ಖಾಸಗಿ ವಾಹನ ಸರ್ವೇ ಕಾರ್ಯ ಶೀಘ್ರವಾಗಲಿ: ಶಾಸಕ ಜೆಟಿಪಾ

KannadaprabhaNewsNetwork | Published : Jan 28, 2025 12:47 AM

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಶೇ.98ರಷ್ಟು ಯೋಜನೆ ಎಲ್ಲರಿಗೂ ಲಭಿಸಿದೆ. ತಿಂಗಳಿಗೆ ಬೀಳಗಿ ತಾಲೂಕಿಗೆ ಅಂದಾಜು ₹279 ಕೋಟಿ ಈ ಯೋಜನೆಗಳಿಗೆ ಬರುತ್ತಿದೆ ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮತಕ್ಷೇತ್ರದಲ್ಲಿನ ಪಟ್ಟಣ ಹಾಗೂ ಗ್ರಾಮಗಳಲ್ಲಿರುವ ಎಲ್ಲ ಬಗೆಯ ಖಾಸಗಿ ವಾಹನಗಳ ಸರ್ವೇ ಕಾರ್ಯ ಶೀಘ್ರ ನಡೆಸಿ, ವಾಹನಗಳ ಮಾಲೀಕರ ಬಳಿಯಲ್ಲಿ ಸಾರಿಗೆ ಪರವಾನಗಿ ಪತ್ರ (ವಾಹನ ಸವಾರ ಲೈಸೆನ್ಸ್‌) ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಸೂಚಿಸಿದರು.

ಇಲ್ಲಿನ ಸಿದ್ದೇಶ್ವರ ದೇವಸ್ಥಾನ ಸಬಾಭವನದಲ್ಲಿ ಸೋಮವಾರ ಕಾರ್ಮಿಕ ಇಲಾಖೆ, ಪಟ್ಟಣ ಪಂಚಾಯಿತಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಬಾಗಲಕೋಟೆ, ಕರ್ನಾಟಕ ಮಜ್ದೂರ ಸಂಘ, ಬೀಳಗಿ ತಾಲೂಕು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಮತ್ತು ವಿವಿಧ ಕಟ್ಟಡ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ನೋಂದಣಿ ಹಾಗೂ ಸ್ಮಾರ್ಟ್‌ ಕಾರ್ಡ್‌ ಮತ್ತು ಟೂಲ್ ಕಿಟ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಲ್ಲಿಯೂ ಲೈಸೆನ್ಸ್‌ ಇರಬೇಕು ಎನ್ನುವ ದೃಷ್ಟಿಯಿಂದ ವಾಹನಗಳ ಸಂಖ್ಯೆ, ಚಾಲಕರ ಸಂಖ್ಯೆ ನೋಡಿ ಯಾರ ಹತ್ತಿರ ಸಾರಿಗೆ ಪರವಾನಗಿ ಇಲ್ಲವೋ ಅವರಿಗೆ ಪರವಾನಗಿ ನೀಡುವುದು. ಖಾಸಗಿ ವಾಹನ ಚಾಲಕರಿಗೂ ಕಾರ್ಮಿಕ ಕಾರ್ಡ್‌ ಸಿಗುವಂತೆ ಮಾಡಲಾಗುವುದು. ಕಾರ್ಮಿಕ ವಲಯದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಬಡ ಜನರಿಗೆ ಕೂಲಿ ಕಾರ್ಮಿಕರಿಗೆ ಸಹಾಯವಾಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು. ಕೃಷಿ ಕಾರ್ಮಿಕರು, ಕುರಿಗಾಹಿಗಳು ಮತ್ತು ಪತ್ರಕರ್ತರನ್ನು ಕಾರ್ಮಿಕ ವಲಯಕ್ಕೆ ಸೇರಿಸಿದರೆ ಅವರಿಗೂ ಆರೋಗ್ಯ ವಿಮೆ ಮತ್ತು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಕೂಡಲೇ ಈ ವಿಷಯವನ್ನು ಸಚಿವ ಸಂತೋಷ ಲಾಡ್‌ ಗಮನಕ್ಕೆ ತರಲಾಗುವುದು ಎಂದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ ಮಾತನಾಡಿ, ಜಿಲ್ಲೆಯಲ್ಲಿ 35000 ಜನರು ಕಾರ್ಮಿಕರು ಕಾರ್ಡ್‌ ಪಡೆಯಲಿದ್ದಾರೆ. ಅವರಿಗೆ ಮತ್ತು ಅವರ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವ ಹಲವಾರು ಸೌಲಭ್ಯ ನೀಡಲಾಗಿದೆ. ಅಸಂಘಟಿತ 23 ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್‌ ಕಾರ್ಡ್‌ ಜೊತೆಗೆ ಹಲವಾರು ಯೋಜನೆ ನೀಡಲಾಗುತ್ತಿದೆ ಎಂದರು.

ಪಪಂ ಮುಖ್ಯಾಕಾರಿ ದೇವೇಂದ್ರ ಧನಪಾಲ್, ಕಾರ್ಮಿಕ ನಿರೀಕ್ಷಕ ರಮೇಶ ಸಿಂದಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಕಾಖಂಡಕಿ, ಡಿಎಸ್‌ಎಸ್‌ ಬೆಳಗಾವಿ ವಿಭಾಗೀಯ ಅಧ್ಯಕ್ಷ ಮಹಾದೇವ ಹಾದಿಮನಿ, ರವಿ ನಾಗನಗೌಡರ, ಮೈಬೂಬ ಜಮಖಂಡಿ, ಫರಿದಾಬೇಗಂ ಅತ್ತಾರ, ರಿಯಾಜ್ ಬಾಗವಾನ್, ಶ್ರೀಶೈಲ ಜೊಗೆನ್ನವರ, ಚಿದಾನಂದ ನಂದ್ಯಾಳ, ಮನೋಜ ಹಾದಿಮನಿ ಇತರರು ಇದ್ದರು.

ಸರ್ಕಾರಿ ಯೋಜನೆ ಬೇಡವಾದ್ರೆ ಬಿಟ್ಟು ಮಾತನಾಡಿ!

ರಾಜ್ಯ ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಶೇ.98ರಷ್ಟು ಯೋಜನೆ ಎಲ್ಲರಿಗೂ ಲಭಿಸಿದೆ. ತಿಂಗಳಿಗೆ ಬೀಳಗಿ ತಾಲೂಕಿಗೆ ಅಂದಾಜು ₹279 ಕೋಟಿ ಈ ಯೋಜನೆಗಳಿಗೆ ಬರುತ್ತಿದೆ ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.

ಹಲವಾರು ಜನಪರ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯನವರು ತಂದಿದ್ದು, ಅವುಗಳು ನೆರವಾಗಿ ಫಲಾನುಭವಿಗಳಿಗೆ ಸೇರುವಂತೆ ಮಾಡಲಾಗುತ್ತಿದೆ. ಆದರೂ ಕೆಲ ಜನರು ಎಲ್ಲವನ್ನು ಅನುಭವಿಸಿ ಮತ್ತೆ ಸರ್ಕಾರದ ವಿರುದ್ಧ ಮಾತನಾಡುವುದು ಎಷ್ಟು ಸರಿ? ಯಾರಿಗಾದರು ಯೋಜನೆ ಬೇಡವಾದರೆ ಅವುಗಳನ್ನು ಬಿಟ್ಟು ಮಾತನಾಡಿ. ಎಲ್ಲವನ್ನು ಪಡೆದು ಮಾತನಾಡುವುದು ತಪ್ಪು. ಚುನಾವಣೆ ಸಂದರ್ಭದಲ್ಲಿ ಹಣ ಹೆಂಡದ ಆಮಿಷಕ್ಕೆ ಬಲಿಯಾಗಿ ಸರ್ಕಾರಗಳು ನೀಡಿದ ಯೋಜನೆಗಳು ಮರೆತು ಹೋಗುವಷ್ಟು ಗುಣ ಇರಬಾರದು. ಮನುಷ್ಯತ್ವದ ಗುಣ ಎಲ್ಲರಲ್ಲಿಯೂ ಬೆಳೆಯಬೇಕು ಎಂದರು. ಕಾರ್ಮಿಕ ಇಲಾಖೆಯಿಂದ ಸುಮಾರು 250 ಜನ ತಾಲೂಕಿನ ಜನರಿಗೆ ಅವರವರ ಉದ್ಯೋಗ ಆಧಾರಿತ ಕಿಟ್‌ ವಿತರಿಸಿದೆ. ಪ್ರತಿ ಒಂದು ಟೂಲ್ ಕಿಟ್‌ ದರ ಅಂದಾಜು ₹15000 ದಿಂದ ₹25000 ಸಾವಿರ ವರೆಗೆ ಇದ್ದು ಇದನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ ಎನ್ನುವುದನ್ನು ಮರೆಯಬಾರದು ಎಂದು ಶಾಸಕರು ತಿಳಿಸಿದರು.

Share this article