂದ್ರ ಸರ್ಕಾರದ ರೈತವಿರೋಧಿ ನೀತಿ, ಧೋರಣೆ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಘಟಕದಿಂದ ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಸುತ್ತೋಲೆ ಪತ್ರ ಸುಟ್ಟು ಹಾಕುವ ಪ್ರತಿಭಟಿಸಲಾಯಿತು.

Share this article