ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇರುವುದೊಂದೇ ಭೂಮಿ, ಭೂಮಿಯು ನಮ್ಮ ಪೂರ್ವಿಕರಿಂದ ಪಡೆದ ಉಡುಗೊರೆಯಲ್ಲ, ಬದಲಾಗಿ ಇನ್ನೂ ಹುಟ್ಟಿ ಬರಲಿರುವ ಜನಾಂಗದಿಂದ ಪಡೆದಿರುವ ಋಣಭಾರ. ಆದ್ದರಿಂದ ಪರಿಸರ ಸಂರಕ್ಷಣೆ ಮೂಲಕ ಭೂಮಿಯನ್ನು ಜೋಪಾನವಾಗಿಡುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನಧರ್ಮವಾಗಬೇಕು ಎಂದು ಕೆ.ವಿ ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅಭಿಪ್ರಾಯಪಟ್ಟರು.ತಾಲೂಕಿನ ಬೈರಗಾನಹಳ್ಳಿಯ ಪಂಚವಟಿ ಆಶ್ರಮದಲ್ಲಿ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಚಿಕ್ಕಬಳ್ಳಾಪುರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪರಿಸರ ಸಂರಕ್ಷಣೆ ಸಲುವಾಗಿ ಏರ್ಪಡಿಸಿದ್ದ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಪೂರ್ಣ ನಿಲ್ಲಿಸಿಪರಿಸರದ ಮೇಲೆ ದುಷ್ಪರಿಣಾಮ ಉಂಟುಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಗಿಡ ನೆಡುವ ಮೊಲಕ ಪರಿಸರ ರಕ್ಷಣೆಗೆ ಜಾಗೃತಿ ಮೂಡಿಸಬೇಕು. ನಾವು ಪರಿಸರವನ್ನು ಉಳಿಸಿ ಬೆಳೆಸಿದರೆ ಮುಂದಿನ ಪೀಳಿಗೆಗೆ ಬಹಳಷ್ಟು ಉಪಯೋಗವಾಗಲಿದೆ ಇಲ್ಲವಾದಲ್ಲಿ ಪರಿಸರ ಮಾಲಿನ್ಯದಿಂದ ಮನುಷ್ಯ ತೊಂದರೆಗಳನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುವದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ ಅಂತಹ ಕನ್ನಡ ಭಾಷೆಯ ಸೊಗಡನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮತ್ತು ಪಸರಿಸುವ ಕಾರ್ಯವೇ ಕನ್ನಡ ರಾಜ್ಯೋತ್ಸವ. ನವೆಂಬರ್ 1 ಎಂಬುದೇ ಕನ್ನಡಿಗರಿಗೆ ದೊಡ್ಡ ಹಬ್ಬ. ಆದರೆ ಕೆಲವರು ಕನ್ನಡ ಮಾತನಾಡಿದರೆ ದಡ್ಡರೆಂದು ಪರಿಗಣಿಸುತ್ತಾರೆ. ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಬುದ್ಧಿವಂತರು ಎಂಬುವ ಭಾವನೆ ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದ್ದು, ಈ ಭಾವನೆಯನ್ನು ಹೋಗಲಾಡಿಸಬೇಕು. ನಮ್ಮ ಭಾಷೆ ಕನ್ನಡ. ಇದನ್ನು ಉಳಿಸಿ ಬೆಳೆಸುವ ನಮ್ಮೆಲ್ಲರ ಕರ್ತವ್ಯ ಎಂದರು.ನಾರಾಯಣಸ್ವಾಮಿಗೆ ಸನ್ಮಾನ
ಇದೇ ವೇಳೆ ಕರ್ನಾಟಕ ಸುವರ್ಣ ಸಂಭ್ರಮ 50 ಪ್ರಶಸ್ತಿ ಪುರಸ್ಕೃತ ಕೃಷಿಕ ಜಿ.ಎನ್. ನಾರಾಯಣಸ್ವಾಮಿ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ ಕ್ಲಬ್ ಅಧ್ಯಕ್ಷ ಡಾ.ಎನ್.ಚಂದ್ರಪ್ಪ, .ಲಯನ್ಸ್ ಕ್ಲಬ್ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ,ನಂದಿ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್, ಪರಿಸರ ಸಂಯೋಜಕರಾದ ಗಿರಿಧರ್,ಶ್ರೀನಿವಾಸ್ ಮೂರ್ತಿ,ಸೂರ್ಯನಾರಾಯಣ, ಬ್ರಹ್ಮಚಾರಿ, ಡಾ ಜಿ ವಿ ಜ್ಞಾನೇಂದ್ರ ರೆಡ್ಡಿ, ಸುನೀಲ್, ವೆಂಕಟಪ್ಪ,ಮಲ್ಲಣ್ಣ,ರಘುರಾಮ್,ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ಸದಸ್ಯರು ಮತ್ತಿತರರು ಇದ್ದರು.