ಅಪರಾಧಗಳ ತಡೆಗೆ ರಿಕ್ಷಾ ಚಾಲಕರು ಸ್ಪಂದಿಸಲಿ

KannadaprabhaNewsNetwork | Published : Dec 4, 2024 12:33 AM

ಸಾರಾಂಶ

ಸಿವಿಲ್ ಪೊಲೀಸರ ರೀತಿಯಲ್ಲೇ ಆಟೋ ಚಾಲಕರೂ ಸಹ ಕಾರ್ಯನಿರ್ವಹಿಸುವ ಮೂಲಕ ಅಪರಾಧ ತಡೆ, ಕಾನೂನುಬಾಹಿರ ಕೃತ್ಯಗಳ ತಡೆಗೆ ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಸಲಹೆ । ಆಟೋ ಚಾಲಕರು, ಮಾಲೀಕರಿಗೆ ಸಂಚಾರ ನಿಯಮಗಳ ಜಾಗೃತಿ ಅಭಿಯಾನ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಿವಿಲ್ ಪೊಲೀಸರ ರೀತಿಯಲ್ಲೇ ಆಟೋ ಚಾಲಕರೂ ಸಹ ಕಾರ್ಯನಿರ್ವಹಿಸುವ ಮೂಲಕ ಅಪರಾಧ ತಡೆ, ಕಾನೂನುಬಾಹಿರ ಕೃತ್ಯಗಳ ತಡೆಗೆ ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಮೈದಾನದ ಸಭಾಂಗಣದಲ್ಲಿ ಮಂಗಳವಾರ ಆಟೋ ಚಾಲಕರು, ಮಾಲೀಕರಿಗೆ ಸಂಚಾರ ನಿಯಮಗಳ ಜಾಗೃತಿ ಅಭಿಯಾನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿತ್ಯವೂ ನಗರ ಸಂಚಾರ ಮಾಡುವ ಆಟೋ ಚಾಲಕರಿಗೆ ಎಲ್ಲ ರೀತಿಯ ಮಾಹಿತಿ, ಸಂಗತಿ ಗೊತ್ತಿರುತ್ತದೆ. ಪೊಲೀಸರ ಜೊತೆ ಮಾಹಿತಿ ಹಂಚಿಕೊಂಡಲ್ಲಿ ಸಾಕಷ್ಟು ಅಪರಾಧ, ಕಾನೂನು ಕೃತ್ಯಗಳನ್ನು ತಡೆಯಲು ಸಾಧ್ಯ ಎಂದರು.

ಆಟೋದಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋದ ಒಡವೆ, ನಗದು, ದುಬಾರಿ ವಸ್ತುಗಳು, ಬ್ಯಾಗ್‌ಗಳನ್ನು ಹಲವಾರು ಚಾಲಕರು ಇಲಾಖೆಗೆ ತಲುಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಆಟೋ ರಿಕ್ಷಾಗಳಲ್ಲಿ ಸಂಚರಿಸಿದರೆ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು. ಆಗ ಅಂತಹವನ್ನು ಗುರುತಿಸಿ, ಇಲಾಖೆ ಮುಂದಿನ ಕ್ರಮ ಕೈಗೊಳ್ಳಬಹುದು. ಉತ್ತಮ ಸಮಾಜ ನಿರ್ಮಾಣ ಉದ್ದೇಶದಿಂದ ಅಕ್ರಮಗಳ ಕುರಿತು ಮಾಹಿತಿ ನೀಡುವ ಚಾಲಕರನ್ನು ನಮ್ಮ ಸಮಿತಿಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ರಿಕ್ಷಾ ಚಾಲಕರು ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕೇಂದ್ರದಲ್ಲಿ ಸುಮಾರು 6500 ಆಟೋ ಚಾಲಕರಲ್ಲಿ 250 ಚಾಲಕರು ಮಾತ್ರ ದಾಖಲೆ ನೀಡಿದ್ದಾರೆ. ಚಾಲನಾ ಪರವಾನಿಗೆ ಸೇರಿದಂತೆ ಎಲ್ಲ ನಿಯಮಗಳನ್ನು ಚಾಲಕರು ಪಾಲಿಸಬೇಕು. ರಾತ್ರಿವೇಳೆ ಆಟೋ ಚಾಲನೆ ಮಾಡುವವರು ಪಾಸ್ ಪಡೆಯುವುದು ಕಡ್ಡಾಯ. ಇದರಿಂದ ರಾತ್ರಿ ಅನಾಹುತವಾದರೆ ನಮಗೆ ಮಾಹಿತಿ ಸಿಗುತ್ತದೆ. ಸಂಚಾರ ಸೂಚನೆಗಳನ್ನು ಉಲ್ಲಂಘಿಸುವುದು, ಎಲ್ಲೆಂದರಲ್ಲಿ ಆಟೋ ನಿಲ್ಲಿಸುವುದು, ವೇಗವಾಗಿ ಚಾಲನೆ, ಹೆಚ್ಚಿನ ಸೌಂಡ್ ಬಳಸುವುದು, ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಆಟೋದಲ್ಲಿ ತುಂಬಿಕೊಂಡು ಹೋಗುವಂತಹ ವರ್ತನೆ ತಿದ್ದಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ಪ್ರೀಪೇಯ್ಡ್‌ (ಪೂರ್ವ ಪಾವತಿ) ಆಟೋ ಸಂಚಾರ ನಿಯಮ ಜಾರಿಗೆ ತರುವ ಆಲೋಚನೆ ಇದೆ. ಆಟೋ ಚಾಲಕರು ಇದಕ್ಕೆ ಸಹಕರಿಸಬೇಕು. ಪ್ರೀಪೇಯ್ಡ್ ನಿಯಮದಿಂದ ಪ್ರಯಾಣಿಕರು ಸಹ ಧೈರ್ಯವಾಗಿ ಸಂಚರಿಸಬಹುದು. ಚಾಲಕರಿಗೂ ಒಳ್ಳೆಯದಾಗುತ್ತದೆ. ಅಪರಾಧಗಳು, ಕಾನೂನು ಬಾಹಿರಕೃತ್ಯಗಳ ಬಗ್ಗೆ ಮಾಹಿತಿ ನೀಡುವ ಚಾಲಕರಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡಲು ಅವಕಾಶವಿದೆ. ಆಟೋ ಚಾಲಕರೂ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ನಿತ್ಯವೂ ನಗರದಲ್ಲಿ ಸಂಚರಿಸುವ ಆಟೋ ಚಾಲಕರು ಸಂಚಾರಿ ನಿಯಮ ಪಾಲಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಮಾರು 520 ಸಿಸಿ ಕ್ಯಾಮೆರಾಗಳಿದ್ದು, ನಿಮ್ಮ ಎಲ್ಲ ಚಲನವಲನಗಳನ್ನು ಗಮನಿಸುವ ಜೊತೆಗ ಮಾಹಿತಿ ಕಲೆ ಹಾಕುವ ಕೆಲಸ ಇಲಾಖೆ ಮಾಡುತ್ತದೆ. ಹಾಗಾಗಿ ಚಾಲಕರೂ ಸಂಚಾರ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ. ಪ್ರಕಾಶ, ಸಂಚಾರ ವೃತ್ತ ನಿರೀಕ್ಷಕ ಮಂಜುನಾಥ ನಲವಾಗಲು, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ಯೋಜನೆಯ ಡಿಜಿಎಂ ಐಟಿ ಮಮತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಟೋ ರಿಕ್ಷಾ ಚಾಲಕರು, ಮಾಲೀಕರು ಇದ್ದರು.

- - -

ಬಾಕ್ಸ್‌ * ವರ್ತನೆ ತಿದ್ದಿಕೊಳ್ಳಲು ಆಟೋ ಚಾಲಕರಿಗೆ ಸೂಚನೆ

- ಇನ್ನೂ 50 ಸಿಟಿ ಬಸ್‌ ಬಿಡಬೇಕಾದ್ರೂ, ನಿಮ್ಮ ಹೊಟ್ಟೆ ಮೇಲೆ ಹೊಡೆಯಲ್ಲ: ಡಿಸಿ ದಾವಣಗೆರೆ: ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಆಟೋ ನಿಲ್ದಾಣಗಳು ತಲೆ ಎತ್ತುತ್ತಿವೆ. ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಆರ್‌ಟಿಒ, ಸ್ಮಾರ್ಟ್ ಸಿಟಿ, ಸಂಚಾರ ಪೊಲೀಸ್ ಇಲಾಖೆ ಮತ್ತು ಆಟೋ ಚಾಲಕರ ನೇತೃತ್ವದಲ್ಲಿ ಸಮಿತಿ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸೂಚನೆ ನೀಡಿದರು.

ನಗರದಲ್ಲಿ ಇನ್ನೂ 50 ನಗರ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಇಳಿಸುವ ಉದ್ದೇಶವಿದೆ. ಆದರೆ, ಆಟೋ ರಿಕ್ಷಾ ಚಾಲಕರ ಹೊಟ್ಟೆ ಮೇಲೆ ಹೊಡೆಯಬಾರದು ಎಂಬ ಕಾರಣಕ್ಕಾಗಿಯೇ ಅಂತಹ ನಗರ ಸಾರಿಗೆ ಬಸ್‌ಗಳನ್ನು ಗ್ರಾಮೀಣ ಮಾರ್ಗದಲ್ಲಿ ಕಾರ್ಯಾಚರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಡಿಎಲ್ ಇಲ್ಲದ ಚಾಲಕರ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಆಟೋ ರಿಕ್ಷಾ ಚಾಲಕರಿಗಾಗಿ ಕೌಂಟರ್ ಮಾಡಿ ಮಧ್ಯವರ್ತಿಗಳ ತೊಂದರೆ ಇಲ್ಲದೇ ಡಿಎಲ್ ಮಾಡಿಕೊಡಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರ್‌ಟಿಒ ಅಧಿಕಾರಿಗೆ ಸೂಚನೆ ನೀಡಿದ್ದೇವೆ. ಕನ್ನಡ ಉಳಿದಿರುವುದು ಆಟೋ ಚಾಲಕರಿಂದ. ನಿಮ್ಮ ಬಗ್ಗೆ ಅಭಿಮಾನವಿದೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಡಿಸಿ ಭರವಸೆ ನೀಡಿದರು.

- - - -3ಕೆಡಿವಿಜಿ9:

ದಾವಣಗೆರೆಯಲ್ಲಿ ಡಿಸಿ ಜಿ.ಎಂ.ಗಂಗಾಧರ ಸ್ವಾಮಿ ಆಟೋ ರಿಕ್ಷಾ ಚಾಲಕರು, ಮಾಲೀಕರ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. -3ಕೆಡಿವಿಜಿ10, 11:

ದಾವಣಗೆರೆಯಲ್ಲಿ ಆಟೋ ರಿಕ್ಷಾ ಚಾಲಕರು, ಮಾಲೀಕರ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್‌ಪಿ ಉಮಾ ಪ್ರಶಾಂತ ಮಾತನಾಡಿದರು.

Share this article