ರೆಡ್ಡಿ ಸಮಾಜ ಸಂಘಟಿತವಾಗಲಿ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork |  
Published : May 25, 2025, 03:16 AM IST
ಕಾರಟಗಿಯಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟನೆ ಮಾಡಿದರು.  | Kannada Prabha

ಸಾರಾಂಶ

ಹೇಮರಡ್ಡಿ ಮಲ್ಲಮ್ಮ ರೆಡ್ಡಿ ಸಮಾಜಕ್ಕೆ ಮಾತ್ರವಲ್ಲದೆ ಸರ್ವ ಸಮಾಜಕ್ಕೂ ಆದರ್ಶವಾಗಿದ್ದಾರೆ. ಅವರ ಸ್ಮರಣೆ ನಿರಂತರವಾಗಿ ನಡೆಯಬೇಕು.

ಕಾರಟಗಿ:

ಹೇಮರೆಡ್ಡಿ ಮಲ್ಲಮನ ಆದರ್ಶ ಮೈಗೂಡಿಸಿಕೊಂಡು ಬೆಳೆಯುತ್ತಿರುವ ರೆಡ್ಡಿ ಸಮಾಜ ದಾನ, ಧರ್ಮ ಮಾಡಿದೆ. ಇಂಥ ಸಮಾಜ ಇನ್ನು ಹೆಚ್ಚು ಸಂಘಟಿತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲಿ. ಮುಖ್ಯವಾಗಿ ಒಂದು ಶಿಕ್ಷಣ ಸಂಸ್ಥೆ ಕಟ್ಟಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಹೇಮ-ವೇಮ ರೆಡ್ಡಿ ಸಮಾಜ ಸೇವಾ ಟ್ರಸ್ಟ್ ಸಮಿತಿಯಿಂದ ಸಿದ್ಧೇಶ್ವರ ರಂಗಮಂದಿರದಲ್ಲಿ ಶನಿವಾರ ನಡೆದ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ೬೦೩ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ರೆಡ್ಡಿ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಈ ಸಮಾಜದ ಮುಖಂಡರು ಎಲ್ಲ ಕ್ಷೇತ್ರಗಳಲ್ಲಿ ಪ್ರಭಾವಿಯಾಗಿ ಬೆಳೆದಿದ್ದು ಸಮಾಜವನ್ನು ಬೆಳೆಸುತ್ತಿದ್ದಾರೆ ಎಂದ ಸಚಿವರು, ಹೇಮರಡ್ಡಿ ಮಲ್ಲಮ್ಮ ರೆಡ್ಡಿ ಸಮಾಜಕ್ಕೆ ಮಾತ್ರವಲ್ಲದೆ ಸರ್ವ ಸಮಾಜಕ್ಕೂ ಆದರ್ಶವಾಗಿದ್ದಾರೆ. ಅವರ ಸ್ಮರಣೆ ನಿರಂತರವಾಗಿ ನಡೆಯಬೇಕು. ಅವರ ಆರ್ದಶಗಳು ನಮಗೆ ಪ್ರೇರಣೆಯಾಗಿದ್ದು ನಮ್ಮ ಸರ್ಕಾರ ಮಹಾಪುರುಷರ ಜಯಂತಿ ಆಚರಿಸುತ್ತಿದೆ ಎಂದರು.

ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಮಹನೀಯರ ಜಯಂತಿಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿವೆ. ರೆಡ್ಡಿ ಸಮಾಜ ಅಖಂಡ ಗಂಗಾವತಿ ತಾಲೂಕಿನಲ್ಲಿ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮ ನಡೆಸಿ ಪ್ರತಿಯೊಂದು ಸಮಾಜಕ್ಕೆ ಪ್ರೇರಣೆಯಾಗಿದೆ. ಆರ್ಥಿಕ ದುರ್ಬಲರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ಮಾತನಾಡಿ, ರೆಡ್ಡಿ ಸಮಾಜ ಹೆಚ್ಚಿನ ರೀತಿಯಲ್ಲಿ ಸಂಘಟಿತವಾಗಲಿ. ಹೇಮರಡ್ಡಿ ಮಲ್ಲಮ್ಮ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲಿ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಸಹಕಾರಿ ರತ್ನ ದೊಡ್ಡಪ್ಪ ದೇಸಾಯಿ, ಡಾ. ಚಂದ್ರಪ್ಪ, ಡಿವೈಎಸ್ಪಿ ಸಿದ್ದನಗೌಡ ಪಾಟೀಲ್, ಉಪನ್ಯಾಸಕ ಚೆನ್ನಬಸಪ್ಪ ಆಸ್ಪರಿ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

ಹೇಮ-ವೇಮ ಸದ್ಭೋಧನ ವಿದ್ಯಾಪೀಠದ ಎರೆಹೊಸಳ್ಳಿಯ ವೇಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿದ್ದೇಶ್ವರ ಮಹಾಸ್ವಾಮಿ, ಮರಳುಸಿದ್ದಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ರುದ್ರಗೌಡ ನಂದಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಕೆ. ಗೋಪಿನಾಥ ರೆಡ್ಡಿ, ಶರಣೇಗೌಡ ಬಯ್ಯಾಪುರ, ಬಸವನಗೌಡ ಬಾದರ್ಲಿ, ಮಾಜಿ ಶಾಸಕ ಜಿ. ವೀರಪ್ಪ, ಅಮರೇಶ ಕುಳಗಿ, ಬಿ. ಬಸವರಾಜಪ್ಪ, ಮೌನೇಶ ದಢೇಸೂಗೂರು, ಶೇಖರಗೌಡ ಮಾಲಿಪಾಟೀಲ್, ಸಿ.ವಿ. ಚಂದ್ರಶೇಖರ, ಶ್ರೀಧರ ಕೆಸರಟ್ಟಿ, ಜಗದೀಶಪ್ಪ ಸಿಂಗನಾಳ ಮತ್ತಿತರು ಇದ್ದರು. ಲಿಂಗಾರಡ್ಡಿ ಆಲೂರು ಕಾರ್ಯಕ್ರಮ ನಿರ್ವಹಿಸಿದರು.

ಪ್ರಾರಂಭದಲ್ಲಿ ಮಲ್ಲಮ್ಮ ಹಾಗೂ ವೇಮನರ ಭಾವಚಿತ್ರದೊಂದಿಗೆ ವಿವಿಧ ಬಾಜಾ, ಭಜಂತ್ರಿ ಹಾಗೂ ೬೦೩ ಕುಂಭಗಳೊಂದಿಗೆ ಎಪಿಎಂಸಿಯಿಂದ ಪಟ್ಟಣದಾದ್ಯಂತ ಭವ್ಯ ಮೆರವಣಿಗೆ ನಡೆಸಲಾಯಿತು.ಭಾರತ ನೀಡುವ ದೇಶ: ವಿಶೇಷ ಉಪನ್ಯಾಸ ನೀಡಿದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ, ಬೇಡುತ್ತಿದ್ದ ಭಾರತ ಇಂದು ನೀಡುವ ದೇಶವಾಗಿದೆ. ರೈತರು ಆಹಾರ ಬೆಳೆ ಬೆಳೆದು ಈಡಿ ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ರೆಡ್ಡಿ ಸಮಾಜ ದೇಶಕ್ಕೆ ಅನ್ನ ನೀಡುವ ಜತೆಗೆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸರ್ಕಾರ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಲ್ಲಮ್ಮರ ಆದರ್ಶವನ್ನು ರಾಜ್ಯಕ್ಕೆ ಮಾರ್ಗದರ್ಶಿಯಾಗಿ ಮಾಡಬೇಕು ಎಂದು ಕರೆ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ