ಬಿಜೆಪಿಗೆ ಹೆಚ್ಚಿನ ಮತ ತರಲು ಪ್ರಕೋಷ್ಠಗಳು ಗಮನ ಹರಿಸಲಿ

KannadaprabhaNewsNetwork | Published : May 4, 2024 12:36 AM

ಸಾರಾಂಶ

ಒಂದು ದೇಶ, ರಾಜ್ಯ ಅಭಿವೃದ್ಧಿ ಹೊಂದಬೇಕೆಂದರೆ ಎಲ್ಲ ವೃತ್ತಿಯವರು ಕೆಲಸ ಮಾಡಿದಾಗ ಮಾತ್ರ ಸಾಧ್ಯ

ಗದಗ: ಪ್ರಸಕ್ತ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ದೇಶ ಸುಭದ್ರ ಮತ್ತು ಸುಭಿಕ್ಷವಾಗಿರಬೇಕಾದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಪಕ್ಷದ ಪ್ರಕೋಷ್ಠಗಳಿಗೂ ಇದು ಪರೀಕ್ಷೆಯಾಗಿದ್ದು, ಎಲ್ಲ ಪ್ರಕೋಷ್ಠಗಳು ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಶ್ರಮಿಸಬೇಕು ಎಂದು ಹಾವೇರಿ-ಗದಗ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಬಿಜೆಪಿ ವಿವಿಧ ಪ್ರಕೋಷ್ಠಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಒಂದು ದೇಶ, ರಾಜ್ಯ ಅಭಿವೃದ್ಧಿ ಹೊಂದಬೇಕೆಂದರೆ ಎಲ್ಲ ವೃತ್ತಿಯವರು ಕೆಲಸ ಮಾಡಿದಾಗ ಮಾತ್ರ ಸಾಧ್ಯ. ಸರ್ಕಾರ ಮತ್ತು ಎಲ್ಲ ವೃತ್ತಿ ಬಾಂಧವರ ನಡುವೆ ಸೇತುವೆಯಾಗಿ ಕೆಲಸ ಮಾಡಲು ಪ್ರಕೋಷ್ಠಗಳನ್ನು ಮಾಡಿದೆ. ಎಲ್ಲ ಪ್ರಕೋಷ್ಠಗಳು ಸಕ್ರೀಯವಾಗಿ ಕೆಲಸ ಮಾಡಿ ಪಕ್ಷಕ್ಕೆ ಹೆಚ್ಚಿನ ಮತ ಹಾಕುವಂತೆ ನೋಡಿಕೊಳ್ಳಬೇಕು ಎಂದರು.

ಈ ರೀತಿಯ ಪ್ರಕೋಷ್ಠಗಳು ಬೇರೆ ಪಕ್ಷದಲ್ಲಿ ಇಲ್ಲ. ಅವರು ನಿಮ್ಮ ವೃತ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ವೈದ್ಯರ ಸಮಸ್ಯೆಗಳಿದ್ದಾಗ ಅದನ್ನು ನಮ್ಮ ಪ್ರಕೋಷ್ಠ ವಿವರವಾಗಿ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಬಿಜೆಪಿ ಗೆದ್ದರೆ ನಿಮ್ಮ ವೃತ್ತಿ ಸುರಕ್ಷಿತವಾಗಿರುತ್ತವೆ. ನರೇಂದ್ರ ಮೋದಿ ಎಲ್ಲರ ಬಗ್ಗೆ ಯೋಚಿಸುತ್ತಾರೆ. ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಚಿಂತನೆ ಮಾಡಿ ಅವರಿಗೆ ಆರ್ಥಿಕ ನೆರವು ನೀಡಿದರು‌. ಸುಮಾರು 18 ವೃತ್ತಿಗಳಿಗೆ ನೆರವು ನೀಡುವ ವಿಶ್ವಕರ್ಮ ಯೋಜನೆ ಜಾರಿ ಮಾಡಿದರು. ಎಪಿಎಂಸಿ ವ್ಯಾಪಾರಸ್ಥರು, ಮೀನುಗಾರರು, ವಿದೇಶಿ ಕಂಪನಿಗಳ ದಾಳಿಯಾದಾಗ ಸಣ್ಣ ವ್ಯಾಪಾರಸ್ಥರನ್ನು ರಕ್ಷಣೆ ಬಿಜೆಪಿ ಮಾಡಿದೆ. ಈ ಚುನಾವಣೆ ಪ್ರಕೋಷ್ಠಗಳಿಗೂ ಪರೀಕ್ಷೆ. ಮೋದಿ ಅಲೆ ಇದೆ.ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ. ಅದಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಹೇಳಿದರು.

ಸಭೆಯಲ್ಲಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ದತ್ತಾತ್ರೆಯ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ವಿವಿಧ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

Share this article