ಕನ್ನಡಪ್ರಭ ವಾರ್ತೆ ತಿಪಟೂರು
ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮಧ್ವಜ ಹಾರಾಡುವಂತೆ ದತ್ತಪೀಠದಲ್ಲೂ ಸಹ ಧರ್ಮಧ್ವಜವು ಶೀಘ್ರದಲ್ಲಿ ಹಾರಾಡುವ ಕಾಲ ಬರಲಿ ಎಂದು ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ನಗರದ ಕಲ್ಲೇಶ್ವರ ದೇವಸ್ಥಾನದ ಬಸವ ಮಂಟಪದ ಆವರಣದಲ್ಲಿ ಶ್ರೀ ಗುರು ದತ್ತಾತ್ರೇಯ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದತ್ತಾತ್ರೇಯ ಜಯಂತಿ ಮಹೋತ್ಸವ ಆಚರಣೆ ಎಲ್ಲರನ್ನು ಸಂಘಟಿಸುವ ಕಾರ್ಯವಾಗಿದ್ದು, ದತ್ತಪೀಠಕ್ಕೆ ಸಂಬಂಧಿಸಿದ ವಿವಾದಗಳು ಮತ್ತು ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿ ಮತ್ತು ದತ್ತಮಾಲಾಧಾರಿಗಳಿಗೆ ದಿನವಿಡೀ ದಾಸೋಹ ವ್ಯವಸ್ಥೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು. ಕಲ್ಲೇಶ್ವರ ದೇವಾಲಯದ ಬಸವ ಮಂಟಪದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳಾದ ದತ್ತಾತ್ರೇಯ ಹೋಮ, ವಿಶೇಷ ಹವನ, ಪೂಜಾ ಕಾರ್ಯಕ್ರಮಗಳು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿ, ಕಲ್ಲೇಶ್ವರ ಸ್ವಾಮಿಗೆ ಅಲಂಕಾರವನ್ನು ಏರ್ಪಡಿಸಲಾಗಿತ್ತು. ಹೋಮದ ನಂತರ ದೇವಾಲಯದಲ್ಲಿ ದೀಪಾರಾಧನೆ ಮತ್ತು ಮಂಗಳಾರತಿ ನೆರವೇರಿಸಲಾಯಿತು. ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿ ಪೂರ್ಣಾಹುತಿ ನೀಡಿದರು. ಭಕ್ತರು ಹಾಗೂ ದತ್ತಮಾಲಾಧಾರಿಗಳಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಮಯದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ತುಮಕೂರು, ಗುಬ್ಬಿ, ತುರುವೇಕೆರೆ, ನೂರಾರು ದತ್ತಮಾಲಾಧಾರಿಗಳು ತಿಪಟೂರು ಕಲ್ಲೇಶ್ವರ ದೇವಾಲಯದಿಂದ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಪಾದ ಸನ್ನಿಧಿಗೆ ಪಾದಯಾತ್ರೆಯನ್ನು ಆರಂಭಿಸಿದರು.
ಜಯಂತಿ ಮಹೋತ್ಸವದಲ್ಲಿ ನಿವೃತ್ತ ಎಸಿಪಿ ಲೋಕೇಶ್ವರ್, ರಾಘವೇಂದ್ರ ಗೋಶಾಲೆಯ ಹಳ್ಳಿಕಾರ್ ವಿನಯ್ ಕುಮಾರ್. ಮಾಜಿ ನಗರಸಭಾ ಸದಸ್ಯ ಗಂಗಾಧರ್ ತರಕಾರಿ, ಕನಕ ಪತ್ತಿನ ಸಹಕಾರ ಸಂಘದ ಓಹಿಲಾ ಗಂಗಾಧರ್, ಧರ್ಮದರ್ಶಿ ಚಂದ್ರಶೇಖರ್, ದತ್ತಮಾಲಧಾರಿಗಳಾದ ಬುಲೆಟ್ ಕೃಷ್ಣ, ಸಂದೀಪ್. ಮಂಜು, ಹೇಮಂತ್ ಕೊಪ್ಪ, ಪ್ರಜ್ವಲ್, ಶರತ್, ದಯಾನಂದ್, ದರ್ಶನ್, ಚೇತನ್, ವಿಷ್ಣು ಸಮಾಜದ ಬಾಬು, ಹಾರೋಗಟ್ಟ ಮಲ್ಲಿಕಾರ್ಜುನ್ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಜರಂಗದಳದ ಪರಿವಾರದ ಕಾರ್ಯಕರ್ತರು, ವಿವಿಧ ಸಂಘಟನೆಗಳ ನೂರಾರು ಸದಸ್ಯರು ಭಾಗವಹಿಸಿದ್ದರು.